'ರಿಚರ್ಡ್ ಆಂಟನಿ' ಮುಹೂರ್ತಕ್ಕೂ ಮುನ್ನ 'ಬಾಲರಾಮ'ನ ದರ್ಶನ; 'ಅಯೋಧ್ಯೆ'ಯಲ್ಲಿ ಗಂಧದಗುಡಿಯ ಶ್ರೀಮನ್ನಾರಾಯಣ..!
ಪರೋಪಕಾರ, ಸ್ನೇಹಶೀಲ ಗುಣಗಳಿಗೆ ಹೆಸರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದೈವ ಭಕ್ತ ಕೂಡ ಹೌದು. ಸಿನಿಮಾಗೆ ಸಂಬಂಧಿಸಿದ ಕೆಲಸಗಳಿಂದ ಬಿಡುವು ಸಿಕ್ಕಾಗಲೆಲ್ಲ ನೆಮ್ಮದಿಯನ್ನ ಅರಸಿ, ದೇವಸ್ಥಾನಕ್ಕೆ ತೆರಳುವುದು ರಕ್ಷಿತ್ ಶೆಟ್ಟಿ ರೂಢಿಸಿಕೊಂಡ ಅಭ್ಯಾಸ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ತೆರಳಿದ್ದಾರೆ. ಬಾಲರಾಮನ ಪಾದಕ್ಕೆರಗಿ ಆಶೀರ್ವಾದವನ್ನೂ ಪಡೆದಿದ್ದಾರೆ.
ಬಾಲರಾಮನ ದರ್ಶನ ಪಡೆಯಲು, ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ಒಬ್ಬರೇ ತೆರಳಿದ್ದರಾ ಅಥವಾ ಸ್ನೇಹಿತರು ಇವರ ಜೊತೆ ಇದ್ದರಾ ಅನ್ನುವುದಕ್ಕೆ ಸದ್ಯಕ್ಕೆ ಉತ್ತರ ಇಲ್ಲವಾದರೂ, ಕನ್ನಡ ಚಿತ್ರರಂಗದ ಶ್ರೀಮನ್ನಾರಾಯಣನನ್ನ ಅಯೋಧ್ಯೆಯಲ್ಲಿ ಕಂಡು ಅಲ್ಲಿನ ಅಭಿಮಾನಿಗಳು ಪುಳಕಿತಗೊಂಡಿದ್ದಾರೆ. ಸೆಲ್ಫೀ, ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರ ಅಯೋಧ್ಯೆ ಪ್ರವಾಸದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

ಉಡುಪಿ ನನ್ನೂರು ಎಂದು ಕೆಂಡ ಕಾರಿದ್ದ ಕರ್ಣ..!
ರಕ್ಷಿತ್ ಶೆಟ್ಟಿ ಅವರ ದೈವ ಭಕ್ತಿಗೆ ಕಳೆದ ವರ್ಷ ಉಡುಪಿ ಮಠದ ವಿಚಾರ ಕೈಗನ್ನಡಿ ಹಿಡಿದಿತ್ತು. ಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೀಡಿದ ಹೇಳಿಕೆಯಿಂದ ಕೆರಳಿ ಕೆಂಡವಾಗಿದ್ದ ರಕ್ಷಿತ್ ಶೆಟ್ಟಿ, ಉಡುಪಿ ಮಠದ ಇತಿಹಾಸದ ಬಗ್ಗೆ ಸಾವಿರ ವರ್ಷಗಳ ಇತಿಹಾಸವಿದೆ. ನಿಮಗೆ ಐಡಿಯಾ ಇಲ್ಲ ಅಂದ್ರೆ ನೀವು ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಯಾಕೆ ಮಾತನಾಡ್ತೀರಿ? ಎಂದು ಪ್ರಶ್ನೆ ಮಾಡಿದ್ದರು. ಆ ನಂತರ ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲ, ಟ್ಯಾಂಕರ್ ಹಿಡಿತೀನಿ ಎಂದು ಕಿಡಿ ಕಾರಿದ್ದರು. ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ಸ್ಪಷ್ಟತೆ ಇಲ್ಲ. ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲವೆಂದಿದ್ದರು. ಕೃಷ್ಣ ಮಠಕ್ಕಿಂತಲೂ ಅನಂತೇಶ್ವರ ದೇಗುಲ ಹಳೆಯದು, ಅದಕ್ಕಿಂತ ಚಂದ್ರಮೌಳೀಶ್ವರ ದೇಗುಲ ಇನ್ನೂ ಹಳೆಯದು ಎಂದಿದ್ದರು ರಕ್ಷಿತ್ ಶೆಟ್ಟಿ
ದೈವ ಕೋಲದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದಿದ್ದ ರಕ್ಷಿತ್ ಶೆಟ್ಟಿ..!
ಇನ್ನೂ ಈ ವರ್ಷದ ಆರಂಭದಲ್ಲಿ ಮನೆಯ ದೈವ ಕೋಲದಲ್ಲಿ ಭಾಗವಹಿಸಿ ರಕ್ಷಿತ್ ಶೆಟ್ಟಿ ದೈವದ ಆಶೀರ್ವಾದ ಪಡೆದಿದ್ದರು. ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಪಾಲ್ಗೊಂಡಿದ್ದರು. ಕಾಪು ಮಾರಿಗುಡಿ ದೇವಾಲಯಕ್ಕೂ ಸಿಂಪಲ್ ಸ್ಟಾರ್ ಭೇಟಿ ನೀಡಿದ್ದರು. ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನವನ್ನೂ ಪಡೆದಿದ್ದರು. ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಗೋ ಪ್ರೇಮವನ್ನ ಮೆರೆದಿದ್ದರು ರಕ್ಷಿತ್ ಶೆಟ್ಟಿ.

ರಿಚರ್ಡ್ ಆಂಟನಿಯಲ್ಲಿ ರಕ್ಷಿತ್ ಶೆಟ್ಟಿ ತಲ್ಲೀನ..!
ಸಪ್ತ ಸಾಗರದಾಚೆ ಸೈಡ್ ಎ ಹಾಗೂ ಸೈಡ್ ಬಿ ಚಿತ್ರದ ಗೆಲುವಿನಿಂದ ಎಕ್ಸಾಯಟ್ ಆಗಿರುವ ರಕ್ಷಿತ್ ಶೆಟ್ಟಿ, ಸದ್ಯಕ್ಕೆ ರಿಚರ್ಡ್ ಆಂಟನಿಯ ಧ್ಯಾನವನ್ನ ಮಾಡ್ತಿದ್ದಾರೆ. ಮಾರ್ಚ್ 28ಕ್ಕೆ 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡು 10 ವರ್ಷ ಆಗಲಿದೆ. ಆ ಹಿನ್ನೆಲೆಯಲ್ಲಿ 'ರಿಚರ್ಡ್ ಆಂಟನಿ' ಸಿನಿಮಾಗೆ ಅದೇ ದಿನ ರಕ್ಷಿತ್ ಶೆಟ್ಟಿ ತಮ್ಮ ಕನಸಿನ ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದಕ್ಕೆ ಪೂರಕವಾಗಿ ಇದೀಗ ರಿಚರ್ಡ್ ಆಂಟನಿ ಚಿತ್ರವನ್ನ ಆರಂಭ ಮಾಡುವ ಮುನ್ನ ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ತೆರಳಿ ಬಾಲರಾಮನ ಆಶೀರ್ವಾದ ಪಡೆದಿದ್ದಾರೆ


Click it and Unblock the Notifications











