ಸುದೀಪ್ 'ಮ್ಯಾಕ್ಸ್' ಚಿತ್ರಕ್ಕಾಗಿ 'ಜೈಲರ್' ಸ್ಟಂಟ್ ಮಾಸ್ಟರ್ ಎಂಟ್ರಿ; ಪಕ್ಕಾ ಆಕ್ಷನ್ ಧಮಾಕಾ
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡುತ್ತಿದೆ. ಸದ್ಯ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗುತ್ತಿಲ್ಲ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಕೊನೆ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಭಾಗಿ ಆಗಿದೆ.
ಇತ್ತೀಚಿನ ವರ್ಷಗಳ ಆಕ್ಷನ್ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಸ್ಟಂಟ್ಸ್ ಮೈ ಜುಮ್ ಎನಿಸುವಂತಿರುತ್ತದೆ. ಒಂದೇ ಚಿತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಜನ ಫೈಟ್ಸ್ ಕಂಪೋಸ್ ಮಾಡೋದು ಇದೆ. ಇತ್ತೀಚೆಗೆ ಹೊಸ ಹೊಸ ಸ್ಟಂಟ್ಸ್ ಮಾಸ್ಟರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರೊಟ್ಟಿಗೆ ಹಳೇ ಫೈಟ್ ಮಾಸ್ಟರ್ಸ್ ಪೈಪೋಟಿ ನಡೆಸುತ್ತಿದ್ದಾರೆ. ಬರ್ತಾ ಬರ್ತಾ ಸಿನಿಮಾಗಳಲ್ಲಿ ಫೈಟ್ಸ್ ಅಂದ್ರೆ ಆರ್ಭಟಕ್ಕಿಂತ ಸ್ಟೈಲ್ ಹೈಲೆಟ್ ಆಗುತ್ತಿದೆ.

ಸ್ಟೈಲಿಶ್ ಆಗಿ ಸ್ಟಂಟ್ಸ್ ಕಂಪೋಸ್ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಸುದೀಪ್ ಮ್ಯಾಕ್ಸ್ ಚಿತ್ರಕ್ಕೆ ಹೊಸ ಸ್ಟಂಟ್ಸ್ ಮಾಸ್ಟರ್ ಆಗಮನವಾಗಿದೆ. ಕಳೆದ ವರ್ಷ ಸೂಪರ್ ಹಿಟ್ ಆಗಿದ್ದ 'ಜೈಲರ್' ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದ ಕೆವಿನ್ ಇದೀಗ 'ಮ್ಯಾಕ್ಸ್' ತಂಡ ಸೇರಿದ್ದಾರೆ. ಖ್ಯಾತ ಫೈಟ್ ಮಾಸ್ಟರ್ ಸ್ಟನ್ ಶಿವ ಪುತ್ರ ಕೆವಿನ್. ಚಿಕ್ಕಂದಿನಿಂದ ತಂದೆ ಹಾದಿಯಲ್ಲೇ ಮಾರ್ಷಲ್ ಆಟ್ಸ್ ಸೇರಿದಂತೆ ಹಲವು ಕಲೆಗಳನ್ನು ಕಲಿತಿದ್ದ ಕೆವಿನ್ ಸದ್ಯ ಕಾಲಿವುಡ್‌ನಲ್ಲಿ ಗಮನ ಸೆಳೆದಿದ್ದಾರೆ.
ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ ಮೂಲಕ ಸ್ಟಂಟ್ ಮಾಸ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೆವಿನ್ ಇದೀಗ ಕಿಚ್ಚನಿಗೆ ಫೈಟ್ ಕಂಪೋಸ್ ಮಾಡಿದ್ದಾರೆ. ನಾಲ್ಕೈದು ದಿನಗಳ ಕಾಲ ಆ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆದಿದೆ. ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಚೇತನ್ ಡಿಸೋಜಾ ಸ್ಟಂಟ್ಸ್ ಹೈಲೆಟ್ ಆಗುತ್ತಿದೆ. 'ಮ್ಯಾಕ್ಸ್' ಚಿತ್ರದಲ್ಲಿ ಕೆವಿನ್ ಒಂದು ಫೈಟ್ ಮಾತ್ರ ಕಂಪೋಸ್ ಮಾಡಿದ್ದಾರೆ. ಇನ್ನುಳಿದ ಆಕ್ಷನ್ ಸೀಕ್ವೆನ್ಸ್ ಚೇತನ್ ಡಿಸೋಜಾ ಮಾರ್ಗದರ್ಶನದಲ್ಲಿ ಮೂಡಿ ಬಂದಿದೆ.
'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರಜನಿಕಾಂತ್ ಸಿಗರೇಟ್ ಸ್ಟೈಲ್ ಕಂಪೋಸ್ ಮಾಡಿದ್ದು ಇದೇ ಕೆವಿನ್. ಮೊದಲ ಪ್ರಯತ್ನದಲ್ಲೇ ಗಮನ ಸೆಳೆದ ಕೆವಿನ್ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 'ಮ್ಯಾಕ್ಸ್' ಚಿತ್ರದಲ್ಲಿ ಕಿಚ್ಚನನ್ನು ಮತ್ತಷ್ಟು ಸ್ಟೈಲಿಶ್ ಆಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಿಗಂತೂ ಭರ್ಜರಿ ಸರ್‌ಪ್ರೈಸ್ ಕಾದಿದೆ. ಮಹಾಬಲಿಪುರಂನಲ್ಲಿ ಸೆಟ್ ಹಾಕಿ 'ಮ್ಯಾಕ್ಸ್' ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗುತ್ತಿದೆ.
'ಮ್ಯಾಕ್ಸ್' ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ. ಬಹಳ ರೋಚಕವಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡ್, ವಂಶಿಕೃಷ್ಣ ನಟಿಸಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಮ್ಯಾಕ್ಸ್' ಚಿತ್ರಕ್ಕಿದೆ. 'KGF' ಖ್ಯಾತಿಯ ಶಿವಕುಮಾರ್ ಸೆಟ್ ಹಾಕಿದ್ದಾರೆ. ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಬಂದಿದ್ದ ಸಣ್ಣ ಟೀಸರ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ಬಳಿಕ ಚಿತ್ರತಂಡ ಯಾವುದೇ ಅಪ್‌ಡೇಟ್ ಕೊಟ್ಟಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಆಗಷ್ಟು ಬೇಗ ಎಕ್ಸೈಟಿಂಗ್ ಅಪ್‌ಡೇಟ್ ಕೊಡುವುದಾಗಿ ಸುದೀಪ್ ಹೇಳಿದ್ದಾರೆ.


Click it and Unblock the Notifications











