Sandalwood RRR: ಒಂದೇ ಚಿತ್ರದಲ್ಲಿ ರಕ್ಷಿತ್, ರಾಜ್, ರಿಷಬ್: ಟೈಟಲ್, ಕಥೆ ರಿವೀಲ್ ಮಾಡಿದ ಸಿಂಪಲ್ ಸ್ಟಾರ್
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತೆಲುಗಿಗೂ ಡಬ್ ಆಗಿ ಈ ವಾರ ಸಿನಿಮಾ ರಿಲೀಸ್ ಆಗಿದೆ. ಅಲ್ಲಿನ ಪ್ರೇಕ್ಷಕರಿಗೂ ಮನು- ಪ್ರಿಯಾ ಲವ್ ಸ್ಟೋರಿ ಇಷ್ಟವಾಗ್ತಿದೆ. ಅಕ್ಟೋಬರ್ 19ಕ್ಕೆ ಚಿತ್ರದ 2ನೇ ಭಾಗ ತೆರೆಗೆ ಬರಲಿದೆ. ಈಗಾಗಲೇ ಮೊದಲ ಭಾಗ ನೋಡಿ ಮೆಚ್ಚಿಕೊಂಡವರು ಮುಂದುವರೆದ ಮನು ಕತೆ ನೋಡಲು ಕಾಯುತ್ತಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. 'ಪುಣ್ಯಕೋಟಿ' ಕಥೆ ಕುಡ ಸಿದ್ಧವಾಗ್ತಿದೆ. ಇನ್ನು ಕರಾವಳಿ ಮೂಲಕ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್. ಬಿ ಶೆಟ್ಟಿ ಆತ್ಮೀಯ ಸ್ನೇಹಿತರಾಗಿದ್ದಾರೆ. ತಮ್ಮದೇ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಿನಿರಸಿಕರು ಇವರನ್ನು ಸ್ಯಾಂಡಲ್‌ವುಡ್ RRR ಅಂತ್ಲೇ ಕರೆಯುತ್ತಿದ್ದಾರೆ.

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್. ಬಿ ಶೆಟ್ಟಿ ಮೂವರು ಅದ್ಭುತ ಪ್ರತಿಭೆಗಳು. ಮೂವರು ಸಿನಿಮಾ ಬರವಣಿಗೆ, ನಿರ್ದೇಶನ ಮತ್ತು ನಟನೆಯಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಈ ಮೂವರು ಸೇರಿ ಒಂದು ದೊಡ್ಡ ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಈ ಬಗ್ಗೆ ಸಾಕಷ್ಟು ಬಾರಿ ಪ್ರಶ್ನೆಗಳು ಎದುರಾಗುತ್ತಿರುತ್ತದೆ. ರಿಷಬ್- ರಕ್ಷಿತ್ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಚಿತ್ರರಂಗಕ್ಕೆ ಬಂದವರು. ರಿಷಬ್ ನಿರ್ದೇಶನದ 'ರಿಕ್ಕಿ' ಹಾಗೂ 'ಕಿರಿಕ್ ಪಾರ್ಟಿ' ಸಿನಿಮಾಗಳಲ್ಲಿ ರಕ್ಷಿತ್ ನಟಿಸಿದ್ದರು.
'ಒಂದು ಮೊಟ್ಟೆಯ ಕತೆ' ಸಿನಿಮಾ ಮೂಲಕ ರಾಜ್. ಬಿ ಶೆಟ್ಟಿ ಚಿತ್ರರಂಗಕ್ಕೆ ಪರಿಚಿತರಾದರು. ಆ ಬಳಿಕ ರಿಷಬ್, ರಕ್ಷಿತ್‌ಗೆ ಹತ್ತಿರವಾದರು. ರಕ್ಷಿತ್ ನಟನೆಯ '777 ಚಾರ್ಲಿ' ಚಿತ್ರದಲ್ಲಿ ರಾಜ್ ನಟಿಸಿದರು. ರಿಷಬ್ ನಿರ್ದೇಶಿಸಿ ನಟಿಸಿದ 'ಕಾಂತಾರ' ಚಿತ್ರದಲ್ಲಿ ಕೆಲ ದೃಶ್ಯಗಳಿಗೆ ರಾಜ್. ಬಿ ಶೆಟ್ಟಿ ಕೊರಿಯೋಗ್ರಫಿ ಮಾಡಿದ್ದರು. ಕೆಲವರು ರಕ್ಷಿತ್, ರಿಷಬ್, ರಾಜ್ ಮೂವರು ಸಹೋದರರು ಅಂದುಕೊಂಡುಬಿಟ್ಟಿದ್ದಾರೆ. ಈಗ ಅಷ್ಟರಮಟ್ಟಿಗೆ ಇವರ ಬಾಂಡಿಂಗ್ ಇದೆ.

