ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್: ಮನು-ಪ್ರಿಯಾ ಪ್ರಪಂಚದ ಸಮುದ್ರ, ಪ್ರೇಮ, ಪ್ರಣಯ, ದುರಂತಗಳ ಹೂರಣ
ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹೇಮಂತ್ ಎಂ ರಾವ್ ನಿರ್ದೇಶನದ ಚಲನಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಎರಡು ಭಾಗಗಳ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.
ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ಹೃದಯದಲ್ಲಿ ಸಾಗರದಷ್ಟು ಪ್ರೀತಿ ತಂಬಿಕೊಂಡಿರುವ ಇಬ್ಬರು ಪ್ರೇಮಿಗಳ ಕಥೆ- ವ್ಯಥೆ ಏನು ಎಂಬುದನ್ನು ತಿಳಿಸುತ್ತದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮನು ಎಂಬ ಪಾತ್ರವನ್ನು, ನಾಯಕಿ ರುಕ್ಮಿಣಿ ವಸಂತ್ ಪ್ರಿಯಾ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

3:14 ನಿಮಿಷದ ಟ್ರೈಲರ್‌ನಲ್ಲಿ ಮನು ಮತ್ತು ಪ್ರಿಯಾಳ ಪ್ರಪಂಚವನ್ನು ಒಂದು ಸುತ್ತು ಹಾಕಬಹುದು. ಇಬ್ಬರ ಉತ್ಕಟ ಪ್ರೇಮ, ಪ್ರಣಯ, ಅದರಲ್ಲೊಂದು ತಿರುವು ಕಾಣಿಸುತ್ತದೆ. ಪ್ರಿಯಾಳ ಕಣ್ಣುಗಳಲ್ಲಿ ಕಳೆದು ಹೋಗುವ ಮನುಗೆ ಮಾತಿಗಿಂತ ಮೌನವೇ ಪ್ರಿಯ ಎನಿಸುತ್ತದೆ. ಇನ್ನು ಸಮುದ್ರದ ಅಲೆಗಳ ಸದ್ದಿನಲ್ಲಿ ತನ್ನ ಇನಿಯನ ಜೊತೆ ಸೇರುವ ಕನಸಿನಲ್ಲಿರುವ ಪ್ರಿಯಾಳಿಗೆ ಕನಸು ಮುಂದುವರಿಯದ ಯೋಚನೆ.
ಟ್ರೇಲರ್ ಆರಂಭದಲ್ಲಿ ನೀಲಿ ನೂಲಿನಲ್ಲಿ ಹೆಣೆದ ಸಮುದ್ರದ ಅಲೆಗಳಂತೆ ಇಬ್ಬರ ಪ್ರೇಮವನ್ನು ನಿರ್ದೇಶಕ ಹೇಮಂತ್ ಎಂ ರಾವ್ ಹೆಣೆದಿದ್ದಾರೆ. ಇದರ ನಡುವೆ ಮನುವನ್ನು ಜೈಲಿಗೆ ತಳ್ಳುವ ಮೂಲಕ ಪ್ರೇಕ್ಷಕರಿಗೆ ಒಂದು ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ. ಅಲ್ಲಿಂದ ಅವರಿಬ್ಬರ ಹೋರಾಟದ ಬದುಕು, ಜೈಲಿನ ಜೀವನ ಎಲ್ಲವೂ ಕಾಣಿಸಿದೆ. ನಟರಾದ ಅಚ್ಯುತ್ ಕುಮಾರ್ ಮತ್ತು ಅವಿನಾಶ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕಿ ರುಕ್ಮಿಣಿ ವಸಂತ್ ಅವರ ಹಿನ್ನಲೆ ಧ್ವನಿಯಿಂದ ಆರಂಭವಾಗುವ ಟ್ರೈಲರ್‌ನಲ್ಲಿ ಅವರ ನಟನೆ ಚೆನ್ನಾಗಿದೆ. ಸರಳವಾದ ಉಡುಪು ಧರಿಸಿರುವ ಅವರು ಮನು ಜೈಲಿಗೆ ಹೋಗುವ ಯಾವ ದೃಶ್ಯದಲ್ಲಿಯೂ ಕಣ್ಣೀರು ಸುರಿಸಿಲ್ಲ. ಇದು ಅವರ ಪಾತ್ರದ ಗಟ್ಟಿತನವನ್ನು ಸೂಚಿಸುತ್ತದೆ. ಟ್ರೈಲರ್ ನೋಡಿದರೇ ಸುಂದರ ದೃಶ್ಯ, ಚರಣ್ ರಾಜ್ರ ಹಿನ್ನೆಲೆ ಸಂಗೀತ, ಅಲೆಗಳ ನಾದ ಕಿವಿಯಲ್ಲಿ ಗುಂಗುಟ್ಟಲಿದೆ.
"ಮನು ಮತ್ತು ಪ್ರಿಯಾಳ ಪ್ರಪಂಚದ ಸಣ್ಣ ಪರಿಚಯ ನಿಮ್ಮ ಮುಂದೆ. ಪ್ರೀತಿಯಿರಲಿ" ಎಂದು ರಕ್ಷಿತ್ ಶೆಟ್ಟಿ ಟ್ರೇಲರ್ ಹಂಚಿಕೊಂಡಿದ್ದಾರೆ.
ಈ ಕಥೆಯ ಉದ್ದಕ್ಕೂ ಪ್ರೀತಿಯ ಒಂದು ಸುಂದರವಾದ ಸ್ಟ್ರೈನ್ ಇದೆ. ನಾವು ನಿಮ್ಮೊಂದಿಗೆ ಮನು ಮತ್ತು ಪ್ರಿಯಾ ಅವರ ಪ್ರಪಂಚದ ಒಂದು ಭಾಗವನ್ನು ಹಂಚಿಕೊಳ್ಳುತ್ತಿದ್ದೇವೆ. ಅವರ ಪ್ರೀತಿಯಲ್ಲಿ ಇರುವ ತೀವ್ರತೆ ಮತ್ತು ಸೌಂದರ್ಯವನ್ನು ನೀವು ನೋಡಿ ಎಂದು ರಕ್ಷಿತ್ ಹೇಳಿದ್ದಾರೆ. ಜೊತೆಗೆ ನಿರ್ದೇಶಕ ಹೇಮಂತ್ ಎಂ ರಾವ್ ಮತ್ತು ನಾಯಕಿ ರುಕ್ಮಿಣಿ ವಸಂತ್, ಆದಿ ಮತ್ತು ಚರಣ್ ರಾಜ್ ಅವರನ್ನು ಹೊಗಳಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಎರಡನೇ ಭಾಗ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದ್ದು, ಅದರಲ್ಲಿ ರಕ್ಷಿತ್ ಶೆಟ್ಟಿ ಜೊತೆ ಚೈತ್ರ ಜೆ ಆಚಾರ್ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











