Coolie vs War-2: 'ಕೂಲಿ' ಎದುರು 'ವಾರ್-2' ಠುಸ್ ಪಟಾಕಿ; ಅಡ್ವಾನ್ಸ್ ಬುಕ್ಕಿಂಗ್ ಟ್ರೆಂಡ್ ಹೇಗಿದೆ?
ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ. ಈ ವರ್ಷ ತಮಿಳಿನ 'ಕೂಲಿ' ಹಾಗೂ ಬಾಲಿವುಡ್ 'ವಾರ್-2' ಚಿತ್ರಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಎರಡೂ ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ರಜನಿಕಾಂತ್ ಕ್ರೇಜ್ ಎದುರು ಹೃತಿಕ್- ತಾರಕ್ ಥಂಡಾ ಹೊಡೆದಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ನಟಿಸಿರುವುದು ಬಲ ತುಂಬಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಿಸಿದೆ. ಲೋಕೇಶ್- ರಜನಿಕಾಂತ್ ಕಾಂಬಿನೇಷನ್ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಅನಿರುದ್ದ್ ಮ್ಯೂಸಿಕ್ ಮತ್ತಷ್ಟು ಹವಾ ಸೃಷ್ಟಿಸಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಅದಕ್ಕೆ ತಕ್ಕಂತೆ ಬುಕ್ಕಿಂಗ್ ಜೋರಾಗಿದೆ.

'ವಾರ್- 2' ಕೂಡ ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರದಲ್ಲಿ ಹೃತಿಕ್ ಎದುರು ತೆಲುಗು ನಟ ಜ್ಯೂ. ಎನ್‌ಟಿಆರ್ ಬಣ್ಣ ಹಚ್ಚಿದ್ದಾರೆ. ಹಾಗಾಗಿ ದಕ್ಷಿಣದಲ್ಲಿ ಕೂಡ ಸಿನಿಮಾ ಕುತೂಹಲ ಮೂಡಿಸಿದೆ. ಆದರೆ ಚಿತ್ರದ ಟ್ರೈಲರ್, ಸಾಂಗ್ಸ್ ಯಾವ್ದು ಪ್ರೇಕ್ಷಕರ ಮನ ಗೆಲ್ಲಲಿಲ್ಲ. ಸ್ಯಾಂಪಲ್ ನೋಡಿದರೆ ಮತ್ತೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಎನ್ನುವುದು ಬಿಟ್ಟರೆ ಹೊಸತೇನು ಕಾಣುತ್ತಿಲ್ಲ. ಉತ್ತರದಲ್ಲಿ 'ವಾರ್-2' ಹಾಗೂ ದಕ್ಷಿಣದಲ್ಲಿ 'ಕೂಲಿ' ಸಿನಿಮಾ ದರ್ಬಾರ್ ಜೋರಾಗಿರುತ್ತದೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಸದ್ಯದ ಟ್ರೆಂಡ್ ನೋಡುತ್ತಿದ್ದರೆ 'ವಾರ್' ಕೂಲಿ ಸೈಡ್ ಆಗಿಬಿಡುವಂತಿದೆ.
'ಕೂಲಿ' ಚಿತ್ರದಲ್ಲಿ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಬಾಲಿವುಡ್ ಪ್ರೇಕ್ಷಕರನ್ನು ಸಿನಿಮಾ ಸೆಳೆಯುವ ಸುಳಿವು ಸಿಕ್ಕಿದೆ. ತಿಂಗಳಿಗೂ ಮುನ್ನ ವಿದೇಶಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ಎಲ್ಲಾ ಕಡೆ 'ಕೂಲಿ' ಆರ್ಭಟವೇ ಜೋರಾಗಿದೆ. ಇದೀಗ ಭಾರತದಲ್ಲಿ ಕೂಡ ಆಯ್ದ ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ನಡೀತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನಷ್ಟೆ ಬುಕ್ಕಿಂಗ್ ಶುರುವಾಗಬೇಕಿದೆ. ಸದ್ಯಕ್ಕೆ 'ಕೂಲಿ' ಸಿನಿಮಾ ಬುಕ್ಕಿಂಗ್ ಅದ್ಭುತವಾಗಿದೆ.

