ನಟನೆಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗುಡ್‌ಬೈ?
ಟೈಟಲ್ ನೋಡಿ ಕನ್‌ಫ್ಯೂಸ್ ಆಗಬೇಡಿ. ರಕ್ಷಿತ್ ಶೆಟ್ಟಿ ಚಿತ್ರರಂಗದಿಂದ ದೂರಾಗುತ್ತಾರೆ ಎನ್ನುವುದು ನಿಜವಲ್ಲ. ಆದರೆ ಅಭಿಮಾನಿಗಳು ಮಾತ್ರ ಅಷ್ಟರಮಟ್ಟಿಗೆ ಬೇಸರಗೊಂಡಿದ್ದಾರೆ. ಪದೇ ಪದೆ ರಕ್ಷಿತ್ ಸಿನಿಮಾಗಳು ತಡವಾಗುತ್ತಿರುವುದೇ ಇದಕ್ಕೆ ಕಾರಣ. ಐದಾರು ಸಿನಿಮಾಗಳು ಅನೌನ್ಸ್ ಆಗಿದ್ದರೂ ಯಾವುದು, ಯಾವಾಗ ತೆರೆಗೆ ಬರುತ್ತದೆ? ಎನ್ನುವ ಬಗ್ಗೆ ಕ್ಲಾರಿಟಿ ಇಲ್ಲ.
ಕನ್ನಡ ಚಿತ್ರರಂಗ ಭರವಸೆಯ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ. ವಿಭಿನ್ನ ಪ್ರಯತ್ನಗಳಿಂದ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. ಆದರೆ ಒಂದೊಂದು ಸಿನಿಮಾ ಮಾಡಲು ಎರಡ್ಮೂರು ವರ್ಷ ಸವೆಸುತ್ತಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳ ಬಳಿಕ 'ರಿಚರ್ಡ್ ಆಂಟನಿ' ಸಿನಿಮಾ ಬರಬೇಕಿದೆ. ಆದರೆ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಬಗ್ಗೆ ಯಾವುದೇ ಅಂದಾಜಿಲ್ಲ.

ಎರಡು ವರ್ಷದ ಹಿಂದೆ ಸಣ್ಣ ಟೀಸರ್ ಸಮೇತ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆ ಸಿಂಪಲ್ ಸ್ಟಾರ್ ಕೈ ಜೋಡಿಸಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಬಳಿಕ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗಲಿಲ್ಲ. 'ಸಪ್ತಸಾಗರದಾಚೆ ಎಲ್ಲೋ'-2 ರಿಲೀಸ್ ಬಳಿಕ ಹೊಸ ಸಿನಿಮಾ ಶುರು ಎಲ್ಲಲಾಗಿತ್ತು. ವರ್ಷದ ಹಿಂದೆಯೇ ಸಿನಿಮಾ ಕಥೆ ಬರೆಯುವುದಕ್ಕೆ ವಿದೇಶಕ್ಕೆ ಹೋಗಿದ್ದರು. ಆದರೆ ಇನ್ನು ಸಿನಿಮಾ ಕಥೆ ಬರೆದಿಲ್ವಾ? ಮುಹೂರ್ತ ಯಾವಾಗ? ಎಂದು ಕೇಳುವಂತಾಗಿದೆ.
ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳು ಪದೇ ಪದೆ ತಡವಾಗುತ್ತಿದೆ. 'ಮ್ಯಾಕ್ಸ್' ರಿಲೀಸ್ ಡೇಟ್ ಗೊತ್ತಿಲ್ಲ. 'ಟಾಕ್ಸಿಕ್' ಸಿನಿಮಾ ಯಾವಾಗ ತೆರೆಗೆ ಬರುತ್ತದೆ? ಎನ್ನುವ ಕಲ್ಪನೆ ಯಶ್‌ಗೂ ಇಲ್ಲ. ಇನ್ನು 'ಕಾಂತಾರ'-1 ಮುಂದಿನ ವರ್ಷ ಆಗಸ್ಟ್ ವೇಳೆಗೆ ತೆರೆಗೆ ಬರುತ್ತದೆ. ಬಳಿಕ ರಿಷಬ್ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಯಾವಾಗ ಕನ್ನಡ ಸಿನಿಮಾ ಮಾಡ್ತಾರೋ ಗೊತ್ತಿಲ್ಲ.
ನಟ ದರ್ಶನ್ ನಟನೆಯ 'ಡೆವಿಲ್' ಚಿತ್ರದ ಚಿತ್ರೀಕರಣ ಯಾವಾಗ ಪುನರಾರಂಭ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ದುನಿಯಾ ವಿಜಯ್, ಗಣೇಶ್, ಶ್ರೀಮುರಳಿ ಕೂಡ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗಿದ್ದಾರೆ. ಹೀಗೆ ಸ್ಟಾರ್ ನಟರ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಲೇ ಇದೆ. ಇದೀಗ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಬೇಕಿರುವ 'ರಿಚರ್ಡ್ ಆಂಟನಿ' ಸಿನಿಮಾ ಕೂಡ ತಡವಾಗುತ್ತಿರುವುದು ಸಹಜವಾಗಿಯೇ ಸಿನಿರಸಿಕರಲ್ಲಿ ಬೇಸರ ಮೂಡಿಸಿದೆ.

