ಅಕ್ಕಿನೇನಿ ಕುಡಿಯ ತಮಿಳು ಎಂಟ್ರಿಗೆ ಸೂಪರ್ ಸ್ಟಾರ್ ಸಾಥ್
ತೆಲುಗಿನ ಅಕ್ಕಿನೇನಿ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 'ಅಖಿಲ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ತಮಿಳು, ತೆಲುಗಿನಲ್ಲಿ ತೆರೆ ಕಾಣಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇದೀಗ ಚಿತ್ರ ತಮಿಳಿಗೂ ಡಬ್ ಆಗುವ ಸಾಧ್ಯತೆಗಳಿವೆ.
ಯಾರಿಗಪ್ಪಾ, ಇಷ್ಟೊಂದು ಪೀಠಿಕೆ ಅನ್ಕೊಂಡ್ರಾ, ಅವರೇ ನಮ್ಮ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ. ಅಂದಹಾಗೆ ಅಖಿಲ್ ಅಕ್ಕಿನೇನಿ ಅವರು ಚೊಚ್ಚಲ ಬಾರಿಗೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದು, 'ಅಖಿಲ್' ಎನ್ನುವ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಅಕ್ಟೋಬರ್ 22 ರಂದು ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಭರ್ಜರಿಯಾಗಿ ತೆರೆ ಕಾಣಲಿದೆ.
ಇದೀಗ 'ಅಖಿಲ್' ಚಿತ್ರ ತಮಿಳಿಗೂ ಡಬ್ ಆಗಲಿದ್ದು, ವಿಶೇಷವಾಗಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಾಗಾರ್ಜುನ್ ಅವರ ಪುತ್ರನನ್ನು ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಇಡೀ ತಮಿಳು ಚಿತ್ರರಂಗಕ್ಕೆ ಪರಿಚಯಿಸಲಿದ್ದಾರಂತೆ.
ನಿರ್ಮಾಪಕ ಸಿ.ಕಲ್ಯಾಣ್ ಅವರು 'ಅಖಿಲ್' ಚಿತ್ರವನ್ನು ತಮಿಳು ಭಾಷೆಗೆ ಡಬ್ ಮಾಡುವ ಹಕ್ಕನ್ನು ಪಡೆದುಕೊಂಡಿದ್ದು, ಮುಂದಿನ ತಿಂಗಳು ಚೆನ್ನೈನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡುವುದರೊಂದಿಗೆ ಅಖಿಲ್ ಅವರನ್ನು ತಮಿಳು ಚಿತ್ರರಂಗಕ್ಕೂ ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಹ್ವಾನಿಸಲಾಗುತ್ತಿದೆ.
ಇನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಕಬಾಲಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಇನ್ನುಳಿದಂತೆ 'ಅಖಿಲ್' ಚಿತ್ರದಲ್ಲಿ ಸಯೇಷಾ ಅವರು ಅಖಿಲ್ ಅಕ್ಕಿನೇನಿ ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ನಿರ್ದೇಶಕ ವಿ.ವಿ ವಿನಾಯಕ್ ಅವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.


Click it and Unblock the Notifications













