ಮಂಗಳೂರಿಗೆ ಬಂದಿಳಿದ ರಜನಿಕಾಂತ್; ಶಿವಣ್ಣನ ಜೊತೆ 'ಜೈಲರ್' ಚಿತ್ರದ ಕ್ರೂಷಿಯಲ್ ಸೀಕ್ವೆನ್ಸ್ ಶೂಟಿಂಗ್
ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಬಂದಿಳಿದಿದ್ದಾರೆ. 2 ದಿನಗಳ ಕಾಲ ಅಲ್ಲಿ 'ಜೈಲರ್' ಸಿನಿಮಾ ಚಿತ್ರೀಕರಣ ನಡೆಯಲಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ರಜನಿಕಾಂತ್ ನಟನೆಯ ಸಾಕಷ್ಟು ಸಿನಿಮಾಗಳ ಶೂಟಿಂಗ್ ಕರ್ನಾಟಕದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ತಲೈವಾಗೆ ಕರ್ನಾಟಕ ಅಂದರೆ ಬಹಳ ಅಚ್ಚುಮೆಚ್ಚು. 'ಜೈಲರ್' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸ್ತಿದ್ದಾರೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಎನ್ನುವ ಪಾತ್ರದಲ್ಲಿ ತಲೈವಾ ಅಬ್ಬರಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ನಿನ್ನೆ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಜನಿಕಾಂತ್ ಬಂದಿಳಿದರು. ರಾತ್ರಿ 9ಗಂಟೆ ವೇಳೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಅಭಿಮಾನಿಗಳತ್ತ ಕೈ ಬೀಸಿದರು. ಆ ಬಳಿಕ ಕಾರಿನಲ್ಲಿ ಅವರು ತೆರಳಿದ್ದಾರೆ.

ಪಿಲಿಕುಳದಲ್ಲಿ ಚಿತ್ರೀಕರಣ
'ಜೈಲರ್' ಸಿನಿಮಾ ಚಿತ್ರೀಕರಣಕ್ಕೆಂದು ತಲೈವಾ ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಆಗಮಿಸಿದ್ದರೆನ್ನಲಾಗಿದೆ. ಕರಾವಳಿಯಲ್ಲಿ ಎರಡು ದಿನಗಳ ಸಿನಿಮಾ ಶೂಟಿಂಗ್‌ನಲ್ಲಿ ಅವರು ಭಾಗವಹಿಸಲಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು,ಇಂದು ಅವರು ಚಿತ್ರೀಕರಣ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸೂಪರ್ ಸ್ಟಾರ್ 169ನೇ ಸಿನಿಮಾ
ಎರಡು ದಿನಗಳ ಕಾಲ ಪಿಲಿಕುಳದ ಗುತ್ತುಮನೆಯಲ್ಲಿ 'ಜೈಲರ್' ಸಿನಿಮಾ ಚಿತ್ರೀಕರಣ ನಡೆಯಲಿದ್ದು, ಚಿತ್ರೀಕರಣ ನಡೆಯುವ ಗುತ್ತುಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಚಿತ್ರತಂಡ ಹೊರತು ಪಡಿಸಿ ಹೊರಗಿನವರಿಗೆ ಪ್ರವೇಶಕ್ಕೆ ಅನುಮತಿ ಇಲ್ಲ. ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣವನ್ನು ಇಲ್ಲಿ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಇದು ರಜನಿಕಾಂತ್ ನಟನೆಯ 169ನೇ ಸಿನಿಮಾ ಆಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಕೆಲ ದಿನಗಳ ಹಿಂದೆ ರಾಜಕೀಯರಂಗಕ್ಕೆ ಧುಮುಕುವುದಾಗಿ ತಲೈವಾ ಹೇಳಿದ್ದರು. 'ಅಣ್ಣಾತ್ತೆ' ನಂತರ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗ್ತಿತ್ತು. ಆದರೆ ರಾಜಕೀಯ ಸೇರುವ ನಿರ್ಧಾರದಿಂದ ಹಿಂದೆ ಸರಿದ ರಜನಿಕಾಂತ್ ಸಿನಿಮಾಗಳಲ್ಲಿ ಮುಂದುವರೆದಿದ್ದಾರೆ.

ಕುತೂಹಲ ಕೆರಳಿಸಿದ ಸಿನಿಮಾ
ನೆಲ್ಸನ್ ನಿರ್ದೇಶನದ 'ಬೀಸ್ಟ್' ಸಿನಿಮಾ ಕಳೆದ ವರ್ಷ ಸೋಲುಂಡಿತ್ತು. ಆದರೆ ರಜನಿಕಾಂತ್ ಮಾತ್ರ ನೆಲ್ಸನ್ ಹೇಳಿದ ಕಥೆ ಕೇಳಿ ಒಪ್ಪಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ತಮನ್ನಾ, ಜಾಕಿಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಸಿನಿಮಾಟೋಗ್ರಫಿ, ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕಿದೆ.

ಕನ್ನಡ ಪ್ರೇಕ್ಷಕರಲ್ಲೂ ನಿರೀಕ್ಷೆ
ರಜನಿಕಾಂತ್ ಜೊತೆಗೆ ಶಿವರಾಜ್‌ಕುಮಾರ್ ನಟಿಸುತ್ತಿರುವುದರಿಂದ ಸಹಜವಾಗಿಯೇ ಸ್ಯಾಂಡಲ್‌ವುಡ್‌ನಲ್ಲೂ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇದೇ ಮೊದಲ ಬಾರಿಗೆ ತಮಿಳು ಚಿತ್ರಕ್ಕೆ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಇನ್ನು 'ಜೈಲರ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ರಜನಿಕಾಂತ್ ಹಾಗೂ ಶಿವಣ್ಣನನ್ನು ಒಂದೇ ಫ್ರೇಮ್‌ನಲ್ಲಿ ನೋಡಲು ಕನ್ನಡ ಸಿನಿರಸಿಕರು ಕೂಡ ಕಾತರರಾಗಿದ್ದಾರೆ. ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.


Click it and Unblock the Notifications











