ನಾಗಾಲೋಟದಲ್ಲಿ '777 ಚಾರ್ಲಿ': ಶನಿವಾರ ಗಳಿಸಿದ್ದೆಷ್ಟು?
ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹಾಗೂ ಬಳಗ ಸತತ ಮೂರಕ್ಕೂ ಹೆಚ್ಚು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ '777 ಚಾರ್ಲಿ'. ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಗೆ ಇತ್ತು.
'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳ ಯಶಸ್ಸು ಕೇವಲ ಅದೃಷ್ಟವಲ್ಲ, ಕನ್ನಡ ಸಿನಿಮಾರಂಗಕ್ಕೆ ಪ್ರತಿಭೆ ಇದೆ ಎಂದು ಸಾಬೀತುಪಡಿಸಲು ಈ ಸಿನಿಮಾದ ಯಶಸ್ಸು ಅತ್ಯಂತ ಅವಶ್ಯಕವಾಗಿತ್ತು ಸಹ. ಅಂತೆಯೇ, ನ್ಯಾಷನಲ್ ಸಿನಿಮಾ ಮಾರುಕಟ್ಟೆಯಲ್ಲಿ ಗುರುತು ಮೂಡಿಸಲು '777 ಚಾರ್ಲಿ' ಸಿನಿಮಾ ತುಸು ಯಶಸ್ವಿಯಾಗಿದೆ.
ರಕ್ಷಿತ್ ಶೆಟ್ಟಿ ಸ್ವತಃ ನಿರ್ಮಾಪಕ ಆಗಿರುವ '777 ಚಾರ್ಲಿ' ಸಿನಿಮಾ ಜೂನ್ 10 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಆಗಿದ್ದು, ಬಿಡುಗಡೆ ಬಳಿಕ ಮೊದಲ ವಾರಾಂತ್ಯದ ಕಲೆಕ್ಷನ್ ಮೇಲೆ ಸಿನಿಮಾ ಪಂಡಿತರ ಕಣ್ಣಿದೆ. ಇದೀಗ ಶನಿವಾರ (ಜೂನ್ 11)ರಂದು ರಕ್ಷಿತ್ ಶೆಟ್ಟಿಯ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕ ಇಲ್ಲಿದೆ.

ಮೊದಲ ದಿನ ಗಳಿಸಿದ್ದೆಷ್ಟು?
ಜೂನ್ 10ರಂದು '777 ಚಾರ್ಲಿ' ಸಿನಿಮಾ ರಿಲೀಸ್ ಅಗಿದ್ದು. ಚಿತ್ರ ಮೊದಲ ದಿನ 6 ಕೋಟಿ ಕೆಲಕ್ಷನ್ ಮಾಡಿದೆ. ಮೊದಲ ದಿನ ದೊಡ್ಡ ಮಟ್ಟದಲ್ಲಿ ಸಿನಿಮಾ ಓಪನಿಂಗ್ ಕಂಡಿಲ್ಲ. ಆದರೂ ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಈ ಚಿತ್ರ ಅಬ್ಬರದ ಮಾಸ್ ಸಿನಿಮಾ ಅಲ್ಲ. ಇದು ಪ್ರೇಕ್ಷಕರನ್ನು ನಗಿಸಿ, ಅಳಿಸುವ ಸಿನಿಮಾ. ಹಾಗಾಗಿ ನಿಧಾನವಾಗಿ ಪಿಕಪ್ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿತ್ತು. ಅಂತೆಯೇ ಸಿನಿಮಾ ಪಿಕಪ್ ಆಗಿದೆ.

ಶನಿವಾರ ಗಳಿಸಿದ್ದೆಷ್ಟು?
ಸಿನಿಮಾ ಬಿಡುಗಡೆ ಆದ ಎರಡನೇ ದಿನ ಅಂದರೆ ಶನಿವಾರ '777 ಚಾರ್ಲಿ' ಸಿನಿಮಾವು 9.15 ಕೋಟಿ ರುಪಾಯಿ ಹಣವನ್ನು ದೇಶದಾದ್ಯಂತ ಗಳಿಕೆ ಮಾಡಿದೆ. ಅಲ್ಲಿಗೆ ಸಿನಿಮಾದ ಒಟ್ಟು ಕಲೆಕ್ಷನ್ 15 ಕೋಟಿಯನ್ನು ದಾಟಿದೆ. ಭಾನುವಾರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಭಾನುವಾರ ಈ ಸಿನಿಮಾವು 10 ಅಥವಾ 11 ಕೋಟಿ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.

ಭಾರಿ ಲಾಭ ಪಡೆದ ನಿರ್ಮಾಪಕ ರಕ್ಷಿತ್ ಶೆಟ್ಟಿ
ಮೂಲಗಳ ಪ್ರಕಾರ '777 ಚಾರ್ಲಿ' ಸಿನಿಮಾಕ್ಕೆ 15 ಕೋಟಿ ಬಂಡವಾಳ ಹೂಡಲಾಗಿದೆ ಎನ್ನಲಾಗುತ್ತಿದೆ. ಅದರಂತೆ ಸಿನಿಮಾ ಬಿಡುಗಡೆ ಆದ ಎರಡನೇ ದಿನಕ್ಕೆ ಈ ಹಣ ಮರಳಿ ಬಂದಿದ್ದು, ಉಳಿದದ್ದೆಲ್ಲವೂ ಲಾಭವೇ ಆಗಿರಲಿದೆ. ಇದರ ಜೊತೆಗೆ ಸಿನಿಮಾಕ್ಕೆ ಬಹಳ ಒಳ್ಳೆಯ ವಿಮರ್ಶೆ ಬಂದಿರುವ ಕಾರಣ ಸಿನಿಮಾದ ಟಿವಿ ಹಕ್ಕುಗಳು ಹಾಗೂ ಡಿಜಿಟಲ್ ಹಕ್ಕಿದೆ ಭಾರಿ ಬೇಡಿಕೆ ಇದ್ದು, ಎರಡೂ ಒಟ್ಟಾಗಿ ಸುಮಾರು ಐವತ್ತು ಕೋಟಿಗೂ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಜಿಎಸ್ ಗುಪ್ತ ಸಹ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾದಲ್ಲಿ ಯಾರ್ಯಾರಿದ್ದಾರೆ?
'777 ಚಾರ್ಲಿ' ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧದ ಅನಾವರಣ ಮಾಡುತ್ತಿದೆ. ಆಕ್ಷನ್ ದೃಶ್ಯಗಳಿಲ್ಲದೆ, ಮಾಸ್ ಡೈಲಾಗ್‌ಗಳಿಲ್ಲದೆ ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಹೆಣೆದ ಕತೆ ಇದಾಗಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರಾಜ್ ಬಿ ಶೆಟ್ಟಿ, ಸಂಗೀತ ಶಂಗೇರಿ ಅತಿಥಿ ಪಾತ್ರಗಳಲ್ಲಿ ನಟ ದಾನಿಶ್ ಸೇಠ್, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ.


Click it and Unblock the Notifications











