ಮತ್ತೆ ರಕ್ಷಿತ್ ಶೆಟ್ಟಿ ಪೋಸ್ಟ್; ಅಯ್ಯೋ ಹಳೇದೆಲ್ಲಾ ಬಿಟ್ಟು ಹೊಸದು ಏನಾದ್ರು ನೋಡಪ್ಪ ಎಂದ ಫ್ಯಾನ್ಸ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಜಕ್ಕೂ ಸೈಲೆಂಟ್ ಆಗಿಬಿಟ್ಟಿದ್ದಾರೆ. ನಾನು ಇರುವುದೇ ಹೀಗೆ, ನನಗೆ ಸಿನಿಮಾ ಮಾಡುವ ಆತುರ ಇಲ್ಲ ಎಂದು ಹೇಳ್ತಾ ಬರ್ತಿದ್ದಾರೆ. 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವುದು ಆ ರಿಚ್ಚಿಗೂ ಗೊತ್ತಿಲ್ಲ ಎನ್ನುವಂತಾಹಿದೆ.
4 ವರ್ಷಗಳ ಹಿಂದೆ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿತ್ತು. ಬಳಿಕ ಯಾವುದೇ ಮಾಹಿತಿ ಇಲ್ಲ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳನ್ನು ಮುಗಿಸಿ ಕಥೆ ಬರೆಯಲು ಕೂತಿದ್ದ ರಕ್ಷಿತ್ ಶೆಟ್ಟಿ 3 ವರ್ಷಗಳಿಂದ ಅಜ್ಞಾತದಲ್ಲಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ತಮ್ಮದೇ ಲೋಕದಲ್ಲಿ ಕಥೆ, ಚಿತ್ರಕಥೆ ಬರೆಯುತ್ತಿದ್ದಾರೆ. ಒಂದಲ್ಲ ಮೂರು ಚಿತ್ರಗಳಿಗೆ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಶೀಘ್ರದಲ್ಲೇ 2 ಸಿನಿಮಾ ಶುರುವಾಗುತ್ತದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಆದರೆ ಯಾವಾಗ ಎನ್ನುವುದು ಖಚಿತವಾಗಿಲ್ಲ.

ರಶ್ಮಿಕಾ ಮಂದಣ್ಣ ಮದುವೆ ಹಿನ್ನೆಲೆಯಲ್ಲಿ ರಕ್ಷಿತ್ ಸೈಲೆಂಟ್ ಆಗಿಬಿಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇತ್ತೀಚೆಗೆ ದಿಢೀರನೆ ತಮ್ಮ ಫೇಸ್‌ಬುಕ್ ಕವರ್ ಪೇಜ್ ಫೋಟೊ ಬದಲಿಸಿ ರಕ್ಷಿತ್ ಗಮನ ಸೆಳೆದಿದ್ದರು. '777 ಚಾರ್ಲಿ' ಚಿತ್ರದಲ್ಲಿ ಶ್ವಾನದ ಜೊತೆಗಿರುವ ಫೋಟೊ ಪೋಸ್ಟ್ ಮಾಡಿದ್ದರು. ನಿಯತ್ತಿನ ಪ್ರಾಣಿಯ ಬಗ್ಗೆ ರಕ್ಷಿತ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಚರ್ಚೆ ಆಗಿತ್ತು. ಇದೀಗ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ 13 ವರ್ಷ ಪೂರೈಸಿದ ವಿಚಾರವನ್ನು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. "'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರಕ್ಕೆ 13 ವರ್ಷ. ಅಸಾಧಾರಣ ಪ್ರೀತಿಯನ್ನು ಗಳಿಸಿದ ಮತ್ತು ನನ್ನ ಪ್ರಯಾಣದಲ್ಲಿ ಒಂದು ಪ್ರಮುಖ ಕ್ಷಣವಾದ ಸುಂದರವಾದ ಕಥೆ. ಇಷ್ಟು ವರ್ಷಗಳ ಕಾಲ ಅದನ್ನು ಜೀವಂತವಾಗಿರಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ ಪ್ರತಿಕ್ರಿಯಿಸುತ್ತಿದ್ದಾರೆ. ಬೇಗ ಮುಂದಿನ ಸಿನಿಮಾ ಅಪ್‌ಡೇಟ್ ಕೊಡಿ, ರಿಚರ್ಡ್ ಆಂಟನಿ ಸಿನಿಮಾ ಶುರುವಾಗುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ. "ಅಯ್ಯೋ ಇನ್ನು ಹಳೇ ಸಿನಿಮಾ ಮಾತನಾಡುತ್ತಾ ಕೂರಬೇಡ, ಹೊಸ ಸಿನಿಮಾ ಮಾಡು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಬೇಗ ಕಂಬ್ಯಾಕ್ ಮಾಡಿ ಶೆಟ್ರೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹೇಮಂತ್ ಹಾಗೂ ಸುನಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ನಿರ್ಮಿಸಿದ್ದರು. ಸುನಿ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದರು. ಶ್ವೇತಾ ಶ್ರೀವಾಸ್ತವ್ ನಾಯಕಿಯಾಗಿ ಮಿಂಚಿದ್ದರು. ರಕ್ಷಿತಾ ಹಾಗೂ ಶ್ವೇತಾ ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಮೂಡಿ ಬಂದಿತ್ತು. ಸುನಿ ಲವಲವಿಕೆಯ ಡೈಲಾಗ್ಸ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ರಕ್ಷಿತ್ ಶೆಟ್ಟಿ ಹೀರೊ ಆಗಿ ಮೊದಲು ಬ್ರೇಕ್ ಕೊಟ್ಟಿದ್ದ ಸಿನಿಮಾ ಇದು.
11 ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡು ಕಲ್ಟ್ ಸಿನಿಮಾ ಸ್ಟೇಟಸ್ ಪಡೆದುಕೊಂಡಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ರಕ್ಷಿತ್ ಶೆಟ್ಟಿ ಮಾತ್ರ ರಿಚ್ಚಿ ಪಾತ್ರವನ್ನು ಮುಂದುವರೆಸಿ ಮತ್ತೆ ಅದೇ ಕಥೆ ಹೇಳುವ ಮನಸ್ಸು ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅದಕ್ಕಾಗಿ ಕೈ ಜೋಡಿಸಿದೆ. 'ರಿಚರ್ಡ್ ಆಂಟನಿ' ಹೆಸರಿನಲ್ಲಿ 'ಉಳಿದವರು ಕಂಡಂತೆ' ಕಥೆಯ ಹಿಂದಿನ ಹಾಗೂ ಮುಂದಿನ ಕತೆಯನ್ನು ಹೇಳುವ ಪ್ರಯತ್ನ ನಡೀತಿದೆ.
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಬೆನ್ನಲ್ಲೇ 'ಉಳಿದವರು ಕಂಡಂತೆ' ಕೂಡ ತೆರೆಗೆ ಬಂದಿತ್ತು. ಸದ್ಯ ಪ್ರೇಕ್ಷಕರು ಸೀಕ್ವೆಲ್ ನೋಡಲು ಕಾಯುವಂತಾಗಿದೆ.


Click it and Unblock the Notifications











