»   » ಮಂಡ್ಯದಿಂದ ಚೆನ್ನೈಗೆ ನಡೆದುಹೋದ ಬಡವಳಿಗೆ ರಜನಿಕಾಂತ್‌ ನೆರವು

ಮಂಡ್ಯದಿಂದ ಚೆನ್ನೈಗೆ ನಡೆದುಹೋದ ಬಡವಳಿಗೆ ರಜನಿಕಾಂತ್‌ ನೆರವು

Posted By: Staff
Subscribe to Filmibeat Kannada

ದಕ್ಷಿಣ ಭಾರತದ ಪ್ರಸಿದ್ಧ ನಟ ರಜನಿಕಾಂತ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರನ್ನು ನೆನಪಿಸಿಕೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಮೂರು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಎರಡನೆಯದು- ಮಂಡ್ಯದ ಹೆಣ್ಣು ಮಗಳ ನೆರವಿಗೆ ಅವರು ಬಂದಿರುವುದು.

ಪಡೆಯಪ್ಪ ಸಿನಿಮಾದ ನಂತರ ಮೌನಿಯಾಗಿದ್ದ ರಜನಿ, ಈಗ 'ಬಾಬಾ" ಎನ್ನುವ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕಥೆಯನ್ನು ಅವರೇ ರಚಿಸಿರುವುದು ವಿಶೇಷ. ನಿರ್ಮಾಣವೂ ಅವರದೇ. ನಿರ್ದೇಶಕ ಸುರೇಶ್‌ ಮೋಹನ್‌. ಈಗಾಗಲೇ ರಜನಿ ಅವರ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಸಖ್ಯ ಸುರೇಶ್‌ ಅವರದು.

ಮಂಡ್ಯ ಜಿಲ್ಲೆಯ ಯಶೋಧಮ್ಮನಿಗೆ ನೆರವು

ಯಶೋಧಮ್ಮ ಎನ್ನುವ ಮಂಡ್ಯ ಜಿಲ್ಲೆಯ ಹೆಣ್ಣು ಮಗಳಿಗೆ 20 ಸಾವಿರ ರುಪಾಯಿ ನೆರವು ನೀಡಿರುವ ಹಾಗೂ ಆಕೆಯ ಮಗನ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ರಜನಿ ನೀಡಿರುವುದಾಗಿ ನಮ್ಮ ಚೆನ್ನೈ ವರದಿಗಾರರು ತಿಳಿಸಿದ್ದಾರೆ.

ಬಡ ಕುಟುಂಬಕ್ಕೆ ಸೇರಿದ ಯಶೋಧಮ್ಮನಿಗೆ ಕುಡುಕ ಗಂಡನ ಕಾಟ ಬೇರೆ. ಮೂರು ಹೊತ್ತೂ ಅಮಲಿನಲ್ಲೇ ಮುಳುಗಿರುವ ವೇಲು ನಾಯ್ಡುಗೆ ಕುಟುಂಬದ ಬಗ್ಗೆ ಕಿಂಚಿತ್ತೂ ಅಕ್ಕರಾಸ್ಥೆಯಿಲ್ಲ . ಸಂಸಾರದ ಭಾರ ಹೊತ್ತ ಯಶೋಧಮ್ಮ , ಸಹಾಯಕ್ಕಾಗಿ ನೆಂಟರಿಷ್ಟರ ಎಡತಾಕಿದ್ದು ಏನೂ ಪ್ರಯೋಜನವಾಗಲಿಲ್ಲ . ನಟ ರಜನಿಕಾಂತ್‌ ಅವರನ್ನು ಭೇಟಿಯಾದರೆ ಅನುಕೂಲವಾಗುತ್ತದೆಂದು ಯಾರೋ ಯಶೋಧಮ್ಮನಿಗೆ ಹೇಳಿದರು.

ರಜನಿಕಾಂತ್‌ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮಂಡ್ಯದಿಂದ ಚೆನ್ನೈಗೆ ಯಶೋಧಮ್ಮ ನಡೆದೇ ತಲುಪಿದಳು. ಈ ಬಡ ಹೆಣ್ಣುಮಗಳ ಕಷ್ಟ ಸ್ಥಳೀಯ ಪತ್ರಿಕೆಗಳಿಂದ ತಿಳಿದ ರಜನಿ, ಆಕೆಯನ್ನು ತಮ್ಮ ಮನೆಗೆ ಕರೆಸಿಕೊಂಡು 20 ಸಾವಿರ ರುಪಾಯಿ ನಗದು ಹಣ ನೀಡಿದರು. ಆಕೆಯ ಪುತ್ರ ನಂದಕುಮಾರ್‌ನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ತಾವು ಹೊರುವುದಾಗಿಯೂ ರಜನಿ ಪ್ರಕಟಿಸಿದರು.

ಕೊನೆಯದಾಗಿ ಯಶೋಧಮ್ಮನಿಗೆ ರಜನಿ ಹೇಳಿದ್ದು - ' ಮಂಡ್ಯಕ್ಕೆ ವಾಪಸ್ಸಾಗುವಾಗ ನೀವು ಬಸ್‌ನಲ್ಲೇ ಹೋಗಿ."

ಅಂದಹಾಗೆ- ಮಂಡ್ಯದ ಗಂಡು, ಕಲಿಯುಗ ಕರ್ಣ ಅಂಬರೀಷ್‌ ಇರುವಾಗ, ಯಶೋಧಮ್ಮ ದೂರದ ಚೆನ್ನೈಗೆ ಹೋದದ್ದು ಯಾಕೆ? ಅಂಬಿ ರಾಜಕೀಯದಲ್ಲಿ ಕಳೆದುಹೋದರಾ?

English summary
Rajnikanth helped a poor woman from Karnataka by giving her Rs.20,000 and also offered to help for her sons education

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada