Rakshit shetty: "ಚಾರ್ಲಿ ಜೊತೆ ನಟಿಸೋದು ನಿಜಕ್ಕೂ ಬಹಳ ಕಷ್ಟ.. ಅದಕ್ಕೆ ಸೀಕ್ವೆಲ್ ಮಾಡೋಕೆ ಒಪ್ಪಲಿಲ್ಲ": ರಕ್ಷಿತ್ ಶೆಟ್ಟಿ
ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಸಿನಿಮಾ ಕಳೆದು ವರ್ಷ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡಿತ್ತು. ಶ್ವಾನದ ಜೊತೆ ನಟಿಸಿ ನಟ ರಕ್ಷಿತ್ ಶೆಟ್ಟಿ ಗೆದ್ದಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಪ್ರಾಣಿ ಪ್ರಿಯರಿಗಂತೂ ಸಿನಿಮಾ ಹೆಚ್ಚು ಹತ್ತಿರವಾಗಿತ್ತು. ಕೆಲವರು ಸಿನಿಮಾ ನೋಡಿ ಭಾವುಕರಾಗಿದ್ದರು.
ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿದ್ದು ಮಾತ್ರವಲ್ಲ ಹಲವು ಪ್ರಶಸ್ತಿಗಳನ್ನು ಸಿನಿಮಾ ಗೆದ್ದುಕೊಂಡಿದೆ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ '777 ಚಾರ್ಲಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಸಾಕಷ್ಟು ಜನ ಈ ಸಿನಿಮಾ ಸೀಕ್ವೆಲ್ ಬರಬೇಕು ಎಂದಿದ್ದರು. ಆದರೆ ಇಂತಾದೊಂದು ಪ್ರಯತ್ನಕ್ಕೆ ರಕ್ಷಿತ್ ಶೆಟ್ಟಿ ಹಿಂದೇಟು ಹಾಕಿದ್ದರು. ಅದಕ್ಕೆ ಕಾರಣ ಏನು ಎಂದು ಇದೀಗ ರಕ್ಷಿತ್ ಬಿಚ್ಚಿಟ್ಟಿದ್ದಾರೆ. 6ನೇ ಇನ್ನೋವೇಟೀವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಭಾಗಿಯಾಗಿದ್ದ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

"777 ಚಾರ್ಲಿ' ನನ್ನ ಕರಿಯರ್‌ನಲ್ಲೇ ಬಹಳ ಸ್ಪೆಷಲ್ ಸಿನಿಮಾ. ಯಾಕಂದರೆ ಪರಂವಃ ಸ್ಟುಡಿಯೋದಲ್ಲಿ ನಿರ್ಮಿಸಿದ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಯಿತು. ಪರಂವಃ ಸ್ಟುಡಿಯೋ ಆರಂಭಿಸಿದಾಗ ನಾವು ಬರೀ ಶಾರ್ಟ್ ಫಿಲ್ಮ್ಸ್ ಮಾಡ್ತಿದ್ವಿ. ಅಷ್ಟು ದೊಡ್ಡ ಬಜೆಟ್ ನಮ್ಮ ಬಳಿ ಇರಲಿಲ್ಲ. 2ನೇ ಶಾರ್ಟ್ ಫಿಲ್ಮ್ ಬರೀ 20 ಸಾವಿರದಲ್ಲಿ ಮಾಡಿದ್ದೆವು. 3ನೇ ಸಿನಿಮಾ ಒಂದೂವರೆ ಲಕ್ಷದಲ್ಲಿ ಮಾಡಿದ್ವಿ"
"ಶಾರ್ಟ್ ಫಿಲ್ಮ್‌ಗಳಿಂದ ಶುರುವಾಗಿದ್ದು ಬಳಿಕ ರಾಷ್ಟ್ರಪ್ರಶಸ್ತಿ ಪಡೆಯುವಂತಹ ಸಿನಿಮಾ ಮಾಡಿದೆವು. ಇದು ಬಹಳ ಖುಷಿ ಕೊಡುವ ವಿಚಾರ. ನನಗೆ ಪ್ರಶಸ್ತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಮನುಷ್ಯರ ಜೊತೆ ನಟನೆ ಮಾಡಬಹುದು. ಯಾಕಂದರೆ ನಿಜ ಜೀವನದಲ್ಲಿ ಮಾಡ್ತಿರ್ತೀವಿ. ಸಿನಿಮಾ ಮಾತ್ರವಲ್ಲ ನಿಜ ಜೀವನದಲ್ಲೂ ಆಕ್ಟ್ ಮಾಡ್ತೀವಿ. ಆದರೆ ಚಾರ್ಲಿ ಜೊತೆ ನಟಿಸೋದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ"
