»   » ರಾಯರ ಕುದುರೆ ಕತ್ತೆಯಾಯಿತೆ..

ರಾಯರ ಕುದುರೆ ಕತ್ತೆಯಾಯಿತೆ..

Posted By: *ರಘುನಾಥ ಚ.ಹ,
Subscribe to Filmibeat Kannada

ತಮಿಳು, ತೆಲುಗುಗಳಲ್ಲಿ ಸೂಪರ್‌ ಹಿಟ್‌ ಆಗಿದ್ದ ಭಾಗ್ಯರಾಜ್‌ ವಿರಚಿತ 'ಸುಂದರಕಾಂಡ"ದ ಕನ್ನಡ ಅವತರಣಿಕೆ ಘೋರವಾಗಿ ನೆಲಕಚ್ಚಿದೆ. ಇತ್ತೀಚಿಗೆ ಶಿವಣ್ಣನ ಯಾವ ಸಿನಿಮಾ ಹಿಟ್‌ ಆಗಿದೆ ಅನ್ನುವಂತಿಲ್ಲ . ಯಾಕೆಂದರೆ, ಸುಂದರಕಾಂಡದ ಸೋಲಿನ ಕೇಂದ್ರದಲ್ಲಿ ನಿಂತಿರುವವರು ಶಿವಣ್ಣ ಅಲ್ಲ ,- ಎಂ.ಎಸ್‌.ರಾಜಶೇಖರ್‌.

ಸುಂದರಕಾಂಡ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದಲ್ಲಿ (ಓಂ ಪ್ರಕಾಶ್‌ ಮಾದರಿಯಲ್ಲಿ ) ಸಿನಿಮಾ ಹಿಟ್‌ ಆಗುತ್ತಿತ್ತು ಎನ್ನುತ್ತಿದ್ದಾರೆ ಗಾಂಧೀನಗರದ ವಿಶ್ಲೇಷಕರು. ರಾಜಶೇಖರ್‌ ಅವರಿಗೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲ ಅನ್ನುವುದವರ ಆರೋಪ. . ಅವರ ಪ್ರಕಾರ, ಸುಂದರಕಾಂಡ ಮೂಲ ಚಿತ್ರದಂತೆಯೂ ಇಲ್ಲ , ಸ್ವಂತಿಕೆಯೂ ಅಲ್ಲಿಲ್ಲ .

ಸುಂದರಕಾಂಡದ ಸೋಲಿನ ಆರೋಪಗಳಿಗೆ ರಾಜಶೇಖರ್‌ ಜಗ್ಗಿದಂತಿಲ್ಲ . ಅವರು ಇನ್ನೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. 'ಮನಸು ಮಮತ" ತೆಲುಗು ಚಿತ್ರವನ್ನು ಮನಸೇ 'ಓ ಮನಸೇ" ಎಂದು ಕನ್ನಡಕ್ಕೆ ಭಟ್ಟಿ ಇಳಿಸಲು ಒಪ್ಪಿಕೊಳ್ಳುವ ಮೂಲಕ ರಾಮೋಜಿರಾವ್‌ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಂ.ಎಸ್‌.ರಾಜಶೇಖರ್‌ ಸದಸ್ಯತ್ವ ಪಡೆದಿದ್ದಾರೆ.

ಅನಂತನಾಗ್‌, ರಾಂಕುಮಾರ್‌, ಶ್ರುತಿ, ದೊಡ್ಡಣ್ಣ ಮುಂತಾದವರು ತಾರಾಗಣದಲ್ಲಿರುವ ಮನಸೇ ಓ ಮನಸೇ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದೆ.

