Sapta Sagaradaache Ello: ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್: ಕಲೆಕ್ಷನ್ ಎಷ್ಟು?
ಸ್ಯಾಂಡಲ್‌ವುಡ್‌ನಲ್ಲೀಗ ಸಿನಿಮಾಗಳ ಪೇಯ್ಡ್ ಪ್ರೀಮಿಯರ್ ಶೋಗಳ ಟ್ರೆಂಡ್ ಶುರುವಾಗಿದೆ. ಅಂದ್ರೆ ಶುಕ್ರವಾರ ಸಿನಿಮಾ ರಿಲೀಸ್ ಆಗುವ ಮುನ್ನವೇ ಅಭಿಮಾನಿಗಳಿಗಾಗಿ ಸ್ಪೆಷಲ್ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗುತ್ತಿದೆ. ಈ ಹಿಂದೆ ಹಲವು ಸಿನಿಮಾಗಳಿಗೆ ಇಂತಹ ಶೋಗಳನ್ನು ಆಯೋಜಿಸಲಾಗಿತ್ತು. 'ಸಪ್ತ ಸಾಗರದಾಚೆ ಎಲ್ಲೋ' ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇಬ್ಬರ ಕೆಮೆಸ್ಟ್ರಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಪ್ರೇಮಕಾವ್ಯ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ. ಸಿನಿಮಾ ನಿರೂಪಣೆ ಸ್ವಲ್ಪ ಸ್ಲೋ ಎನ್ನುವ ಮಾತುಗಳ ನಡುವೆಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಬುಧವಾರವೇ 'ಸಪ್ತ ಸಾಗರದಾಚೆ ಎಲ್ಲೋ' ಮೊದಲ ಪ್ರೀಮಿಯರ್ ಶೋ ಆರಂಭವಾಗಿತ್ತು. ಗುರುವಾರ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ನಾಲ್ಕೈದು ದಿನಗಳ ಹಿಂದೆಯೇ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಶೋಗಳು ಒಂದೊಂದಾಗಿ ಹೌಸ್‌ಫುಲ್ ಆಗುತ್ತಿದ್ದಂತೆ ಸಂಖ್ಯೆ ಹೆಚ್ಚಿಸಲಾಗಿತ್ತು. ಗುರುವಾರ ಸಂಜೆಯೇ ರಾಜ್ಯದ್ಯಂತ 50ಕ್ಕೂ ಅಧಿಕ ಶೋಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಿದ್ದರು.
ಬೆಂಗಳೂರಿನಲ್ಲಿ 40, ಮೈಸೂರು 5, ಮಂಗಳೂರು 3, ತುಮಕೂರು, ಕಲಬುರಗಿ, ದಾವಣಗೆರೆಯಲ್ಲಿ ತಲಾ ಒಂದೊಂದು ಪೇಯ್ಡ್ ಪ್ರೀಮಿಯರ್ ಶೋ ಸೇರಿ ಒಟ್ಟು 52 ಶೋ ಏರ್ಪಡಿಸಲಾಗಿತ್ತು. ಪ್ರೇಕ್ಷಕರು ಬಹಳ ಉತ್ಸಾಹದಿಂದಲೇ ಸಿನಿಮಾ ವೀಕ್ಷಿಸಿದ್ದರು. ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ನೋಡಿ ಕೊಂಡಾಡಿದ್ದರು. ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ಮಿಡ್ ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋಗಳು ಪ್ರದರ್ಶನವಾಗುತ್ತದೆ. ಆದರೆ ಈಗ ಒಂದು ದಿನ ಮೊದಲೇ ಈ ರೀತಿ ಪ್ರೀಮಿಯರ್ ಶೋಗಳ ಆರ್ಭಟ ಶುರುವಾಗುತ್ತಿದೆ.
ಬಹುತೇಕ ಪ್ರೀಮಿಯರ್ ಶೋಗಲು ಹೌಸ್‌ಫುಲ್ ಆಗಿತ್ತು. ಹಾಗಾಗಿ ಒಟ್ಟು ಕಲೆಕ್ಷನ್ ಎಷ್ಟು ಎನ್ನುವ ಚರ್ಚೆ ನಡೀತಿದೆ. ಒಟ್ಟು 52 ಶೋಗಳಿಂದ 40 ಲಕ್ಷ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಆಗಿತ್ತು ಎನ್ನುವ ಅಂದಾಜಿದೆ. ಆ ಮೂಲಕ ಸಿನಿಮಾ ಶುಕ್ರವಾರ ಬೆಳಗ್ಗೆ ರಿಲೀಸ್ ಆಗುವ ಮೊದಲೇ 40 ಲಕ್ಷ ಬಾಚಿಕೊಂಡಿತ್ತು ಎನ್ನಲಾಗ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರಂತೂ ಖುಷಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಬರೆದುಕೊಳ್ಳುತ್ತಿದ್ದಾರೆ. ಅದು ನಿಧಾನವಾಗಿ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುವಂತೆ ಮಾಡಿದೆ.
ನಗರದ ಕೆಜಿ ರಸ್ತೆಯ ತ್ರಿವೇಣಿ ಥಿಯೇಟರ್‌ನಲ್ಲಿ ಸಡಗರ ಸಂಭ್ರಮದಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಚಿತ್ರತಂಡ ಕೂಡ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಖುಷಿಪಟ್ಟಿದೆ. ಕಾಡುವ ಪ್ರೇಮಕಥೆಯನ್ನು ನೋಡಿ ಸಿನಿರಸಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಎ ಸೈಡ್ ನೋಡಿದ್ದಾಯ್ತು ಬೇಗ ಬಿ ಸೈಡ್ ತೋರಿಸಿ ಎಂದು ಕೇಳುತ್ತಿದ್ದಾರೆ. ಅಕ್ಟೋಬರ್ 20ಕ್ಕೆ 2ನೇ ಭಾಗ ರಿಲೀಸ್ ಆಗಲಿದೆ. ಇನ್ನು ಕರ್ನಾಟಕ ಮಾತ್ರವಲ್ಲದೇ ಹೈದರಾಬಾದ್, ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಆಗಿದೆ.
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಸದ್ಯಕ್ಕಿಲ್ಲ ಮುಂದೆ ನೋಡೋಣ ಎಂದು ಸಿಂಪಲ್ ಸ್ಟಾರ್ ಹೇಳಿದ್ದರು. ನಮ್ಮದೇ ಭಾಷೆಯಲ್ಲಿ ಪರಭಾಷಿಕರು ಸಿನಿಮಾ ನೋಡಬೇಕು ಎನ್ನುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.


Click it and Unblock the Notifications