"120 ದಿನ ಚಿತ್ರೀಕರಣ. ಪ್ರತಿ ಬಾರಿ 40 ಟೇಕ್. ಪ್ರತಿ ಬಾರಿಯೂ ಚೆನ್ನಾಗಿ ಮಾಡಬೇಕಿತ್ತು. ಯಾಕಂದರೆ ಚಾರ್ಲಿ ಯಾವಾಗ ಚೆನ್ನಾಗಿ ಮಾಡ್ತಾಳೆ ಅಂತ ಹೇಳೋಕೆ ಆಗ್ತಿರಲಿಲ್ಲ. ಹಾಗಾಗಿ ಅದು ಬಹಳ ಕಷ್ಟಕರವಾದ ಕೆಲಸವಾಗಿತ್ತು. ಕೊನೆ ದಿನ ಚಿತ್ರೀಕರಣದ ವೇಳೆ ನಿರ್ದೇಶಕ ಕಿರಣ್ ರಾಜ್ ಬಂದು ಚಾರ್ಲಿ-2ಗೆ ಒಳ್ಳೆ ಐಡಿಯಾ ಇದೆ ಮಾಡೋಣ ಅಂದರು"
"ಕಿರಣ್ ರಾಜ್ ಆ ರೀತಿ ಹೇಳಿದಾಗ ಚಾರ್ಲಿನ ಬಳಸಿಕೊಂಡು ಪಾರ್ಟ್-2 ಸಿನಿಮಾ ಮಾಡಿ. ನಾನು ಬರಲ್ಲ ಎಂದು ಹೇಳ್ದೆ. ಅದು ನಮ್ಮ ಕೆಲಸ. ಟಾರ್ಚರ್ ಅಂತ ಹೇಳಬಾರದು. ಆದರೆ ಮತ್ತೊಬ್ಬ ಕಲಾವಿದನ ಜೊತೆ ನಟಿಸೋದನ್ನು ಎಷ್ಟು ಎಂಜಾಯ್ ಮಾಡಬಹುದೋ ಅಷ್ಟ ಕಷ್ಟವಾಗಿತ್ತು ಚಾರ್ಲಿ ಜೊತೆ ನಟಿಸೋದು. ಆದರೆ ಆ ಕಷ್ಟಕ್ಕೆ ಇಂತಹ ಮೆಚ್ಚುಗೆ ಸಿಕ್ಕಾಗ ಅದೆಲ್ಲ ಮರೆತು ಹೋಗುತ್ತದೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಅಕ್ಟೋಬರ್ 12ರಿಂದ 15ರವರೆಗೂ ಮಾರತ್‍ಹಳ್ಳಿಯ ಇನ್ನೋವೇಟೀವ್ ಮಲ್ಟಿಪ್ಲೆಕ್ಸ್‌ನಲ್ಲಿ 4 ದಿನಗಳ ಕಾಲ ಈ ಚಿತ್ರೋತ್ಸವ ನಡೆಯಲಿದೆ. ಚಿತ್ರರಂಗದ ಹಲವು ಗಣ್ಯರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಿದ್ದರು. ಥಿಯೇಟರ್‌ಗಳಲ್ಲಿ ನೋಡಲು ಸಿಗದ ಸಾಕಷ್ಟು ಸಿನಿಮಾಗಳನ್ನು ಇಂತಹ ಚಿತ್ರೋತ್ಸವಗಳಲ್ಲಿ ನೋಡಬಹುದು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ಈ ವರ್ಷ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ಮತ್ತೆ ಗೆದ್ದಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿ ರಕ್ಷಿತ್ ನಟಿಸಿದ್ದರು. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದರು. ತೆಲುಗಿಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗಿತ್ತು. ಅಕ್ಟೋಬರ್ 27ಕ್ಕೆ ಚಿತ್ರದ 2ನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











