'ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು'; ಕಾಂತಾರ ನೋಡಿದ ರಜನಿಕಾಂತ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು
ಸೆಪ್ಟೆಂಬರ್ 30ರ ಶುಕ್ರವಾರದಂದು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ 3 ವಾರಗಳನ್ನು ಪೂರೈಸಿ ಯಶಸ್ವಿಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಾಂತಾರ ಈಗಾಗಲೇ ಎಲ್ಲ ಭಾಷೆಯೂ ಸೇರಿದಂತೆ 200 ಕೋಟಿ ಕ್ಲಬ್ ಸೇರಿದ್ದು ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವತ್ತ ಚಿತ್ತ ನೆಟ್ಟಿದೆ.
ಇನ್ನು ಮೊದಲ 3 ವಾರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಕಾಂತಾರ ಚಿತ್ರಕ್ಕೆ ಮುಂಬರುವ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ರಜಾದಿನಗಳು ಮತ್ತಷ್ಟು ಕಲೆಕ್ಷನ್ ಮಾಡುವುದಕ್ಕೆ ಅನುವು ಮಾಡಿಕೊಡಲಿವೆ. ಇನ್ನು ವಾರಾಂತ್ಯದ ರಜಾ ದಿನಗಳು ಮಾತ್ರವಲ್ಲದೇ ರಜಾ ರಹಿತ ದಿನಗಳಲ್ಲಿಯೂ ಸಹ ಕಾಂತಾರ ಅಬ್ಬರ ಅಷ್ಟಿಷ್ಟಲ್ಲ. ಶಾಲಾ ಕಾಲೇಜು ಮತ್ತು ಕಚೇರಿಗಳು ಇರುವ ದಿನ ಕೂಡ ಕಾಂತಾರ ಚಿತ್ರ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೇ ರೀಚ್ ವಿಚಾರದಲ್ಲಿಯೂ ಸಹ ಕಾಂತಾರ ಅಬ್ಬರಿಸಿದೆ. ಕನ್ನಡದ ಕಲಾವಿದರು ಮಾತ್ರವಲ್ಲದೆ ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಹಲವಾರು ನಟ ನಿರ್ದೇಶಕ ನಿರ್ಮಾಪಕರು ಕಾಂತಾರ ಚಿತ್ರ ವೀಕ್ಷಿಸಿ ಜೈ ಎಂದಿದ್ದರು. ಈ ಸಾಲಿಗೆ ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ಕೂಡ ಸೇರ್ಪಡೆಗೊಂಡಿದ್ದಾರೆ.

ಕಾಂತಾರ ವೀಕ್ಷಿಸಿದ ರಜನಿಕಾಂತ್ ಹೇಳಿದಿಷ್ಟು
ಕಾಂತಾರ ಚಿತ್ರ ವೀಕ್ಷಿಸಿದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಜನಿಕಾಂತ್ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರಕ್ಕಿಂತ ಬೇರೆ ಯಾರೂ ಸಹ ಸಿನಿಮಾ ಮೂಲಕ ಅಚ್ಚುಕಟ್ಟಾಗಿ ತೋರಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿಯನ್ನು ಕೊಂಡಾಡಿದ ತಲೈವಾ
ಹೀಗೆ ಕಾಂತಾರ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ರಜನಿಕಾಂತ್ ರಿಷಬ್ ಶೆಟ್ಟಿ ಗೂಸ್ ಬಂಪ್ಸ್ ನೀಡಿದರು ಎಂದಿದ್ದಾರೆ. ಬರಹಗಾರನಾಗಿ, ನಿರ್ದೇಶಕನಾಗಿ ಹಾಗೂ ನಟನಾಗಿ ಕೆಲಸ ನಿರ್ವಹಿಸಿರುವ ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸ್ ಆಫ್ ಎಂದು ಬರೆದುಕೊಳ್ಳುವ ಮೂಲಕ ರಜಿನಿಕಾಂತ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಕಾಂತಾರ ಭಾರತ ಚಿತ್ರರಂಗದ ಮಾಸ್ಟರ್ ಪೀಸ್
ತಾವು ಮಾಡಿರುವ ಟ್ವೀಟ್ ಕೊನೆಯಲ್ಲಿ ಕಾಂತಾರ ಚಿತ್ರತಂಡಕ್ಕೆ ಶುಭ ಕೋರಿರುವ ರಜನಿಕಾಂತ್ ಕಾಂತಾರ ಚಿತ್ರ ಭಾರತ ಚಿತ್ರರಂಗದ ಮಾಸ್ಟರ್ ಪೀಸ್ ಎಂದಿದ್ದಾರೆ. ಭಾರತ ಚಿತ್ರರಂಗದ ಈ ಮಾಸ್ಟರ್ ಪೀಸ್ ಚಿತ್ರದ ಹಿಂದೆ ಕೆಲಸ ನಿರ್ವಹಿಸಿರುವ ಎಲ್ಲರಿಗೂ ಅಭಿನಂದನೆಗಳು ಎಂದು ರಜನಿ ಕಾಂತ್ ಬರೆದುಕೊಂಡಿದ್ದಾರೆ.

ಅನುಷ್ಕಾ, ಪೂಜಾ ಹೆಗ್ಡೆಯಿಂದಲೂ ಮೆಚ್ಚುಗೆ
ಇನ್ನು ಕಾಂತಾರ ಚಿತ್ರವನ್ನು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ಸಹ ವೀಕ್ಷಿಸಿ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಲಿವುಡ್ ಚಿತ್ರರಂಗದ ಶಿಲ್ಪಾ ಶೆಟ್ಟಿ ಹಾಗೂ ಕಂಗನಾ ರನೌತ್ ಕೂಡ ಕಾಂತಾರ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊಗಳಿದ್ದರು. ಇನ್ನುಳಿದಂತೆ ದಕ್ಷಿಣ ಭಾರತ ಚಿತ್ರರಂಗದ ಧನುಷ್, ಪ್ರಭಾಸ್, ಕಿಚ್ಚ ಸುದೀಪ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವಾರು ನಟರು ಕಾಂತಾರ ಚಿತ್ರವನ್ನು ವೀಕ್ಷಿಸಿ ಫಿದಾ ಆಗಿದ್ದರು. ಹೀಗೆ ಕಾಂತಾರ ಚಿತ್ರ ಕೇವಲ ಸಿನಿ ಪ್ರೇಕ್ಷಕರಿಂದ ಮಾತ್ರವಲ್ಲದೆ ತಾರೆಗಳಿಂದಲೂ ಸಹ ಮೆಚ್ಚುಗೆ ಪಡೆದುಕೊಂಡಿದೆ.


Click it and Unblock the Notifications