ರಾಮೋಜಿ ಕನ್ನಡ ಸಿನಿಮಾ ನಿರ್ಮಿಸುತ್ತಿರುವುದಾಗಲೀ, ರಾಜಶೇಖರ್‌ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎನ್ನುವುದಾಗಲೀ ಇಲ್ಲಿನ ವಿಶೇಷವಲ್ಲ . ರಾಮೋಜಿ ಕನ್ನಡ ಸಿನಿಮಾ ನಿರ್ಮಾಣ ಇದೇ ಮೊದಲೂ ಅಲ್ಲ . ಆದರೆ, ಅವರ ಭಟ್ಟಿ ಇಳಿಸುವ ಕಾರ್ಖಾನೆಯ ಜೀತಕ್ಕೆ ರಾಜಶೇಖರ್‌ ಅಂಥಾ ಸದಭಿರುಚಿ ನಿರ್ದೇಶಕರೂ ಸಂದರಲ್ಲ ಅನ್ನುವುದೇ ನೋವಿನ ಸಂಗತಿ.

ಹೇಗಿದ್ದವರು ಹೇಗಾದರು..

ಸುಂದರಕಾಂಡ ಸೋಲನ್ನು ಮರೆತು ಹಳೆಯದನ್ನು ನೆನಪಿಸಿಕೊಳ್ಳಿ. ಒಂದಾನೊಂದು ಕಾಲದಲ್ಲಿ ಸದಭಿರುಚಿ ಹಾಗೂ ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಎಂ.ಎಸ್‌.ರಾಜಶೇಖರ್‌ ಹೆಸರು ಮಾಡಿದ್ದರು. ರಾಜ್‌ಕುಮಾರ್‌, ಶಿವಣ್ಣ , ಅಂಬರೀಷ್‌ ಮುಂತಾದವರ ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಜಶೇಖರ್‌ ಹಿಟ್‌ ಚಿತ್ರಗಳ ನಿರ್ದೇಶಕರೆಂದೇ ಪ್ರಸಿದ್ಧರು. ರಾಜ್‌ ಕ್ಯಾಂಪ್‌ನಲ್ಲಿ ಅವರಿಗೆ ಸದಾ ಕೆಲಸವಿದ್ದ ಕಾಲವೂ ಇತ್ತು . ಅದೆಲ್ಲ ಆಗಿ ಹೋದ ಕಥೆ. ರಾಜಶೇಖರ್‌ ಈಗ ಬದಲಾಗಿದ್ದಾರೆ. ರಾಮೋಜಿಯಂಥವರಿಗೆ ಅವರು ಬೇಕಾಗಿದ್ದಾರೆ.

ರಾಜಶೇಖರ್‌ ಬದಲಾದ ಕಥೆ ಒಂದರ್ಥದಲ್ಲಿ ಸ್ಯಾಂಡಲ್‌ವುಡ್‌ನ ಬದಲಾವಣೆಯೂ ಹೌದು. ದೇಸಾಯಿ, ಶಿವಮಣಿ, ನಾಗತಿಹಳ್ಳಿ ಮುಂತಾದ ಹೊಸ ನಿರ್ದೇಶಕರ ಸಿನಿಮಾರಂಗ ಪ್ರವೇಶ ಹಳಬರ ನಿವೃತ್ತಿಗೆ ಕಾರಣವಾಯಿತು. ಬದಲಾಗುತ್ತಿರುವ ಟ್ರೆಂಡ್‌ಗೆ ಒಗ್ಗಿಕೊಳ್ಳಲಾಗದೆ ಭಾರ್ಗವ, ಜೋಸೈಮನ್‌, ಕೆ.ವಿ.ಜಯರಾಂ, ರವಿ, ಗೀತಪ್ರಿಯ ಮುಂತಾದ ನಿರ್ದೇಶಕರು ಮುಗ್ಗರಿಸಿದ್ದು ಆಗಲೇ. ಈ ಸಾಲಿಗೆ ರಾಜಶೇಖರ್‌ ಕೂಡ ಹೊರತಲ್ಲ .

