Rajinikanth: ರಾಘವೇಂದ್ರ ಮಠದಲ್ಲಿ ರಜನಿ ಕರಾಮತ್ತು: ತಲೈವಾ ಮಂಗಳಾರತಿ ತಟ್ಟೆಗೆ ದಕ್ಷಿಣೆ ಹಾಕಿದ ಸ್ಟೈಲ್ ವೈರಲ್
ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಸರಳ, ಸಜ್ಜನ ವ್ಯಕ್ತಿತ್ವದಿಂದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಎಷ್ಟೇ ಎತ್ತರಕ್ಕೆ ಏರಿದರೂ ತಲೈವಾ ಹಳೆಯದನ್ನು ಮರೆತ್ತಿಲ್ಲ. 'ಜೈಲರ್' ಸಿನಿಮಾದಿಂದ ಮತ್ತೊಮ್ಮೆ ರಜನಿಕಾಂತ್ ತಮ್ಮ ತಾಕತ್ತು ಸಾಬೀತು ಮಾಡಿ ತೋರಿಸಿದ್ದಾರೆ. ವಯಸ್ಸು 70 ದಾಟಿದರೂ ಸೂಪರ್ ಸ್ಟಾರ್ ಸ್ಟೈಲ್‌ಗೆ ಇನ್ನು 20ರ ಹರೆಯ.
ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಂಭಾವನೆ, ಲಾಭದಲ್ಲಿ ಪಾಲು ಸೇರಿದಂತೆ ಈ ಚಿತ್ರದಿಂದ ಒಟ್ಟಾರೆಯಾಗಿ ತಲೈವಾಗೆ 200 ಕೋಟಿ ರೂ. ವರಮಾನ ಬಂದಿದೆ ಎನ್ನಲಾಗುತ್ತಿದೆ. ಸದ್ಯ ಮತ್ತೆರಡು ಸಿನಿಮಾಗಳಲ್ಲಿ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಲೈವಾ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರು.

ಕಾರ್ಯಕ್ರಮ ನಿಮಿತ್ತ ದೇವನಹಳ್ಳಿಗೆ ಬಂದಿದ್ದ ರಜನಿಕಾಂತ್ ದಿಢೀರನೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. ಸ್ನೇಹಿತ ರಾಜ್ ಬಹದ್ದೂರ್ ಜೊತೆ ಚಾಮರಾಜಪೇಟೆ, ಜಯನಗರ, ಗಾಂಧಿ ಬಜಾರ್‌ನಲ್ಲಿ ಸುತ್ತಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಜಯನಗರದ ಬಸ್ ಡಿಪೋಗೆ ಭೇಟಿ ನೀಡಿ ಕೆಲವೊತ್ತು ಕಾಲ ಕಾಳೆದಿದ್ದು ಭಾರೀ ವಿಶೇಷವಾಗಿತ್ತು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ದಶಕಗಳ ಹಿಂದೆ 2 ವರ್ಷಗಳ ಕಾಲ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮಾರ್ಕೆಟ್‌ನಿಂದ ಶ್ರೀನಗರಕ್ಕೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಕೆಲಸ ನಿರ್ವಹಿಸಿದ್ದರು. ಆಗ ಜಯನಗರ ಬಸ್ ಡಿಪೋದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಹಾಗಾಗಿ ಬೆಂಗಳೂರಿಗೆ ಬಂದ ಕೂಡಲೇ ಅಲ್ಲಿಗೆ ತೆರಳಿ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದರು.
ಅದಕ್ಕೂ ಮುನ್ ಚಾಮರಾಜಪೇಟೆಯ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ರಾಯರ ಪರಮಭಕ್ತರಾದ ರಜನಿಕಾಂತ್ ಚಿಕ್ಕಂದಿನಿಂದಲೂ ಆ ಮಠಕ್ಕೆ ಹೋಗುತ್ತಿದ್ದರು. ರಾಯರ ಕೃಪೆಯಿಂದಲೇ ತಮಗೆ ಯಶಸ್ಸು ಸಿಕ್ಕಿದಾಗಿ ನಂಬುತ್ತಾರೆ. ಮಠದಲ್ಲಿ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದರು. ರಜನಿಕಾಂತ್ ಅಂದು ಪೂಜೆ ವೇಳೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ಹಾಕಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.
