ಅವತ್ತು ಯಾರೂ ನನ್ನ ಕಡೆ ತಿರುಗಿ ನೋಡ್ಲಿಲ್ಲ, ನನ್ನ ಈಗೋ ಸತ್ತು ಹೋಯ್ತು; ರಜನಿಕಾಂತ್
ರಜನಿಕಾಂತ್ ಸ್ಟಾರ್ ನಟ ಮಾತ್ರವಲ್ಲ, ಆಳವಾದ ಆಧ್ಯಾತ್ಮಿಕ ಚಿಂತನೆಯುಳ್ಳವರು. ಆಗಾಗ್ಗೆ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ. ಧ್ಯಾನ, ಯೋಗ ಮಾಡುವುದು ಸಚ್ಚಿದಾನಂದ ಗುರುಗಳನ್ನು ಅವರು ಅನುಸರಿಸುತ್ತಾರೆ. 3 ವರ್ಷಗಳ ಹಿಂದೆ ಫ್ಯಾಮಿಲಿ ಸಮೇತ ತಲೈವಾ ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಇದೀಗ ಮತ್ತೆ ಅಲ್ಲಿಗೆ ಭೇಟಿ ನೀಡಿ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಜನಿಕಾಂತ್ ಕನ್ನಡ ಕೂಡ ಮಾತನಾಡುತ್ತಾರೆ. ಆದರೆ ಕಳೆದ 52 ವರ್ಷಗಳಿಂದ ನಾನು ಚೆನ್ನೈನಲ್ಲೇ ಇದ್ದೀನಿ. ಅಲ್ಲಿ ಕನ್ನಡ ಮಾತನಾಡುವವರು ಸಿಗಲ್ಲ. ಹಾಗಾಗಿ ಕನ್ನಡ ಮಾತನಾಡುವ ಟಚ್ ಹೋಗಿಬಿಟ್ಟಿದೆ ಎಂದು ರಜನಿಕಾಂತ್ ಹೇಳಿದ್ದಾರೆ. ರವಿಶಂಕರ ಗುರುಜೀ ಜನ್ಮದಿನದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ನಿನ್ನೆ(ಮೇ 12) ಸಂಜೆ ನಡೆದ ವಿಶ್ವಮಟ್ಟದ ಧ್ಯಾನ ಮತ್ತು ಸತ್ಸಂಗದಲ್ಲಿ ರಜನಿಕಾಂತ್ ಭಾಗವಹಿಸಿ ಮಾತನಾಡಿದ್ದಾರೆ. ಕನ್ನಡವನ್ನು ಬೆರಸಿ ಇಂಗ್ಲೀಷ್‌ನಲ್ಲಿ ಅವರು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ರವಿಶಂಕರ್ ಗುರೂಜಿ ಜೊತೆಗಿನ ಒಡನಾಟದ ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ. ಕೆಲ ವರ್ಷಗಳಿಂದ ನನಗೆ ಗುರೂಜಿ ಗೊತ್ತು. ಅದಕ್ಕೂ ಮುನ್ನ ಫೋಟೊ, ಟಿವಿಯಲ್ಲಿ ಅವರನ್ನು ನೋಡಿದೆ. 3 ವರ್ಷಗಳ ಹಿಂದೆ ಒಮ್ಮೆ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿ ಆಗಿದ್ದೆ. ಅವರ ನಿಷ್ಕಲ್ಮಶ ನಗು ನನ್ನನ್ನು ಸೆಳೆಯಿತು. ಬಳಿಕ ಆಶ್ರಮಕ್ಕೆ ಬರಲು ಹೇಳಿದರು. ಒಂದೆರಡು ದಿನ ಇದ್ದು ಹೋಗಲು ಬಂದ ನಾನು ಇಲ್ಲಿನ ವಾತಾವರಣ ನೋಡಿ 15 ದಿನ ಉಳಿದುಕೊಂಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಈಗೋ ಅವತ್ತು ಸತ್ತು ಹೋಯ್ತು ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ಮಾತನಾಡಿ "ಮೂರು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ ರವಿಶಂಕರ್ ಗುರೂಜಿ ನನ್ನ ಒಮ್ಮೆ ಆಶ್ರಮದಲ್ಲಿ ಭಕ್ತರನ್ನು ಭೇಟಿಗೆ ಹೋಗ್ತಿದ್ದೀನಿ ಬಾ ಎಂದು ಕರೆದ್ರು. ನಾನು ಬೇಡ ಗುರೂಜಿ, ನಾನು ಬಂದ್ರೆ ವಿನಾಕಾರಣ ಜನ ಮುತ್ತಿಕೊಳ್ಳುತ್ತಾರೆ. ಫೋಟೊ, ಆಟೋಗ್ರಾಫ್ ಅಂತ ಮುಗಿಬೀಳ್ತಾರೆ. ನಿಮಗೆ ಡಿಸ್ಟರ್ಬ್ ಆಗುತ್ತೆ. ಕೆಲ ತಮಿಳು ಜನರು ಇಲ್ಲಿ ಇರ್ತಾರೆ ಬೇಡ ಎಂದೆ. ಪರವಾಗಿಲ್ಲ ಬನ್ನಿ ಎಂದು ಕರೆದ್ರು.. ನಾನು ಆತಂಕದಲ್ಲೇ ಹೋದೆ. ನಿಜ ಹೇಳ್ತೀನಿ.. ಅವತ್ತು ಯಾರೊಬ್ಬರು ನನ್ನ ಕಡೆ ತಿರುಗಿ ನೋಡಲಿಲ್ಲ. ನಾನು ಕೈ ಬೀಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ನಾನು ಸಾಕಷ್ಟು ಗಣ್ಯರನ್ನು ಭೇಟಿ ಮಾಡಿದ್ದೀನಿ, ಆದ್ರೆ ಈ ವಿಚಾರ ನನ್ನ ಈಗೋ ಅಳಿಸಿ ಹಾಕಿಬಿಡ್ತು. ಕೊನೆಗೆ ಗುರೂಜಿ ಡಿಸ್ಟರ್ಬ್ ಆಗ್ಲಿಲ್ಲ ಅಲ್ವಾ? ಅಂದ್ರು.. ನನ್ನ ತಲೆಯಲ್ಲಿ ಡಿಸ್ಟರ್ಬ್ ಆಗೋಗಿತ್ತು.." ಎಂದು ನಕ್ಕಿದ್ದಾರೆ.
ಆಧ್ಯಾತ್ಮದ ಶಕ್ತಿ ಅದು.. ಸ್ಟಾರ್‌ಡಮ್ ಬರುತ್ತೆ ಹೋಗುತ್ತೆ.. ಆದ್ರೆ ಗುರೂಜಿ ಸ್ಟಾರ್‌ಡಮ್ ಯಾವಾಗಲೂ ಕಮ್ಮಿ ಆಗಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. 'ಮಾನವ ಜನ್ಮ ದೊಡ್ಡದ್ದು ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ' ಎಂದು ಪುರಂದರ ದಾಸರ ಕೀರ್ತನೆ ಸಾಲುಗಳನ್ನು ರಜನಿಕಾಂತ್ ಹೇಳಿದ್ದಾರೆ. ಮನುಷ್ಯ ಜನ್ಮ ಶ್ರೇಷ್ಠ. ಎಲ್ಲಾ ಸಿಕ್ಕಾಗ ಒಳ್ಳೆ ಜೀವನ ಸಾಗಿಸುವುದು ಕಷ್ಟ. ಒಳ್ಳೆ ಗುರು ಸಿಕ್ಕಾಗ ಒಳ್ಳೆಯದು ನಡೆಯುತ್ತದೆ. 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂದು ಪುರಂದರ ದಾಸರ ಮತ್ತೊಂದು ಕೀರ್ತನೆ ಸಾಲನ್ನು ತಲೈವಾ ಹೇಳಿದ್ದಾರೆ. ತಮ್ಮ ವಿಶಿಷ್ಠ ಮಾತಿನ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ರಜನಿಕಾಂತ್ ಮಾತು ವೈರಲ್ ಆಗ್ತಿದೆ.


Click it and Unblock the Notifications