ಮೂವರು ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತೀರಾ? ಒಟ್ಟಿಗೆ ನಟಿಸುತ್ತೀರಾ? ಎನ್ನುವ ಪ್ರಶ್ನೆ ಎದುರಾದಾಗಲೆಲ್ಲಾ ಒಳ್ಳೆ ಕತೆ ಸಿಕ್ಕರೆ ಕಂಡಿತ ಮಾಡ್ತೀವಿ ಎಂದು ಹೇಳುತ್ತಾ ಬರ್ತಿದ್ದಾರೆ. ಆದರೆ ಅದು ಯಾವ ಸಿನಿಮಾ? ಯಾವಾಗ ಬರುತ್ತೆ? ಅನ್ನೋದು ಗೊತ್ತಿಲ್ಲ. ಮೂವರು ತಮ್ಮದೇ ಸಿನಿಮಾಗಳಲ್ಲಿ ಈಗ ಬ್ಯುಸಿಯಾಗಿಬಿಟ್ಟಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ತೆಲುಗು ಪ್ರಚಾರಕ್ಕಾಗಿ ರಕ್ಷಿತ್ ಶೆಟ್ಟಿ ಹೈದರಾಬಾದ್‌ನಲ್ಲಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾವು ಮೂವರು ಸೇರಿ ಮಾಡುವ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದರು. "ಸಪ್ತ ಸಾಗರದಾಚೆ ಎಲ್ಲೋ ಬಳಿಕ ನನ್ನ ಮುಂದಿನ ಸಿನಿಮಾಗಳು ಈ ರೀತಿ ಇವೆ. RA (ರಿಚರ್ಡ್ ಆಂಟನಿ), PK- 1 (ಪುಣ್ಯಕೋಟಿ 1), PK- 2 (ಪುಣ್ಯಕೋಟಿ 2), ಮತ್ತು M2M (Midnight to Moksha).. ಈ ನಾಲ್ಕು ಚಿತ್ರಗಳು ಮಾತ್ರ ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿವೆ"
"ಸದ್ಯ 'ಕಿರಿಕ್ ಪಾರ್ಟಿ 2' ಮಾಡುವ ಯಾವುದೇ ಆಲೋಚನೆ ಇಲ್ಲ. ಆದರೆ 'ಕಿರಿಕ್ ಪಾರ್ಟಿ 2' ಬಗ್ಗೆ ನನಗೆ ಬೇರೆಯದೇ ಪ್ಲ್ಯಾನ್ ಇದೆ, ನೋಡೋಣ. ಇದಿಷ್ಟು ಹೊರತುಪಡಿಸಿ, ಸೋಶಿಯಲ್ ಮೀಡಿಯಾದಲ್ಲಿ ನೀವೇನೇ ಓದಿದ್ದರೂ ಅದೆಲ್ಲವೂ ಸುಳ್ಳು. ಅದೆಲ್ಲ ಯಾವತ್ತಿಗೂ ನಿಜವಾಗುವುದಿಲ್ಲ. Love you all" ಎಂದು ಟ್ವೀಟ್ ಮಾಡಿದ್ದರು.
ಇದೀಗ ತೆಲುಗು ಸಂದರ್ಶನದಲ್ಲಿ ಮಾತನಾಡಿರುವ ರಕ್ಷಿತ್ ಶೆಟ್ಟಿ 'ಮಿಡ್‌ನೈಟ್ ಆಫ್ ಮೋಕ್ಷ' ಚಿತ್ರದಲ್ಲಿ ನಾನು, ರಿಷಬ್ ಶೆಟ್ಟಿ ಹಾಗೂ ರಾಜ್. ಬಿ ಶೆಟ್ಟಿ ಕೆಲಸ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದರೆ ಮೂವರು ಒಟ್ಟಿಗೆ ನಟಿಸುತ್ತಾರಾ? ಯಾರದರೂ ಇಬ್ಬರು ನಟಿಸಿ ಒಬ್ಬರು ಆಕ್ಷನ್ ಕಟ್ ಹೇಳ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ. 'ಮಿಡ್‌ನೈಟ್ ಆಫ್ ಮೋಕ್ಷ' ಟೈಟಲ್ಲೇ ಕುತೂಹಲ ಕೆರಳಿಸುವಂತಿದ್ದು ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ ಈ ಸಿನಿಮಾ ಸೆಟ್ಟೇರೋಕೆ ಇನ್ನು ನಾಲ್ಕೈದು ವರ್ಷ ಬೇಕಾಗಬಹುದು.


Click it and Unblock the Notifications











