Jailer Karnataka Boxoffice: ಸಣ್ಣ ಮೊತ್ತದ ಸಿನ್ಮಾ ಚಿನ್ನದ ಬೆಳೆ ತೆಗೀತು:ವಿತರಕರಿಗೆ 2 ಪಟ್ಟು ಲಾಭ: ಪಕ್ಕಾ ಲೆಕ್ಕ
ಸನ್ ಪಿಕ್ಚರ್ಸ್ ನಿರ್ಮಾಣದ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಜನಿಕಾಂತ್ ಒನ್‌ಮ್ಯಾನ್ ಶೋ, ಶಿವಣ್ಣ ಜಬರ್ದಸ್ತ್ ಆರ್ಭಟಕ್ಕೆ ಬಾಕ್ಸಾಫೀಸ್ ಶೇಕ್ ಆಗಿದೆ. ಓಟಿಟಿಗೆ ಬಂದ್ರು ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿ 'ಜೈಲರ್' ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಅತಿಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎನ್ನುವ ಹೆಗ್ಗಳಿಗೆ 'ಜೈಲರ್' ಪಾಲಾಗಿದೆ.
ಕನ್ನಡಕ್ಕೂ ಡಬ್ ಆಗಿ 'ಜೈಲರ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬರೀ ಕನ್ನಡ ವರ್ಷನ್ ಗಳಿಕೆ 5 ಕೋಟಿ ರೂ. ದಾಟಿದೆ. ಆಗಸ್ಟ್ 10ಕ್ಕೆ ಬಹಳ ದೊಡ್ಡಮಟ್ಟದಲ್ಲೇ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಟಿಕೆಟ್ ದರ ಕೂಡ ಹೆಚ್ಚಿಸಲಾಗಿತ್ತು. ಬೆಳ್ಳಂ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಿತ್ತು. ಎವಿ ಮೀಡಿಯಾ ಕನ್ಸಲ್ಟೆನ್ಸಿ ಸಂಸ್ಥೆ ಚಿತ್ರದ ಕರ್ನಾಟಕ ರೈಟ್ಸ್ ಖರೀದಿಸಿತ್ತು. ಜಯಣ್ಣ ಫಿಲ್ಮ್ಸ್ ಮೂಲಕ ಸಿನಿಮಾ ರಿಲೀಸ್ ಆಗಿತ್ತು.

ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕರ್ನಾಟಕದಲ್ಲಿ ಸಿನಿಮಾ ಕ್ರೇಜ್ ಹೆಚ್ಚುವಂತೆ ಮಾಡಿತ್ತು. ಅದಕ್ಕೆ ತಕ್ಕಂತೆ ಏಳೆಂಟು ನಿಮಿಷಗಳ ಶಿವಣ್ಣ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ ಚಿತ್ರಕ್ಕೆ ಆನೆ ಬಲ ತಂದುಕೊಟ್ಟಿತ್ತು. ಬರೀ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಪ್ರೇಕ್ಷಕರು ನರಸಿಂಹ ಆಗಿ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಆರ್ಭಟನೆ ಫಿದಾ ಆಗಿದ್ದರು. ಕ್ಲೈಮ್ಯಾಕ್ಸ್ ಝಲಕ್‌ನಲ್ಲಿ ತಲೈವಾ ಅಬ್ಬರವನ್ನು ಕೂಡ ಶಿವಣ್ಣ ನಿವಾಳಿಸಿ ಬಿಸಾಕಿದರು ಎನ್ನುವಂತಹ ಮಾತುಗಳು ಕೇಳಿಬಂತು.
ಕರ್ನಾಟಕದಲ್ಲಿ ರಜನಿಕಾಂತ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ರೋಬೊ, ಶಿವಾಜಿ ಬಳಿಕ ತಲೈವಾ ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದ್ದವು. 'ಜೈಲರ್' ಅದರಲ್ಲಿ ಯಶ ಸಾಧಿಸಿದ್ದು ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ವಿಶ್ವದಾದ್ಯಂತ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ.

