'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ಚೆನ್ನಾಗಿತ್ತಾ? ಈಗ ಕೇಳ್ತಿದ್ದೀರಾ? 'ಕೆಡಿ' ವಿವಾದದ ಬಗ್ಗೆ ರಕ್ಷಿತಾ ರಿಯಾಕ್ಷನ್
ಧ್ರುವ ಸರ್ಜಾ ನಟನೆಯ 'KD' ಚಿತ್ರದ ಸ್ಪೆಷಲ್ ಸಾಂಗ್ 'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ ಸೃಷ್ಟಿಸಿದೆ. ಎರಡು ದಿನಗಳ ಹಿಂದೆ ಈ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡಿನಲ್ಲಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು ದಾಖಲಾಗಿ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.
ಹಿಂದಿಯಲ್ಲಿ 'ಸರ್ಕೆ ಚುನಾರ್' ಎಂದು ಶುರುವಾಗುವ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಹಾಡಿನಲ್ಲಿರುವ ಅಸಭ್ಯ ಹಾಗೂ ಅಶ್ಲೀಲ ಸಾಹಿತ್ಯದ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗಾಯಕ ಅರ್ಮಾನ್ ಮಲಿಕ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ನಿರ್ದೇಶಕ ಪ್ರೇಮ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಎಂಥಹ ಅದ್ಭುತ ಹಾಡುಗಳನ್ನು ಕೊಡುತ್ತಿದ್ದ ಪ್ರೇಮ್ ಈಗ ಯಾಕೆ ಈ ರೀತಿ ಮಾಡ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಈ ಬಗ್ಗೆ ಇದೀಗ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

ಹೌದು ಹೌದು, ನನಗೆ ಗೊತ್ತಾಯ್ತು.. ನೀವು ನನ್ನನ್ನು ಕೆಲವರ ಪೋಸ್ಟ್‌ಗಳಲ್ಲಿ ಟ್ಯಾಗ್ ಮಾಡ್ತಿದ್ದೀರಾ.. ಅಲ್ಲಿ ಏನು ಬರ್ದಿದ್ದಾರೆ ಎನ್ನುವುದು ಗೊತ್ತು. ಏನಾಗ್ತಿದೆ ಎನ್ನುವುದು ಗೊತ್ತಿದೆ. ನಾನು ಅದನ್ನು ಬೆಂಬಲಿಸುತ್ತೇನೆ ಅಥವಾ ವಿರೋಧಿಸುತ್ತೇನೆ ಎನ್ನುವುದು ಮುಖ್ಯವಲ್ಲ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ. "ಪೀಲಿಂಗ್ಸ್', 'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ರೀತಿಯ ಹಾಡುಗಳು ಬಂದಾಗ ಸರಿ ಅನ್ನಿಸಿತ್ತು. ಸಿನಿಮಾದಲ್ಲಿ ಪಾತ್ರಗಳು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡಿದ್ರು ಅದು ಸರಿ ಅನ್ನಿಸಿತು.. ಆದರೆ ಒಂದು ಹಾಡು ಮಾತ್ರ ದೊಡ್ಡ ಸುದ್ದಿಯಾಗ್ತಿದೆ. ನಾನು ಇದನ್ನು ಸಮರ್ಥಿಸುತ್ತಿಲ್ಲ... ಸುಮ್ನೆ ಕೇಳ್ತಿದ್ದೀನಿ" ಎಂದು ಪೋಸ್ಟ್ ಮಾಡಿದ್ದಾರೆ.
ಒಂದ್ಕಾಲದಲ್ಲಿ ಪ್ರೇಮ್ ಪ್ರತಿಭೆ ಬಗ್ಗೆ ಮೆಚ್ಚಿಕೊಂಡಿದ್ದವರೇ ಈಗ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಪ್ರತಿಭೆ ಈಗ ಗೌಣವಾಗಿಬಿಟ್ಟಿದೆ. ಈ ಹಿಂದೆ ಸಾಕಷ್ಟು ಒಳ್ಳೆ ಸಾಂಗ್ ಬರೆದವರು ಈ ಒಂದು ಸಾಂಗ್ ಕಾರಣಕ್ಕೆ ಭಯಾನಕ ಬರಹಗಾರ ಅಥವಾ ಎಲ್ಲವನ್ನೂ ಗಿಮಿಕ್‌ಗಳಿಗಾಗಿ ಮಾಡುತ್ತಾರೆ ಎಂದರ್ಥವಲ್ಲ ಎಂದು ರಕ್ಷಿತಾ ಹೇಳಿದ್ದಾರೆ. "ಕೆಲ ಚಿತ್ರಗಳು ದೊಡ್ಡದಾಗಿ ಗೆಲ್ಲದಿದ್ದರೆ ಅದರಿಂದ ಅವರು ಕೆಟ್ಟ ನಿರ್ದೇಶಕನಾಗುವುದಿಲ್ಲ... ನೀವು ಅವರನ್ನು ಪ್ರಶ್ನಿಸುವ ಹಕ್ಕು ಇದೆ, ಆದರೆ ಅವಮಾನ ಮಾಡುವ ಹಕ್ಕು ಇದೆಯಾ??? ಇಲ್ಲ... ನಿಮಗೆ ಇಲ್ಲ... ಯಾರಾದರೂ ಕೆಟ್ಟದಾಗಿ ಮಾತನಾಡಿ ಇದು ವೈಯಕ್ತಿಕ ಎಂದರೆ...?" ಹೇಗೆ ಎಂದು ಪ್ರಶ್ನಿಸಿದ್ದಾರೆ.

