ಬಾಲಿವುಡ್‌ನಲ್ಲಿ ರಕ್ಷಿತ್ ಶೆಟ್ಟಿ ಹವಾ: '777 ಚಾರ್ಲಿ' ಹಿಂದಿ ವಿತರಣಾ ಹಕ್ಕು ಸೋಲ್ಡ್!
ಸದ್ಯ ಕನ್ನಡ ಚಿತ್ರರಂಗದ ನಡೆ ಬದಲಾಗಿದೆ. ಬಹುತೇಕ ಸ್ಟಾರ್ ನಟರ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಹೊಸ ಲೇಬಲ್ ಜೊತೆಗೆ ಬರುತ್ತಿವೆ. ಈ ಸಾಲಿನಲ್ಲಿ ನಟ ರಕ್ಷಿತ್ ಶೆಟ್ಟಿ ಕೂಡ ಇದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಪ್ಯಾನ್ ಸಿನಿಮಾ ಆಗಿ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
ಜೂನ್ 10ರಂದು ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಹಾಗಾಗಿ ಈ ಚಿತ್ರದ ರಿಲೀಸ್ ಬಗ್ಗೆ, ಚಿತ್ರ ತಂಡ ತಯಾರಿ ನಡೆಸಿದೆ, 'ಕೆಜಿಎಫ್ 2' ಬಳಿಕ ತೆರೆಗೆ ಬರುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ಹಾಗಾಗಿ ಈ ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. '777 ಚಾರ್ಲಿ' ಚಿತ್ರ ಭಾರತೀಯ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
'777 ಚಾರ್ಲಿ' ಚಿತ್ರ ತನ್ನ ಮೊದಲ ಹೆಜ್ಜೆಯನ್ನು ಬಾಲಿವುಡ್‌ನಲ್ಲಿ ಇಟ್ಟಿದೆ. ಮೊದಲನೆಯದಾಗಿ ಹಿಂದಿ ವಿತರಣಾ ಹಕ್ಕನ್ನು ಮಾರಾಟ ಮಾಡಿದೆ. '777 ಚಾರ್ಲಿ' ಚಿತ್ರದ ಹಿಂದಿ ವಿತರಣಾ ಹಕ್ಕನ್ನು ಹೆಸರಾಂತ 'ಯುಎಫ್ಓ' ಸಂಸ್ಥೆ ಖರೀದಿ ಮಾಡಿದೆ. ಬಹುದೊಡ್ಡ ಮೊತ್ತಕ್ಕೆ ಹಕ್ಕನ್ನು ಖರೀದಿ ಮಾಡಲಾಗಿದೆಯಂತೆ. ಅದರೆ ಎಷ್ಟು ಕೋಟಿಗೆ ಸಿನಿಮಾವನ್ನು ಕೊಡಲಾಗಿದೆ ಎನ್ನುವ ಬಗ್ಗೆ ಮಾತ್ರ ಚಿತ್ರತಂಡ ಮಾಹಿತಿ ಬಿಟ್ಟು ಕೊಟ್ಟಿಲ್ಲ.

ಈ ಮೂಲಕ ನಟ ರಕ್ಷಿತ್ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಎಲ್ಲಾ ಸೂಚನೆಯನ್ನು ಕೊಟ್ಟಿದ್ದಾರೆ. ಸೌತ್ ಚಿತ್ರಗಳಿಗೆ ನಾರ್ತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 'ಕೆಜಿಎಫ್' ಬಳಿಕ ಕನ್ನಡ ಚಿತ್ರಗಳಿಗೆ ಉತ್ತರ ಭಾರತದ ದಾರಿ ಸುಲಭವಾಗಿದೆ. ಹಾಗಾಗಿ ಈ '777 ಚಾರ್ಲಿ' ಬಾಲಿವುಡ್‌ನಲ್ಲಿ ದಾಖಲೆ ಮಾಡುವ ಸಾಧ್ಯತೆ ಇದೆ.

ರಕ್ಷಿತ್ ಶೆಟ್ಟಿ ಕನ್ನಡದ ಭರವಸೆಯ ನಟ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಳಿಕ ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ನಟಿಸುತ್ತಾ ಇದ್ದಾರೆ. ಕೊರೊನಾ ಕಾರಣದಿಂದ ರಕ್ಷಿತ್ ಶೆಟ್ಟಿ ಸಿನಿಮಾ ಬರಲು ತಡವಾಗಿದೆ. ಅದರೆ '777 ಚಾರ್ಲಿ' ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ವಿಭಿನ್ನ ಕಥೆಯಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ.
ಮನುಷ್ಯ ಮತ್ತು ನಾಯಿಯ ನಡುವಿನ ವಿಶೇಷ ಬಾಂಧವ್ಯದ ಆಧಾರದ ಮೇಲೆ, 777 ಚಾರ್ಲಿ ಕಥೆ ಇದೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಟ್ರೈಲರ್, ಟಿಸರ್, ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ರಾಜ್ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಸೇರಿದಂತೆ ಹಲವು ಕಲಾವಿದರು '777 ಚಾರ್ಲಿ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಪಕ. ಪರಮವಹ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವ ನಿರ್ದೇಶಕ ಕಿರಣರಾಜ್ ಕೆ, ಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