2016ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸಿದ್ದ ರಕ್ಷಿತ್ ಶೆಟ್ಟಿ 3 ವರ್ಷಗಳ ಬಳಿಕ 'ಅವನೇ ಶ್ರೀಮನ್ನಾರಾಯಣ' ಆಗಿದ್ದರು. ಬಳಿಕ ಕೋವಿಡ್ ಸಮಸ್ಯೆ ನಡುವೆ 2022ರಲ್ಲಿ
'777 ಚಾರ್ಲಿ' ಸಿನಿಮಾ ತೆರೆಗೆ ಬಂದಿತ್ತು. ಕಳೆದ ವರ್ಷ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳು 2 ತಿಂಗಳ ಅಂತರದಲ್ಲಿ ಬಂದಿದ್ದೇ ಸಮಾಧಾನಕರ ಸಂಗತಿ. ಹಾಗೆ ನೋಡಿದರೆ ಇದು ಒಂದೇ ಸಿನಿಮಾ, ಬಲವಂತವಾಗಿ ಎರಡು ಭಾಗಗಳಾಗಿ ವಿಭಾಗಿಸಿದ್ದರು.
'ರಿಚರ್ಡ್ ಆಂಟನಿ' ಬಳಿಕ 'ಪುಣ್ಯಕೋಟಿ' ಸರಣಿ ಸಿನಿಮಾಗಳನ್ನು ರಕ್ಷಿತ್ ಮಾಡಬೇಕಿದೆ. 'ಮಿಡ್ ನೈಟ್ ಮೋಕ್ಷ' ಎನ್ನುವ ಮತ್ತೊಂದು ಸಿನಿಮಾ ಬಗ್ಗೆಯೂ ಹೇಳಿದ್ದಾರೆ. ಆದರೆ ಯಾವುದು ಕೂಡ ಯಾವಗ ಸೆಟ್ಟೇರುತ್ತೆ? ರಿಲೀಸ್ ಆಗುತ್ತದೆ? ಎನ್ನುವ ಅಂದಾಜಿಲ್ಲ. ಇದೇ ಕಾರಣಕ್ಕೆ ಕೆಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಸುಮ್ನೆ ಚಿತ್ರರಂಗಕ್ಕೆ ವಿದಾಯ ಹೇಳಿ, ಕಥೆ ಬರೆದುಕೊಂಡು ಯಾವುದಾದರೂ ಸಿನಿಮಾ ನಿರ್ಮಿಸಿಕೊಂಡು ಇದ್ದುಬಿಡಿ ಎಂದು ಬೇಸರ ಹೊರಹಾಕುತ್ತಿದ್ದಾರೆ. ಸದ್ಯ ಶೈನ್ ಶೆಟ್ಟಿ ಜೊತೆ ರಕ್ಷಿತ್ ಕೇದಾರನಾಥಕ್ಕೆ ಭೇಟಿ ನೀಡಿರುವ ಫೋಟೊಗಳು ವೈರಲ್ ಆಗುತ್ತಿದೆ.


Click it and Unblock the Notifications