ಟ್ವಿಟ್ಟರ್‌ನಲ್ಲಿ ಕವಿಗೋಷ್ಠಿ ಆರಂಭಿಸಿದ ರಕ್ಷಿತ್ ಶೆಟ್ಟಿ: ಶೆಟ್ರು ಬರೆದ ಕವನ ಇಲ್ಲಿದೆ
ರಕ್ಷಿತ್ ಶೆಟ್ಟಿ ಉತ್ತಮ ನಟ, ನಿರ್ದೇಶಕ ಮಾತ್ರವಲ್ಲ ಕವಿಮನಸ್ಸು ಹೊಂದಿರುವ ಬರಹಗಾರ. ಅವರು ಬರೆದು ನಿರ್ದೇಶಿಸಿದ 'ಉಳಿದವರು ಕಂಡಂತೆ' ಸಿನಿಮಾ ನೋಡಿದವರಿಗೆ ಅವರ ಬರವಣಿಗೆಯ ಕಸುವು ಸುಲಭಕ್ಕೆ ಅರ್ಥವಾಗುತ್ತದೆ.
ಬರವಣಿಗೆ ಮೇಲೆ ಒಳ್ಳೆಯ ಹಿಡಿತ ಹೊಂದಿರುವ ನಟ ರಕ್ಷಿತ್ ಶೆಟ್ಟಿ ಇಂದೇಕೋ ಒಳ್ಳೆಯ ಮೂಡ್‌ನಲ್ಲಿ ಟ್ವಿಟ್ಟರ್‌ನಲ್ಲಿ ಚುಟುಕು ಕವನವೊಂದನ್ನು ಪ್ರಕಟಿಸಿದರು. ಇದಕ್ಕೇ ಕಾಯುತ್ತಿದ್ದರೆನೋ ಎಂಬಂತೆ ಹಲವು 'ಟ್ವಿಟ್ಟರ್ ಕವಿ'ಗಳು ಬಂದು ರಕ್ಷಿತ್ ಶೆಟ್ಟಿಗೆ ಕವನಕ್ಕೆ ಜೊತೆಯಾಗಿ ತಮ್ಮ ಕವನಗಳನ್ನೂ ಠಂಕಿಸಿ ಕವನಗೋಷ್ಠಿಯ ವಾತಾವರಣ ಸೃಷ್ಟಿಸಿದರು.
''ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ...
ಎದ್ದಾಗ ಹೊಗಳದಿರಿ, ಬಿದ್ದಾಗ ತೆಗಳದಿರಿ
ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ
ಆಡದಿರಿ ಕಾಡದಿರಿ, ಅಂತ್ಯವ ನಾ ಕಂಡಿಲ್ಲ...
ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ... '' ಹೀಗೊಂದು ಸುಂದರ ಕವನವನ್ನು ರಕ್ಷಿತ್ ಶೆಟ್ಟಿ ಪ್ರಕಟಿಸಿದ್ದರು. ಈ ಕವನಕ್ಕೆ ಹಲವು ನೆಟ್ಟಿಗರು ತಮ್ಮ ಚುಟುಕು ಕವನನವನ್ನು ಪ್ರತಿಕ್ರಿಯಾಗಿ ಹಾಕಿದ್ದಾರೆ.

''ಕಟ್ಟುಕಥೆ ಕೇಳದಿರಿ,ನಿಟ್ಟುಸಿರ ಬಿಡದಿರಿ
ಇರುವ ಜೋಪಡಿಯೆ ನನ್ನ ಅರಮನೆಯು
ಎದ್ದಾಗ ಬಿಳದಿರಿ,ಬಿದ್ದಾಗ ಎದ್ದೇಳಿರಿ
ಹಾಡದಿರಿ ಮಂಗಳವ,ಕಥೆ ಇನ್ನು ಮುಗಿದಿಲ್ಲ..
ಅಂತ್ಯವ ನಾ ಕಂಡಿಲ್ಲ..'' ಎಂದು 'ಗಿರಿಶ್ ಮೈಸೆಲ್ಫ್' ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. ತಮ್ಮ ಕವನಕ್ಕೆ ಒಳ್ಳೆಯ ಕವನನ್ನು ಪ್ರತಿಕ್ರಿಯೆಯಾಗಿ ಬರೆದವರ ಕವನಗಳನ್ನು ಲೈಕ್ ಸಹ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.
ಮೊದಲ ಕವನ ಹಾಕಿದ ಕೆಲವು ಗಂಟೆಗಳ ಬಳಿಕ ಮತ್ತೊಂದು ಕವನವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಅದು ಇಂತಿದೆ..
''ಬದುಕೆಂಬ ಚೌಕಟ್ಟಲಿ ಅದ ಇದರ ಆಯಿಕೆ...
ಅದ ಹೆಕ್ಕಿ ಇದ ತ್ಯಜಿಸಿ ನಾ ನಾನೆಂಬ ಹೇಳಿಕೆ
ಇಷ್ಟ ನಷ್ಟಗಳಲಿ ಬೇಕೆ ಪರರ ಅನುಕಂಪ?
ಆಯ್ದ ರೂಪವ ಕಳೆದರೆ ಶಿವನೆ ಪ್ರತಿಬಿಂಬ...''
ಶಿವನ ಬಗ್ಗೆ ಅದಮ್ಯ ಕುತೂಹಲ ಇರುವ ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಗೆ ಶಿವನ ಹೆಸರಾದ ಪರಮವ್ಹ ಎಂದು ಹೆಸರಿಟ್ಟಿದ್ದು ಶಿವ ತಾಂಡವ ಆಡುತ್ತಿರುವ ಚಿತ್ರವನ್ನು ಲೋಗೋ ಆಗಿ ಇರಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಬಹಳ ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳುತ್ತಿದ್ದು 'ರಿಚರ್ಡ್ ಆಂಟೊನಿ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅವರೇ ನಿರ್ದೇಶನ ಮಾಡಿದ್ದ 'ಉಳಿದವರು ಕಂಡಂತೆ' ಸಿನಿಮಾದ ರಿಚ್ಚಿ ಪಾತ್ರವನ್ನು ಆಧರಿಸಿ ಈ ಸಿನಿಮಾ ಇದೆ. ಈ ಸಿನಿಮಾಕ್ಕೆ 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಲಿದೆ. ಪ್ರಸ್ತುತ '777 ಚಾರ್ಲಿ' ಸಿನಿಮಾದ ಬಿಡುಗಡೆಗೆ ರಕ್ಷಿತ್ ಶೆಟ್ಟಿ ಕಾಯುತ್ತಿದ್ದಾರೆ. ಅದರ ಬಳಿಕ 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