ಅವಕಾಶಗಳಿಲ್ಲದ ವ್ಯಥೆ ಒಂದು ಕಡೆ, ರಿಮೇಕ್‌ ಮಾಡುವುದು ಪ್ರತಿಷ್ಠೆಗೆ ಕುಂದು ಎನ್ನುವ ಅಭಿಮಾನ ಇನ್ನೊಂದು ಕಡೆ. ಈ ಇಬ್ಬಂದಿಯಲ್ಲಿ - ಕೆ.ವಿ.ಜಯರಾಂ ಅಂಥವರು ಅಪರೂಪಕ್ಕೊಂದು ಸಿನಿಮಾ ಮಾಡುವ ಮೂಲಕ ಅಸ್ತಿತ್ವ ಉಳಿಸಿಕೊಂಡರೆ, ಅನೇಕ ನಿರ್ದೇಶಕರು ಸಿನಿಮಾದಿಂದ ದೂರವಾದರು. ಕೆಲವರು ಕಿರುತೆರೆಗೆ ವಲಸೆ ಹೋದರು. ಆದರೆ, ಸಿನಿಮಾ ಬಿಟ್ಟು ಬೇರೆ ಕಸುಬು ಗೊತ್ತಿಲ್ಲದ ನಿರ್ದೇಶಕರು ಎಷ್ಟು ದಿನ ಸುಮ್ಮನಿದ್ದಾರು? ಆ ಚಡಪಡಿಕೆಯೇ ರಾಜಶೇಖರ್‌ ಅವರದ್ದೂ.

ರಾಜಶೇಖರ್‌ ಅವರಿಗೆ ಬೇರೆ ದಾರಿಯಾದರೂ ಏನಿತ್ತು ?

ತೆಲುಗಿನ ಚಾಲಾ ಬಾಗುಂದಿಯನ್ನು ಬಹಳ ಚೆನ್ನಾಗಿದೆ ಹೆಸರಿನಲ್ಲಿ ಕನ್ನಡಕ್ಕೆ ಭಟ್ಟಿ ಇಳಿಸುವ ಸಂದರ್ಭದಲ್ಲಿ , ಇದು ಅನಿವಾರ್ಯ, ಇದೇ ಕೊನೆ ಎನ್ನುವಂಥ ಮಾತುಗಳನ್ನು ರಾಜಶೇಖರ್‌ ಆಡಿದ್ದರು. 'ಬಹಳ ಚೆನ್ನಾಗಿದೆ" ನೆಲ ಕಚ್ಚಿದಾಗ, ರಿಮೇಕ್‌ ಅವರಿಗೆ ಒಗ್ಗುವುದಿಲ್ಲ , ಅವರಿನ್ನು ರಿಮೇಕ್‌ ಸಾಹಸಕ್ಕಿಳಿಯಲಾರರು ಎಂದು ಅನೇಕರು ಭಾವಿಸಿದ್ದರು. ಆದರೆ, ರಾಜಶೇಖರ್‌ ಮತ್ತೆ ರಿಮೇಕ್‌ಗೆ ಇಳಿದಿದ್ದಾರೆ.

ರಾಜಶೇಖರ್‌ ಅವರಿಗೆ ಬೇರೆ ದಾರಿಯಾದರೂ ಏನಿತ್ತು ? ಸಿನಿಮಾ ಮಾಡುವುದೇ ಅಪರೂಪವಾಗುತ್ತಿರುವ ರಾಜ್‌ ಕ್ಯಾಂಪ್‌ನಲ್ಲಿ ಕೆಲಸವಿಲ್ಲ , ಹೊಸ ಅವಕಾಶಗಳಿಲ್ಲ . ಈ ಹೊತ್ತಿನಲ್ಲಿ ರಿಮೇಕ್‌ ರಾಜಶೇಖರ್‌ ಅವರಿಗೆ ಅಪ್ಯಾಯಮಾನ(ಅನ್ನ)ವಾಗಿ ಕಂಡಿದ್ದಲ್ಲಿ ಆಶ್ಚರ್ಯವಿಲ್ಲ . ಆದರೆ, ರಾಜಶೇಖರ್‌ ಅಂಥವರೂ ರಿಮೇಕ್‌ ಚಟಕ್ಕೆ ಬಿದ್ದರಲ್ಲ ಅನ್ನುವುದೇ ನೋವಿನ ಸಂಗತಿ.

English summary
M.S. Rajashekhar enters remake world and strives to survive there

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada