ಧ್ರುವ ಸರ್ಜಾಗೆ ರಜನಿಕಾಂತ್ ಸವಾಲ್; ಖುದ್ದು ಖಚಿತಪಡಿಸಿದ ತಲೈವಾ!
ದೊಡ್ಡ ಸಿನಿಮಾಗಳ ಬಿಡುಗಡೆಗೆ ದಿನಾಂಕ ನಿಗದಿಪಡಿಸುವುದು ದೊಡ್ಡ ಸವಾಲೇ ಸರಿ. ಲಾಂಗ್ ವೀಕೆಂಡ್ ನೋಡಿ ಸಿನಿಮಾ ರಿಲೀಸ್ ಮಾಡಲು ಮೇಕರ್ಸ್ ಮುಂದಾಗುತ್ತಾರೆ. ಇನ್ನು ಹಬ್ಬದ ಹರಿದಿನ ಆದರೆ ಮತ್ತಷ್ಟು ಒಳ್ಳೆಯದು. ಜನರಿಗೆ ರಜೆ ಇರುತ್ತದೆ. ಹಾಗಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಇರುತ್ತದೆ.
ಐಪಿಎಲ್, ಎಲೆಕ್ಷನ್ ಬಳಿಕ ಈ ವರ್ಷ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಲಿ ಸಜ್ಜಾಗಿವೆ. ಅದೇ ಕಾರಣಕ್ಕೆ ಒಳ್ಳೆ ವೀಕೆಂಡ್ ಹುಡುಕಾಟ ನಡೆಯುತ್ತಿದೆ. ಗಣೇಶ ಹಬ್ಬ, ದಸರಾ, ದೀಪಾವಳಿ, ಕ್ರಿಸ್‌ಮಸ್ ಹೀಗೆ ಹಬ್ಬದ ದಿನಗಳಲ್ಲಿ ಸಿನಿಮಾಗಳ ಬಿಡುಗಡೆಗೆ ಮೇಕರ್ಸ್ ಕಣ್ಣಿಟ್ಟಿದ್ದಾರೆ. ಸಿನಿಮಾ ಫಸ್ಟ್ ಕಾಲಿ, ಪ್ರಮೋಷನ್ ಎಲ್ಲದ್ದಕ್ಕೂ ಪ್ಲ್ಯಾನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಾರೆ.

ದಸರಾ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ 'ದೇವರ' ಚಿತ್ರತಂಡ ಘೋಷಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಕ್ಟೋಭರ್ 10ಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ. ಅದರ ಮರುದಿನವೇ ಕನ್ನಡದ 'ಮಾರ್ಟಿನ್' ಸಿನಿಮಾ ಬಿಡುಗಡೆ ಎಂದು ಚಿತ್ರತಂಡ ಹೇಳಿತು. ಹಾಗಾಗಿ ಬಾಕ್ಸಾಫೀಸ್‌ನಲ್ಲಿ 'ದೇವರ' ವರ್ಸಸ್ 'ಮಾರ್ಟಿನ್' ಫೈಟ್ ಎಂದು ಕೆಲವರು ಫಿಕ್ಸ್ ಆಗಿದ್ದರು. ಅಚ್ಚರಿ ಎನ್ನುವಂತೆ ಈ ಫೈಟ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಟ್ಟಿದ್ದಾರೆ.
ಹೌದು ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಚಿತ್ರವನ್ನು ದಸರಾ ಸಂಭ್ರಮದಲ್ಲಿ ಬಿಡುಗಡೆ ಮಾಡುವುದಾಗಿ ಖುದ್ದು ರಜನಿಕಾಂತ್ ಹೇಳಿದ್ದಾರೆ. ಹಿಮಾಲಯಕ್ಕೆ ತಲೈವಾ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಯೋಗಿಗಳ ಜೊತೆ ಮಾತನಾಡುತ್ತಾ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ಕೊಟ್ಟಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ 'ವೆಟ್ಟೆಯಾನ್' ಚಿತ್ರದಲ್ಲಿ ನಟಿಸ್ತಿದ್ದೀನಿ, ದಸರಾ ಸಂಭ್ರಮದಲ್ಲಿ ಬಿಡುಗಡೆ ಆಗುತ್ತದೆ. ನನ್ನ ಭಾಗದ ಚಿತ್ರೀಕರಣ ಮುಗಿದಿದೆ. ಇನ್ನುಳಿದ ಕಲಾವಿದರ ಭಾಗದ ಶೂಟಿಂಗ್ ನಡೀತಿದೆ. ಅಕ್ಟೋಬರ್ 10ಕ್ಕೆ ಸಿನಿಮಾ ರಿಲೀಸ್" ಎಂದಿದ್ದಾರೆ.
"ಇನ್ನು ಜೂನ್ 10ರಿಂದ ನಾನು ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ" ಎಂದು ತಲೈವಾ ಹೇಳಿದ್ದಾರೆ. 'ವೆಟ್ಟೆಯಾನ್' ಸಿನಿಮಾ ರಿಲೀಸ್ ಬಗ್ಗೆ ರಜನಿಕಾಂತ್ ಮಾತನಾಡುತ್ತಿದ್ದಂತೆ 'ದೇವರ' ಸಿನಿಮಾ ರಿಲೀಸ್ ಪ್ರೀಪೋನ್ ಮಾಡುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಸೆಪ್ಟೆಂಬರ್ 27ಕ್ಕೆ 'ದೇವರ' ರಿಲೀಸ್ ಆಗಬಹುದು ಎನ್ನಲಾಗ್ತಿದೆ.

ಹಬ್ಬದ ಸಂಭ್ರಮದಲ್ಲಿ ಒಂದಲ್ಲ ಎರಡು ಸಿನಿಮಾ ಬಂದರೆ ಸಮಸ್ಯೆ ಏನಿಲ್ಲ. ಎರಡೂ ಸಿನಿಮಾಗಳು ಚೆನ್ನಾಗಿದ್ದರೆ ಜನ ಎರಡನ್ನೂ ನೋಡುತ್ತಾರೆ. ಹಾಗಂತ ಹಬ್ಬದ ವೀಕೆಂಡ್ ಮಿಸ್ ಮಾಡಿಕೊಳ್ಳುವುದು ತಪ್ಪು ಎನ್ನುವ ವಾದವೂ ಚಿತ್ರರಂಗದಲ್ಲಿದೆ. ಹಾಗಾಗಿ 'ವೆಟ್ಟೆಯಾನ್' ಎದುರು 'ದೇವರ' ಹಾಗೂ 'ಮಾರ್ಟಿನ್' ಸಿನಿಮಾಗಳು ಬಂದರೂ ಅಚ್ಚರಿಪಡಬೇಕಿಲ್ಲ. ಅಥವಾ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರಿ ರಿಲೀಸ್ ಡೇಟ್ ಬದಲಾದರೂ ಆಗಬಹುದು.
'ಮಾರ್ಟಿನ್' ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಉದಯ್ ಕೆ ಮೆಹ್ತಾ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಚಿತ್ರ ಕೂಡ ಕುತೂಹಲ ಮೂಡಿಸಿದೆ. ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್ ಚಿತ್ರದ ತಾರಾಗಣದಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.
'ದೇವರ' ಚಿತ್ರವನ್ನು ಕೊರಟಾಲ ಶಿವ 2 ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈಗಾಗಲೇ ಚಿತ್ರದ ಗ್ಲಿಂಪ್ಸ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.


Click it and Unblock the Notifications











