'ರಿಚರ್ಡ್ ಆಂಟನಿ' ರಕ್ಷಿತ್ ಶೆಟ್ಟಿಯನ್ನು ಟ್ರೋಲ್ ಮಾಡಿದ ಹುಬ್ಬಳ್ಳಿ- ಧಾರವಾಡ ಪೊಲೀಸರು!
ರಕ್ಷಿತ್ ಶೆಟ್ಟಿ ಅಜ್ಞಾತದಲ್ಲಿದ್ದಾರೆ. ಅಭಿಮಾನಿಗಳು 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಈಗ ಬಂದೆ, ಆಗ ಬಂದೆ ಎಂದು ಹೇಳುತ್ತಿದ್ದರೂ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸಿನಿಮಾ ಘೋಷಣೆಯಾಗಿ 4 ವರ್ಷ ಕಳೆದಿದೆ. ಇನ್ನು ಸ್ಕ್ರಿಪ್ಟ್ ಬರೆಯುವುದರಲ್ಲೇ ಸಿಂಪಲ್ ಸ್ಟಾರ್ ತಲ್ಲೀನರಾಗಿದ್ದಾರೆ.
ಒಟ್ಟೊಟ್ಟಿಗೆ 3 ಸ್ಕ್ರಿಪ್ಟ್ ರೆಡಿ ಮಾಡ್ತಿದ್ದು ಒಟ್ಟಿಗೆ 'ರಿಚರ್ಡ್ ಆಂಟನಿ' ಹಾಗೂ 'ಪುಣ್ಯಕೋಟಿ' ಸಿನಿಮಾಗಳ ಕೆಲಸ ಶುರುವಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಮಾಡಿದ್ದ ಎರಡು ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇದೆಲ್ಲದರ ನಡುವೆ 'ರಿಚರ್ಡ್ ಆಂಟನಿ' ಸಿನಿಮಾ ಅಪ್‌ಡೇಟ್ ತಡವಾಗುತ್ತಿರುವುದನ್ನು ಹುಬ್ಬಳ್ಳಿ- ಧಾರವಾಡ ಪೊಲೀಸರು ತಮಾಷೆಯಾಗಿ ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಬಳಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಹೀರೊ ಆಗಿ ಸಕ್ಸಸ್ ಕಂಡ ಮೊದಲ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'. ಇತ್ತೀಚೆಗೆ ಈ ಸಿನಿಮಾ 13 ವರ್ಷ ಪೂರೈಸಿತ್ತು. ಈ ಬಗ್ಗೆ ಟ್ವೀಟ್ ಮಾಡಿ ರಕ್ಷಿತ್ ಶೆಟ್ಟಿ ಸಂತಸ ಹಂಚಿಕೊಂಡಿದ್ದರು. "ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ 13 ವರ್ಷ ಪೂರೈಸಿದೆ. ಅಸಾಧಾರಣ ಪ್ರೀತಿಯನ್ನು ಕಂಡುಕೊಂಡ ಮತ್ತು ನನ್ನ ಪ್ರಯಾಣದಲ್ಲಿ ಒಂದು ಪ್ರಮುಖ ಕ್ಷಣವಾದ ಸುಂದರವಾದ ಕಥೆ ಇದು. ಇಷ್ಟು ವರ್ಷಗಳ ಕಾಲ ಅದನ್ನು ಜೀವಂತವಾಗಿರಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು.
ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು 'ರಿಚರ್ಡ್ ಆಂಟನಿ' ಅಪ್‌ಡೇಟ್ ಯಾವಾಗ ಎಂದು ಪ್ರಶ್ನಿಸಿದ್ದರು. ಹಳೇ ಸಿನಿಮಾಗಳ ಬಗ್ಗೆ ಇನ್ನು ಎಷ್ಟು ದಿನ ಹೇಳಿಕೊಂಡು ತಿರುಗುತ್ತೀರಾ. ಬೇಗ ಹೊಸ ಸಿನಿಮಾ ಮಾಡಿ ಎಂದು ಪ್ರೀತಿಯಿಂದ ಗದರಿದ್ದರು. ಇದು ವೈರಲ್ ಆಗುತ್ತಿದ್ದಂತೆ ರಕ್ಷಿತ್ ಶೆಟ್ಟಿ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಮೆಂಟ್ ಮಾಡಲಾಗಿತ್ತು.
