ಏನಾಯ್ತು ಸರ್ಕಾರದ 200 ರೂ. ಸಿನಿಮಾ ಟಿಕೆಟ್ ದರ ನಿಯಮ? 1500 ರೂ. ದಾಟಿದೆ 'ಕೂಲಿ' ಟಿಕೆಟ್ ದರ!
ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು 200 ರೂ.ಗೆ ಮಿತಿಗೊಳಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿರುವುದು ಗೊತ್ತೇಯಿದೆ. ಈ ಕರಡು ಅಧಿಸೂಚನೆಯ ಪ್ರಕಾರ, ಎಲ್ಲಾ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಯ ಸಿನಿಮಾ ಪ್ರದರ್ಶನಗಳಿಗೆ ಟಿಕೆಟ್ ದರ 200 ರೂ. ಮೀರಬಾರದು. ಮನರಂಜನಾ ತೆರಿಗೆಯನ್ನು ಅದರಲ್ಲೇ ಸೇರಿಸಬೇಕು ಎನ್ನಲಾಗಿತ್ತು.
ಕರ್ನಾಟಕ ಚಲನಚಿತ್ರ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2025ರ ಅಡಿ ಹಾಗೂ ಕರ್ನಾಟಕ ಚಲನಚಿತ್ರಗಳ (ನಿಯಂತ್ರಣ) ಕಾಯಿದೆ, 1964ರ ಸೆಕ್ಷನ್ 19ರ ಅಡಿ ಗೃಹ ಇಲಾಖೆಯು ಈ ಕರಡನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರ್ವಜನಿಕ ಆಕ್ಷೇಪಣೆಗಳನ್ನು 15 ದಿನಗಳ ಕಾಲಾವಕಾಶ ಅಂದರೆ ಆಗಸ್ಟ್ 31ರ ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಮುಂದಿನ ವಾರ ಬಿಡುಗಡೆ ಆಗುತ್ತಿರುವ ತಮಿಳಿನ 'ಕೂಲಿ' ಸಿನಿಮಾ ಟಿಕೆಟ್ ದರ 2000 ರೂ. ತಲುಪಿದೆ. ಹಾಗಾದರೆ ಸರ್ಕಾರ ಆದೇಶ ಏನಾಯ್ತು? ಎಂದು ಸಿನಿರಸಿಕರು ಪ್ರಶ್ನಿಸುತ್ತಿದ್ದಾರೆ.

ಚೆನ್ನೈನಲ್ಲಿರುವ ಚಿತ್ರಮಂದಿರಗಳಲ್ಲಿ ಕೂಡ 'ಕೂಲಿ' ಸಿನಿಮಾ ಟಿಕೆಟ್ ದರ 200 ರೂ. ಮೀರಿಲ್ಲ. ಆದರೆ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ 200 ರೂ,ಗೂ ಅಧಿಕ ದರ ನಿಗದಿ ಮಾಡಿದ್ದಾರೆ. ಎಂಜಿ ರಸ್ತೆ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿ 1500 ರೂ. ಹಾಗೂ 2000 ರೂ.ಗೆ ಟಿಕೆಟ್ ದರ ಹೆಚ್ಚಿಸಿದ್ದಾರೆ. ಸಾಮಾನ್ಯ ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೂಡ ಗುರುವಾರ ಬೆಳಗಿನ ಶೋಗಳಿಗೆ 500 ರೂ. ಇಂದ 1000 ರೂ,ವರೆಗೆ ಟಿಕೆಟ್ ದರ ಹೆಚ್ಚಿಸಿದ್ದಾರೆ. ಒಂದರ್ಥದಲ್ಲಿ ಹಗಲು ದರೋಡೆ ನಡೀತಿದೆ.
ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎನ್ನುವ ಪ್ರೇಕ್ಷಕರ ಉತ್ಸಾಹವನ್ನೇ ಬಂಡವಾಳ ಮಾಡಿಕೊಂಡು 'ಕೂಲಿ' ಟಿಕೆಟ್ ದರ ಹೆಚ್ಚಿಸಿದ್ದಾರೆ. ಇದನ್ನು ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ. ತಮಿಳು ಚಿತ್ರಕ್ಕೆ ತಮಿಳುನಾಡಿನಲ್ಲೇ ಇಲ್ಲದ್ದಷ್ಟು ಟಿಕೆಟ್ ದರವನ್ನು ಬೆಂಗಳೂರಿನಲ್ಲಿ ನಿಗದಿಪಡಿಸಿರುವುದು ವಿಪರ್ಯಾಸ. ಸರ್ಕಾರ 200 ರೂ. ಸಿನಿಮಾ ಟಿಕೆಟ್ ದರ ನಿಗದಿಗೆ ಮುಂದಾಗಿರುವುದನ್ನು ಸಿನಿರಸಿಕರು ಸ್ವಾಗತಿಸಿದ್ದಾರೆ. ಆದರೆ ಯಾವಾಗ? ಇದು ಜಾರಿಗೆ ಬರುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ರಜನಿಕಾಂತ್ ಹೀರೊ ಆಗಿ ನಟಿಸಿದ್ದಾರೆ. ಇನ್ನುಳಿದಂತೆ ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ, ಸತ್ಯರಾಜ್, ರಚಿತಾ ರಾಮ್ ಚಿತ್ರದ ತಾರಾಗಣದಲ್ಲಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದೆ. ಈಗಾಗಲೇ ಚಿತ್ರ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
22 ಕೋಟಿ ರೂ.ಗೆ 'ಕೂಲಿ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಬಿಕರಿಯಾಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚೆನ್ನೈನಲ್ಲಿ ಕೂಡ ಈ ಮಟ್ಟಿಗೆ ಟಿಕೆಟ್ ಬುಕ್ ಆಗುತ್ತಿಲ್ಲ. 200 ರೂ. ಟಿಕೆಟ್ ದರ ಇದ್ದರೂ ಅಲ್ಲಿ ಬುಕ್ ಮಾಡಲುಮೀನಾಮೇಷ ಎಣಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ 2000 ರೂ. ಟಿಕೆಟ್ ದರ ಇದ್ದರೂ ಶೋ ಸೋಲ್ಡೌಟ್ ಆಗಿದೆ.
ಈಗಾಗಲೇ ಮಲ್ಲೇಶ್ವರಂ ಸಂಪಿಗೆ ಚಿತ್ರಮಂದಿರ ಹಾಗೂ ರಾಮಮೂರ್ತಿ ನಗರದ ಶ್ರೀಲಕ್ಷ್ಮಿ ಚಿತ್ರಮಂದಿರಗಳಲ್ಲಿ ಮೊದಲ ದಿನದ ತಲಾ 5 ಶೋಗಳ ಟಿಕೆಟ್ ಸಂಪೂರ್ಣವಾಗಿ ಖಾಲಿಯಾಗಿದೆ. ಹಲವು ಕಡೆಗಳಲ್ಲಿ ಫಾಸ್ಟ್ ಫಿಲ್ಲಿಂಗ್ ನಡೀತಿದೆ. ಚಿತ್ರದ 1000 ಕೋಟಿ ರೂ, ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ. ಮೊದಲ ದಿನವೇ ಭಾರೀ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ಅದೇ ದಿನ 'ವಾರ್- 2' ಸಿನಿಮಾ ಕೂಡ ತೆರೆಗೆ ಬಂದು 'ಕೂಲಿ'ಗೆ ಪೈಪೋಟಿ ಕೊಡಲಿದೆ.


Click it and Unblock the Notifications











