ಇಂಟರ್‌ನೆಟ್ ಕಾಸ್ಟ್ಲಿ ಆಗಿದ್ದ ಕಾಲದಲ್ಲಿ 'ಆ' ಸಿಡಿಗಳನ್ನು ಇಟ್ಟುಕೊಂಡಿದ್ವಿ.. ಪೋಲಿ ದಿನಗಳನ್ನು ನೆನೆದ ರಕ್ಷಿತ್
ಬಹುನಿರೀಕ್ಷಿತ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಈ ವಾರವೇ ಬಿಡುಗಡೆ ಆಗ್ತಿದೆ. ಭಿನ್ನ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಪ್ರಚಾರ ಕಾರ್ಯ ನಡೀತಿದೆ. ಪುನೀತ್ ರಾಜ್‌ಕುಮಾರ್ ಕೂಡ ಈ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಚಿತ್ರವನ್ನು ರಕ್ಷಿತ್ ಶೆಟ್ಟಿ ಅರ್ಪಿಸುತ್ತಿದ್ದಾರೆ. ಸದ್ಯ ಸಿಂಪಲ್ ಸ್ಟಾರ್ 'ಅನುಶ್ರೀ ಆಂಕರ್' ಯೂಟ್ಯೂಬ್ ಚಾನಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ತಂಡಕ್ಕೆ ಶುಭ ಹಾರೈಸಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ ತಮ್ಮದೇ 'ಪರಂವ' ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ.

ಕಾಲೇಜು ಹಾಸ್ಟೆಲ್ ಹುಡುಗರ ಹಾವಳಿ, ನೋವು, ನಲಿವು ಎಲ್ಲವನ್ನು ಚಿತ್ರದಲ್ಲಿ ಸೊಗಸಾಗಿ ತೆರೆಗೆ ತರಲಾಗುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ಶುರುವಾದಾಗಿನಿಂದಲೂ ವಿಭಿನ್ನ ರೀತಿಯಲ್ಲಿ ಚಿತ್ರತಂಡ ಪ್ರಚಾರ ಮಾಡುತ್ತಾ ಬಂದಿತ್ತು. ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.
ರಕ್ಷಿತ್ ಶೆಟ್ಟಿ ಹಾಸ್ಟೆಲ್ ಲೈಫ್
ಅಭಿಮಾನಿಗಳ ಪ್ರೀತಿಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಆಗಿದ್ದಾಗ ಅಲ್ಲಿನ ಬಾಯ್ಸ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಿಲೀಸ್‌ಗೆ ಮುಂದಾಗಿರುವ ರಕ್ಷಿತ್ ತಮ್ಮದೇ ತಮ್ಮ ಹಾಸ್ಟೆಲ್‌ನಲ್ಲಿ ಸುತ್ತಾಡುತ್ತಾ ಅನುಶ್ರೀಗೆ ವಿಶೇಷ ಸಂದರ್ಶನ ನೀಡಿದ್ದಾರೆ. 15 ವರ್ಷಗಳ ಬಳಿಕ ತಮ್ಮ ಹಾಸ್ಟೆಲ್‌ಗೆ ಹೋಗಿ ಆ ದಿನಗಳನ್ನು ನೆನೆದಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಆ ಸಿಡಿಗಳನ್ನು ಇಟ್ಟುಕೊಂಡಿದ್ದ ರಕ್ಷಿತ್
ಹಲವು ವರ್ಷಗಳ ಬಳಿಕ ತಮ್ಮ ಹಾಸ್ಟೆಲ್ ರೂಮ್‌ನಲ್ಲಿ ಕೂತು ರಕ್ಷಿತ್ ಮಾತನಾಡಿದ್ದಾರೆ. "ನಮ್ಮ ರೂಮ್‌ನಲ್ಲಿ ಒಂದು ಕಂಪ್ಯೂಟರ್ ಇತ್ತು. ನನ್ನ ಫೋನ್ ಅಲ್ಲಿ 1ಕೆಬಿ ಇಂಟರ್‌ನೆಟ್ ಡೇಟಾ ಇರ್ತಿತ್ತು. ಅದರಿಂದ ರಿಸರ್ಚ್ ಎಲ್ಲ ಮಾಡುತ್ತಿದ್ದೆ. ಒಂದು ವೆಬ್ ಪೇಜ್ ಓಪನ್ ಆಗಲು ಬಹಳ ಸಮಯ ಆಗ್ತಿತ್ತು" ಎಂದಿದ್ದಾರೆ. ಈ ವೇಳೆ ಅನುಶ್ರೀ ಯಾವ ವೆಬ್‌ಸೈಟ್ ಏನು ರೀಸರ್ಚ್ ಅಂತ ನಾನು ಕೇಳಲ್ಲ, ಯಾಕಂದರೆ ಬಾಯ್ಸ್ ಹಾಸ್ಟೆಲ್ ಅಂದ್ಮೇಲೆ ಅದನ್ನೆಲ್ಲಾ ಕೇಳಬಾರದು ಎಂದಿದ್ದಾರೆ. ಕೂಡಲೇ ರಕ್ಷಿತ್ "ಅದಕ್ಕೆಲ್ಲಾ ಸೀಡಿಗಳು ಇರ್ತಿತ್ತು" ಎಂದು ನಗೆಚಟಾಕಿ ಹಾರಿಸಿದ್ದಾರೆ.
