ಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾ
ಹಳೆಯ ಕಪ್ಪು-ಬಿಳುಪು ಸಿನಿಮಾಗಳು ಬಣ್ಣದ ರೂಪದಲ್ಲಿ ಮರುಬಿಡುಗಡೆ ಆಗುತ್ತಿದ್ದು ಹೊಸ ತಲೆಮಾರಿಗೆ ಸಿನಿಮಾಗಳನ್ನು ತಲುಪಿಸಲು ಬಣ್ಣಗಳನ್ನು ತುಂಬಿ ಬಿಡುಗಡೆ ಮಾಡುವ ಸಂಪ್ರದಾಯ ಕೆಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಮೊದಲು ಬಣ್ಣದಲ್ಲಿ ಬಿಡುಗಡೆ ಆದ ಕಪ್ಪು-ಬಿಳುಪು ಕನ್ನಡ ಸಿನಿಮಾ ರಾಜ್‌ಕುಮಾರ್ ಅವರ 'ಸತ್ಯ ಹರಿಶ್ಚಂದ್ರ'. ಆ ನಂತರ ಕಸ್ತೂರಿ ನಿವಾಸ ಸಹ ಬಣ್ಣವಾಯಿತು. ಈಗ ಮತ್ತೆ ರಾಜ್‌ಕುಮಾರ್ ಅವರ ಮತ್ತೊಂದು ಅದ್ಭುತ ಕಪ್ಪು-ಬಿಳು ಸಿನಿಮಾವನ್ನು ಬಣ್ಣ ತುಂಬಿ ಬಿಡುಗಡೆ ಮಾಡಲಾಗುತ್ತಿದೆ.
ಸ್ವತಃ ಡಾ.ರಾಜ್‌ಕುಮಾರ್ ಅವರಿಗೆ ಬಹಳ ಇಷ್ಟವಾಗಿದ್ದ ಸಿನಿಮಾವನ್ನು ಬಣ್ಣಗೊಳಿಸಿ ಬಿಡುಗಡೆಗೆ ಸಜ್ಜು ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ.

ಯಾವ ಸಿನಿಮಾ?
ಡಾ.ರಾಜ್‌ಕುಮಾರ್ ಅಭಿನಯದ 'ಮಂತ್ರಾಲಯ ಮಹಾತ್ಮೆ' ಸಿನಿಮಾ ಇದೀಗ ಬಣ್ಣಗೊಳ್ಳುತ್ತಿದೆ. ರಾಜ್ ಅವರ 'ಕಸ್ತೂರಿ ನಿವಾಸ' ಸಿನಿಮಾವನ್ನು ಬಣ್ಣದ ಸಿನಿಮಾ ಆಗಿ ಬದಲಾಯಿಸಿದ್ದ ತಂಡವೇ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನೂ ಕಲರ್ ಮಾಡುತ್ತಿದೆ.

ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು
1966 ರಲ್ಲಿ ಬಿಡುಗಡೆ ಆಗಿದ್ದ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನು ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು, ಅವರೇ ನಿರ್ಮಾಣವನ್ನೂ ಮಾಡಿದ್ದರು. ಆ ಕಾಲಕ್ಕೆ ಈ ಸಿನಿಮಾ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಅಣ್ಣಾವ್ರ ಅಭಿನಯ ಬಹು ಪ್ರಶಂಸೆಗೆ ಕಾರಣವಾಗಿತ್ತು.

ಜಯಂತಿ, ಕಲ್ಪನಾ ಅಭಿನಯಿಸಿದ್ದಾರೆ
ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಗುರು ರಾಘೇಂದ್ರರ ಪಾತ್ರವಹಿಸಿದ್ದರು. ಸಿನಿಮಾದಲ್ಲಿ ಉದಯ್‌ಕುಮಾರ್, ಜಯಂತಿ, ಕಲ್ಪನಾ, ಶೇಷಗಿರಿ ರಾವ್ ಇನ್ನೂ ಹಲವರು ನಟಿಸಿದ್ದರು.

ಲಾಕ್‌ಡೌನ್ ಮುಗಿದ ಮೇಲೆ ಬಿಡುಗಡೆ
ಸಿನಿಮಾಕ್ಕೆ ಬಣ್ಣ ತುಂಬುವ ಕಾರ್ಯ ಬಹುತೇಕ ಮುಗಿದಿದ್ದು, ಲಾಕ್‌ಡೌನ್ ಮುಗಿದು ಚಿತ್ರಮಂದಿರಗಳು ತೆರೆದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