ಅಂದಾಜು 10 ಕೋಟಿ ರೂ.ಗೆ 'ಜೈಲರ್' ಕರ್ನಾಟಕ ರೈಟ್ಸ್ ಕೊಂಡುಕೊಂಡಿದ್ದರು ಎನ್ನಲಾಗ್ತಿದೆ. ಬಲ ಮೂಲಗಳ ಪ್ರಕಾರ ಗ್ರಾಸ್ ಕಲೆಕ್ಷನ್ 60 ಕೋಟಿ ರೂ. ದಾಟಿದ್ದು 25 ರಿಂದ 30 ಕೋಟಿ ರೂ. ಶೇರ್ ವಿತರಕರಿಗೆ ಬಂದಂತಾಗಿದೆ. ಕರ್ನಾಟಕದಲ್ಲಿ 'ಜೈಲರ್' ನಿಜಕ್ಕೂ ಬಂಗಾರದ ಬೆಳೆ ತೆಗೆದಿದೆ. ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಸಿನಿಮಾಗಳ ಆರ್ಭಟ ಕಮ್ಮಿ ಆಗಿತ್ತು. ಅಚ್ಚರಿ ಎನ್ನುವಂತೆ ಸಿಂಪಲ್ ಕತೆಯ 'ಜೈಲರ್' ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿಬಿಡ್ತು. ಪ್ರೇಕ್ಷಕರು ಪದೇ ಪದೆ ಥಿಯೇಟರ್‌ಗೆ ಬರುವಂತಾಯಿತು.
ಸನ್ ಪಿಕ್ಚರ್ಸ್ ಸಂಸ್ಥೆಗೆ 'ಜೈಲರ್' ಸಿನಿಮಾ ಭಾರೀ ಲಾಭವನ್ನೇ ತಂದುಕೊಟ್ಟಿದೆ. ಬಾಕ್ಸಾಫೀಸ್ ಗಳಿಕೆ ಬಿಟ್ಟು ಆಡಿಯೋ ರೈಟ್ಸ್, ಡಿಜಿಟಲ್ ರೈಟ್ಸ್ ಮೂಲಕವೂ ಭರ್ಜರಿ ಬ್ಯುಸಿನೆಸ್ ನಡೆದಿದೆ. ಇನ್ನು ತಮ್ಮದೇ ಸನ್ ಟಿವಿ, ಉದಯ ಟಿವಿಯಲ್ಲಿ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದ್ದು ಆ ಮೂಲಕವೂ ಸಂಸ್ಥೆಗೆ ಲಾಭವಾಗಲಿದೆ.
ಚಿತ್ರದಿಂದ ಬಂದ ಲಾಭದಲ್ಲಿ ಒಂದಷ್ಟು ಮೊತ್ತವನ್ನು ಚಿತ್ರಕ್ಕಾಗಿ ಕೆಲಸ ಮಾಡಿತ ಕಲಾವಿದರು, ತಂತ್ರಜ್ಞರಿಗೆ ನಿರ್ಮಾಪಕರು ನೀಡಿದ್ದಾರೆ. ರಜನಿಕಾಂತ್, ನೆಲ್ಸನ್, ಅನಿರುದ್ದ್ ರವಿಚಂದರ್‌ಗೆ ಮತ್ತೊಂದು ಚೆಕ್ ಜೊತೆಗೆ ಐಷಾರಾಮಿ ಕಾರುಗಳು ಉಡುಗೊರೆಯಾಗಿ ಸಿಕ್ಕಿದೆ. ಇನ್ನು ಬಡ ರೋಗಿಗಳ ಚಿಕಿತ್ಸೆಗಾಗಿ 3 ಆಸ್ಪತ್ರೆಗಳಿಗೆ 2 ಕೋಟಿ ರೂ. ದೇಣಿಗೆ ನೀಡಲಾಗಿದೆ.
ಶೀಘ್ರದಲ್ಲೇ ಇನ್ನುಳಿದ ಕಲಾವಿದರು, ತಂತ್ರಜ್ಞರಿಗೂ ಉಡುಗೊರೆ ಸಿಗುವ ಲೆಕ್ಕಾಚಾರ ನಡೀತಿದೆ. ಇನ್ನು ರಜನಿಕಾಂತ್ ಜೊತೆ ಮುಂದಿನ ದಿನಗಳಲ್ಲಿ ಮತ್ತೊಂದು ಸಿನಿಮಾ ಮಾಡಲು ಸನ್ ಪಿಕ್ಚರ್ಸ್ ಸಂಸ್ಥೆ ಉತ್ಸುಕವಾಗಿದೆ.


Click it and Unblock the Notifications