ಆಗಸ್ಟ್ 11ರ ಮಧ್ಯಾಹ್ನ 12 ಗಂಟೆ ವೇಳೆಗೆ 'ಕೂಲಿ' ಚಿತ್ರ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಅಂದಾಜು 72 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದರೆ 'ವಾರ್- 2' ಚಿತ್ರ ಕೇವಲ 11 ಕೋಟಿ ರೂ. ಮಾತ್ರ ಗಳಿಸಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಬುಕ್ಕಿಂಗ್ ಶುರುವಾಗಿಲ್ಲ. ಬಾಲಿವುಡ್ ಸಿನಿಮಾಗಳಿಗೆ ಪಿವಿಆರ್, ಐನಾಕ್ಸ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಇರುತ್ತದೆ. ಹಾಗಾಗಿ ಮುಂದೆ ಬುಕ್ಕಿಂಗ್, ಓಪನಿಂಗ್ ಹೆಚ್ಚಬಹುದು ಎನ್ನುವ ಲೆಕ್ಕಾಚಾರ ಕೆಲವರದ್ದು.
ಬೆಂಗಳೂರಿನಲ್ಲಿ ಗುರುವಾರ ಬೆಳ್ಳಂ ಬೆಳಗ್ಗೆ 6.30ಕ್ಕೆ 'ಕೂಲಿ' ಚಿತ್ರದ ಮೊದಲ ಪ್ರದರ್ಶನ ಶುರುವಾಗುತ್ತದೆ. ಈಗಾಗಲೇ ಬೆಳಗಿನ 6.30ರ ಶೋಗಳು ಬಹುತೇಕ ಸೋಲ್ಡೌಟ್ ಆಗಿದೆ. ಟಿಕೆಟ್ ದರ 500 ರೂ, 800 ರೂ, 1000 ರೂ, ಇದ್ದಕ್ಕೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದರೆ 'ವಾರ್-2' ಚಿತ್ರದ ಟಿಕೆಟ್ 150 ರೂ, 200 ರೂ, ನಿಗದಿಯಾಗಿದ್ದರೂ ಒಂದೇ ಒಂದು ಶೋ ಟಿಕೆಟ್ ಸೋಲ್ಡೌಟ್ ಆಗಿಲ್ಲ.
ಬಾಲಿವುಡ್ ಸಿನಿಮಾಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಕಮ್ಮಿ ಇರುತ್ತದೆ. ಸಿನಿಮಾ ಬಿಡುಗಡೆಯಾಗಿ ರೆಸ್ಪಾನ್ಸ್ ನೋಡಿ ಜನ ಟಿಕೆಟ್ ಬುಕ್ ಮಾಡುತ್ತಾರೆ. ಒಳ್ಳೆ ಸಿನಿಮಾ ಬಂದರೆ ಹಿಂದಿ ಪ್ರೇಕ್ಷಕರು ಕೈಬಿಡಲ್ಲ. 'ಸಯ್ಯಾರ' ಸಿನಿಮಾ ಫಲಿತಾಂಶ ಅದಕ್ಕೆ ಉತ್ತಮ ಉದಾಹರಣೆ. 'ವಾರ್- 2' ಬಿಡುಗಡೆಗೆ ಇನ್ನು 2 ದಿನ ಬಾಕಿಯಿದೆ. ಹಾಗಾಗಿ ಮುಂದೆ ಕ್ರೇಜ್ ಹೆಚ್ಚಬಹುದು ಎನ್ನುವ ಊಹಾಪೋಹ ಶುರುವಾಗಿದೆ.


Click it and Unblock the Notifications











