ಮತ್ತೆ 'ಕಿರಿಕ್' ಮಾಡ್ತೀವಿ ಎಂದ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ
ಚಂದನವನದ ಒಳ್ಳೆಯ ಗೆಳೆಯರು ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಮತ್ತೆ 'ಕಿರಿಕ್' ಮಾಡ್ತಾರಂತೆ! ಇವರ್ಯಾಕೆ ಕಿರಿಕ್ ಮಾಡ್ತಾರೆ ಎಂದು ಆಶ್ಚರ್ಯ ಪಡುವಂತಿಲ್ಲ, ಶೆಟ್ಟಿ ಧ್ವಯರು ಮಾತನಾಡಿರುವುದು ಸಿನಿಮಾ ಬಗ್ಗೆ.
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಟಿಸಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ಪ್ರೇಕ್ಷಕರನ್ನು ಮೋಡಿಗೊಳಿಸಿತ್ತು. ಸಿನಿಮಾದಲ್ಲಿದ್ದ ಲವ-ಲವಿಕೆ, ಹಾಸ್ಯ, ತೆಳುವಾದ ಪ್ರೇಮಕತೆ ಪ್ರೇಕ್ಷಕರನ್ನು ಫಿದಾಗೊಳಿಸಿತ್ತು. ಅದೀಗ ಮತ್ತೆ ಬರುತ್ತಿದೆ.
ಹೌದು, ಕಿರಿಕ್ ಪಾರ್ಟಿಯ ಎರಡನೇ ಭಾಗ ಮಾಡುವುದು ಖಚಿತ ಎಂದಿದೆ 'ಶೆಟ್ಟಿ ಧ್ವಯರ' ಚಿತ್ರತಂಡ ಕಿರಿಕ್ ಪಾರ್ಟಿ 2 ಸಿನಿಮಾವನ್ನು ರಿಷಬ್ ಶೆಟ್ಟಿಯೇ ನಿರ್ದೇಶಿಸುತ್ತಾರಂತೆ. ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಆಗಿರಲಿದ್ದಾರೆ. ಉಳಿದ ತಾರಾಗಣವು ಉಳಿದುಕೊಳ್ಳುವ ಸಾಧ್ಯತೆ ಇದೆ. ರಶ್ಮಿಕಾ ಮಂದಣ್ಣ ಇರುವುದು ಅನುಮಾನ!

ಕಿರಿಕ್ ಪಾರ್ಟಿ 2 ಸಿನಿಮಾ ಸೆಟ್ಟೇರಲಿದೆ
'ಕಿರಿಕ್ ಪಾರ್ಟಿ 2' ಕತೆ ರೆಡಿಯಾಗುತ್ತಿದ್ದು, ರಕ್ಷಿತ್ ಶೆಟ್ಟಿ ಹೇಳಿರುವಂತೆ, ಪುಣ್ಯಕೋಟಿ ಸಿನಿಮಾಕ್ಕೂ ಮುನ್ನಾ ಕಿರಿಕ್ ಪಾರ್ಟಿ 2 ಸಿನಿಮಾ ಪ್ರಾರಂಭವಾಗಲಿದೆಯಂತೆ. ಚಿತ್ರತಂಡದ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೂರು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿ
ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಂತರ ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಯೆಲ್ಲೊ' ಸಿನಿಮಾದಲ್ಲಿ ನಟಿಸಬೇಕಿದೆ. ಅದರ ನಂತರ ತಮ್ಮದೇ ಸ್ವಂತ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಅದರ ಕತೆ ಈಗಾಗಲೇ ತಯಾರಾಗಿದೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಿಷಬ್ ಶೆಟ್ಟಿ
ಇನ್ನು ರಿಷಬ್ ಶೆಟ್ಟಿ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹರಿಕತೆ ಅಲ್ಲ ಗಿರಿಕತೆ, ನಾಥೂರಾಮ್, ಲಾಫಿಂಗ್ ಬುದ್ಧ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವುಗಳ ಜೊತೆಗೆ 'ಗರುಡಗಮನ ವೃಷಭ ವಾಹನ', 'ರುದ್ರಪ್ರಯಾಗ' ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ.
Recommended Video

ಕಿರಿಕ್ ಪಾರ್ಟಿ 2 ಸಿನಿಮಾದ ಕತೆ ಹೇಗಿರಲಿದೆ?
'ಕಿರಿಕ್ ಪಾರ್ಟಿ 2' ಸಿನಿಮಾದ ಕತೆಯ ಬಗ್ಗೆ ಈಗಾಗಲೇ ಕುತೂಹಲ ಮೂಡಿದೆ. ಕಿರಿಕ್ ಪಾರ್ಟಿ ತಂಡ ಕಾಲೇಜು ಮುಗಿಸಿ ತಮ್ಮದೇ ಸಂಸ್ಥೆ ಪ್ರಾರಂಭಿಸುವ, ಅಲ್ಲಿ ಎದುರಾಗುವ ಸವಾಲುಗಳು ಸಿನಿಮಾದಲ್ಲಿರಲಿವೆಯೇ? ಅಥವಾ ಎಂಜಿನಿಯರಿಂಗ್ ಮುಗಿಸಿ ಕಿರಿಕ್ ಪಾರ್ಟಿ ನಿರುದ್ಯೋಗಿ ಆಗಿರಲಿದೆಯೇ ಎಂಬ ಕುತೂಹಲ ಎದ್ದಿದೆ.


Click it and Unblock the Notifications