"ಅಭಿಮಾನಿಗಳು ರಿಚರ್ಡ್ ಆಂಟನಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ.. ನಾವೂ ಕಾಯುತ್ತಿದ್ದೇವೆ.. ರೆಡ್ ಸಿಗ್ನಲ್‌ನಲ್ಲಿ 60 ಸೆಕೆಂಡುಗಳ ಕಾಲ ಅದೇ ತಾಳ್ಮೆಯನ್ನು ತೋರಿಸೋಣ" ಎಂದು ನಗುವ ಎಮೋಜಿ ಹಾಕಿ ರೀ-ಟ್ವೀಟ್ ಮಾಡಿದ್ದರು. ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದರು. ಅಯ್ಯೋ ಹುಬ್ಬಳ್ಳಿ- ಧಾರವಾಡ ಪೊಲೀಸ್ ಇಲಾಖೆ ಕೂಡ ಟ್ರೋಲ್ ಮಾಡುವಂತಾಯ್ತು ಶೆಟ್ರೆ, ಬೇಗ ಅಪ್‌ಡೇಟ್ ಕೊಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
'ಉಳಿದವರು ಕಂಡಂತೆ' ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಕಥೆಯನ್ನು 'ರಿಚರ್ಡ್ ಆಂಟನಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೇಳುತ್ತಿದ್ದಾರೆ. ರಿಚ್ಚಿಯ ಹಿಂದಿನ ಕಥೆ ಮುಂದಿನ ಕಥೆ ಒಟ್ಟಾರೆ ಆತನ ಕಂಪ್ಲೀಟ್ ಜರ್ನಿ ಇದರಲ್ಲಿ ಇರಲಿದೆ. ದೇಶವಿದೇಶಗಳಲ್ಲಿ ಈ ಗ್ಯಾಂಗ್‌ಸ್ಟರ್ ಸಿನಿಮಾ ಕಥೆ ಸಾಗಬಹುದು ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಬೇಕಿದೆ.
4 ವರ್ಷಗಳ ಹಿಂದೆ ಸಣ್ಣ ಟೀಸರ್ ಬಿಟ್ಟು ರಕ್ಷಿತ್ ಶೆಟ್ಟಿ ಕುತೂಹಲ ಮೂಡಿಸಿದ್ದರು. ಅಚ್ಯುತ್ ಕುಮಾರ್ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗ ಇನ್ನು 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ಮುಗಿದಿರಲಿಲ್ಲ. ಎರಡೂ ಸಿನಿಮಾಗಳನ್ನು ಮುಗಿಸಿ 'ರಿಚರ್ಡ್ ಆಂಟನಿ' ಕಥೆ ಹೇಳುವುದಾಗಿ ರಕ್ಷಿತ್ ತಿಳಿಸಿದ್ದರು. ಬಹಳ ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದಾಗಿ ಹೇಳಿದ್ದರು. ಎಲ್ಲವೂ ನಿರೀಕ್ಷೆ ಮೂಡಿಸಿದೆ.
12 ವರ್ಷಗಳ ಹಿಂದೆ ಬಂದಿದ್ದ 'ಉಳಿದವರು ಕಂಡಂತೆ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಲಿಲ್ಲ. ನಿರ್ಮಾಪಕರಿಗೆ ನಷ್ಟ ತಂದೊಡ್ಡಿತ್ತು. ಆದರೆ ಕಲ್ಟ್ ಹಿಟ್ ಎನಿಸಿಕೊಂಡಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಅದೇ ಕಾರಣಕ್ಕೆ ಸೀಕ್ವೆಲ್ ಮಾಡುವಂತೆ ಮನವಿ ಮಾಡುತ್ತಲೇ ಇದ್ದರು. ರಕ್ಷಿತ್ ಶೆಟ್ಟಿ ಕೂಡ ಅದಕ್ಕೆ ಸೈ ಎಂದಿದ್ದರು. ಸ್ಕ್ರಿಪ್ಟ್ ಬರೆಯಲು ಆರಂಭಿಸಿದ್ದರು. ಆದರೆ 4 ವರ್ಷ ಕಳೆದರೂ ಇನ್ನು ಸ್ಕ್ರಿಪ್ಟ್ ಸಿದ್ಧವಾಗಿಲ್ಲ ಎನ್ನುವುದು ಬೇಸರದ ಸಂಗತಿ.


Click it and Unblock the Notifications