ರಜನಿಕಾಂತ್ ಸ್ಟೈಲ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಚಿಕ್ಕಂದಿನಿಂದ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದ ಶಿವಾಜಿ ಸಿನಿಮಾ ಹೀರೊಗಳ ಸ್ಟೈಲ್ ಅನುಕರಣೆ ಮಾಡುತ್ತಿದ್ದರು. ಅದರ ಜೊತೆ ಜೊತೆಗೆ ತಮ್ಮದೇ ವಿಭಿನ್ನ ಸ್ಟೈಲ್ ರೂಢಿಸಿಕೊಂಡರು. ತೆರೆಮೇಲೆ ಮಾತ್ರವಲ್ಲ ಕೆಲವೊಮ್ಮೆ ನಿಜಜೀವನದಲ್ಲೂ ಆ ಸ್ಟೈಲ್ ಮೂಲಕ ರಜನಿಕಾಂತ್ ಎಲ್ಲರನ್ನು ಬೆರಗಾಗಿಸುತ್ತಾರೆ. ಅಂದು ಮಠದಲ್ಲಿ ಮಂಗಳಾರತಿ ತಟ್ಟೆಗೆ ತಲೈವಾ ದಕ್ಷಿಣೆ ಹಾಕಿದ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಶರ್ಟ್ ಅಥವಾ ಪ್ಯಾಂಟ್ ಜೇಬಿನಿಂದ ಹಣ ತೆಗೆದು ಮಂಗಳಾರತಿ ತಟ್ಟೆಗೆ ಎಲ್ಲರೂ ದಕ್ಷಿಣೆ ಹಾಕುತ್ತಾರೆ. ಆದರೆ ಅಂದು ತಲೈವಾ ತಮ್ಮ ಮಡಚಿದ ಶರ್ಟ್ ಕೈಯಿಂದ ಹಣ ತೆಗೆದು ತಟ್ಟೆಗೆ ಹಾಕಿದ್ದರು. ಅಂದು ಆ ವಿಡಿಯೋ ಯಾರು ಸರಿಯಾಗಿ ಗಮನಿಸಿರಲಿಲ್ಲ. ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬಿಳಿ ಬಣ್ಣದ ಉದ್ದ ಕೈ ಅಂಗಿ ಹಾಗೈ ಬಿಳಿ ಪಂಚೆ ತೊಟ್ಟು ರಜನಿಕಾಂತ್ ಬೆಂಗಳೂರಿಗೆ ಬಂದಿದ್ದರು. ಶರ್ಟ್ ತೋಳನ್ನು ಮುಂದೆ ಕೊಂಚ ಮಡಚಿದ್ದರು. ಅದರಲ್ಲಿ ಹಣ ಇಟ್ಟುಕೊಂಡಿದ್ದರು. ಪೂಜಾರಿ ಮಂಗಳಾರತಿ ತಟ್ಟೆಯಿಂದ ಮುಂದೆ ಹಿಡಿದಾಗ ಅದರಿಂದ ಹಣ ತೆಗೆದು ದಕ್ಷಿಣೆ ಹಾಕಿದ್ದರು. ರಜನಿಕಾಂತ್ ಮಾತ್ರ ಇಂತಹದನ್ನೆಲ್ಲಾ ಮಾಡಬಲ್ಲರು ಎಂದು ಅಭಿಮಾನಿಗಳು ಈ ವಿಡಿಯೋ ವೈರಲ್ ಮಾಡಿದ್ದಾರೆ.


Click it and Unblock the Notifications