"ನನ್ನ ಭಾಷೆ ಮತ್ತು ಜನರನ್ನು ನಾನು ತುಂಬಾ ಪ್ರೀತಿಸುತ್ತೇನೆ... ಸಾರ್ವಜನಿಕವಾಗಿ ಯಾರನ್ನಾದರೂ ಕುರಿತು ಮಾತನಾಡುವಾಗ ಮೂಲಭೂತ ತಿಳುವಳಿಕೆ ಇರಬೇಕು... ಹೌದು, ನಾವು ಯಾವಾಗಲೂ ಸಾರ್ವಜನಿಕ ಜೀವನದಲ್ಲಿದ್ದೇವೆ. ನಮಗೆ ಪ್ರಶ್ನೆಗಳು ಬರುತ್ತವೆ... ನಮ್ಮ ಬಗ್ಗೆ ಕಾಮಿಡಿ ಮಾಡ್ತಾರೆ. ಪ್ರೇಮ್ ಮಾತ್ರ ಅಲ್ಲ. ನಾನು ಎಲ್ಲಿಗೆ ಹೋದರೂ ಕೆಲವರು ನನ್ನ ಬಗ್ಗೆ ಕೆಟ್ಟವಾಗಿ ಕಾಮೆಂಟ್ ಮಾಡುತ್ತಾರೆ" ಎಂದು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಜನರು ಹೆಚ್ಚು ರಕ್ತಸಿಕ್ತ ಚಿತ್ರಗಳನ್ನು ನೋಡುತ್ತಿದ್ದಾರೆ.. ಲೈಂಗಿಕ ವಿಷಯವನ್ನು ತುಂಬಾ ಮುಕ್ತವಾಗಿ ವೀಕ್ಷಿಸುತ್ತಿದ್ದಾರೆ. ಪ್ರೇಮ್ ಒಬ್ಬ ಕನ್ನಡಿಗ..ನೀವೆಲ್ಲರೂ ಅವರ ಮೇಲೆ ಹಕ್ಕು ಹೊಂದಿದ್ದೀರಿ.. ನೀವು ಅವರಿಗೆ ಏನು ಬೇಕು ಎಂದು ಕೇಳಬಹುದು.. ಆದರೆ ಅವರ ಹಿಂದಿನ ಕೆಲಸದ ಬಗ್ಗೆ ಏನನ್ನಾದರೂ ಹೇಳಿ ಈ ಗಿಮಿಕ್ ಅನ್ನಬೇಡಿ. ಈಗ OTTಗೆ ಅಥವಾ ಚಾನೆಲ್‌ಗೆ ಸಿನಿಮಾ ಮಾರುವುದು ಕನ್ನಡ ನಿರ್ದೇಶಕರಿಗೂ ನಿರ್ಮಾಪಕರಿಗೂ ದೊಡ್ಡ ಸವಾಲಾಗಿದೆ... ಎಷ್ಟು ಪ್ರಚಾರ ಮಾಡಿದ್ರು, ಇತರ ಸಿನಿಮಾ ಇಂಡಸ್ಟ್ರಿಮಟ್ಟಕ್ಕೆ ತಲುಪುವುದು ಬಹಳ ಕಷ್ಟ... ಇತರ ಭಾಷೆಗಳ ಸಿನಿಮಾಗಳೊಂದಿಗೆ ಹೋಲಿಸಿದರೆ... ನಮ್ಮದೇ ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಕಷ್ಟ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.
"ಪ್ರೇಮ್ ಹಾಗೆ ಪ್ರಚಾರ ಮಾಡುತ್ತಾರೆ.. ಕೆಲವರು ಅದನ್ನು ಗಿಮಿಕ್ ಎಂದು ಹೇಳುತ್ತಾರೆ.. ಪ್ರೇಕ್ಷಕರು ಥಿಯೇಟರ್‌ಗೆ ಬಂದ ನಂತರ ನೀವು ಸಿನಿಮಾ ಇಷ್ಟವಾಯಿತೇ ಇಲ್ಲವೇ ಎಂದು ಹೇಳುವ ಹಕ್ಕು ನಿಮಗೆ ಇದೆ.. ನಾವು ಅದನ್ನು ಮನಪೂರ್ವಕವಾಗಿ ಒಪ್ಪುತ್ತೇವೆ... ಮುಂದಿನ ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇವೆ" ಎಂದು ರಕ್ಷಿತಾ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