ಸೀನಿಯರ್ ಸ್ಟೂಡೆಂಟ್ಸ್ ರ್ಯಾಗಿಂಗ್
'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ತೋರಿಸಿದ್ದಂತ ಹುಡುಗಾಟಿಕೆ, ಪೋಲಿತನ ತಮ್ಮ ಹಾಸ್ಟೆಲ್ ದಿನಗಳಲ್ಲಿ ಇತ್ತು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ತಮ್ಮದೇ ಕಾಲೇಜು ದಿನಗಳ ಸಾಕಷ್ಟು ವಿಚಾರಗಳನ್ನು ಆ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದಿದ್ದಾರೆ. ಕಾಲೇಜಿಗೆ ಸೇರಿದ ಆರಂಭದ ದಿನಗಳಲ್ಲಿ ನಾನು ಸೀನಿಯರ್ಸ್‌ಗೆ ತಿರುಗೇಟು ಕೊಟ್ಟಿದ್ದು. ಬಳಿಕ ಅವರೆಲ್ಲಾ ಸೇರಿ ನನ್ನನ್ನು ಒಂದು ರೂಮ್‌ನಲ್ಲಿ ಕೂಡಿ ಹಾಕಿ ಕ್ಲಾಸ್ ತಗೊಂಡಿದ್ದರು. ಅದನ್ನು 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ತೋರಿಸಿದ್ದೇವೆ ಎಂದಿದ್ದಾರೆ.
ಹಾಸ್ಟೆಲ್ ಲೈಫ್ ಬೆಸ್ಟ್ ಲೈಫ್
4 ವರ್ಷಗಳ ಕಾಲ ನಿಟ್ಟೆ ಬಾಯ್ಸ್ ಹಾಸ್ಟೆಲ್‌ನಲ್ಲಿ ರಕ್ಷಿತ್ ಶೆಟ್ಟಿ ಇದ್ದರಂತೆ. ನನ್ನ ಜೀವನದಲ್ಲಿ ಮರೆಯಲಾಗದ ದಿನಗಳನ್ನು ನಾನು ಇಲ್ಲಿ ಕಳೆದಿದ್ದೇನೆ ಎಂದಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರವನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. '777 ಚಾರ್ಲಿ' ಸಿನಿಮಾ ವೇಳೆ ಅರವಿಂದ್ ಈ ಚಿತ್ರದ ಒಂದಷ್ಟು ಫುಟೇಜ್ ತೋರಿಸಿದ್ದರು. ನನಗೆ ಬಹಳ ಇಷ್ಟವಾಗಿತ್ತು. ನಂತರ ಸಿನಿಮಾ ನೋಡಬೇಕು ಎಂದೆ. ನೋಡ್ತಾ ನೋಡ್ತಾ ನನ್ನ ಹಾಸ್ಟೆಲ್ ದಿನಗಳಿಗೆ ನಾನು ಕನೆಕ್ಟ್ ಆಗಿದ್ದೆ. ಹಾಗಾಗಿ ಈ ಸಿನಿಮಾ ರಿಲೀಸ್‌ಗೆ ಮುಂದಾದೆ ಎಂದು ಹೇಳಿದ್ದಾರೆ.


Click it and Unblock the Notifications











