ದರ್ಶನ್ ಮತ್ತು ಪ್ರೇಮ್ ಚಿತ್ರ ನಿಂತು ಹೋಯ್ತಾ ? ರಕ್ಷಿತಾ ಹೇಳಿದ್ದೇನು ?
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ಅಂತೆ-ಕಂತೆಯ ಸಂತೆಯಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಉದಾಹರಣೆಗೆ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ಹರಡಿದ ಸುದ್ದಿ.
ಹೌದು, ಪರಪ್ಪನ ಅಗ್ರಹಾರದಿಂದ ಮುಕ್ತಿಯನ್ನು ಪಡೆದು ಸದ್ಯ ದರ್ಶನ್ ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ವಹಿಸಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಇನ್ನು, ಈ ಫೆಬ್ರವರಿ 16 ದರ್ಶನ್ ಬರ್ತ್‌ಡೇ. ಅಭಿಮಾನಿಗಳಲ್ಲಿ ಪ್ರತಿ ವರ್ಷಕ್ಕಿಂತ ಈ ವರ್ಷ ಉತ್ಸಾಹ ಹೆಚ್ಚಿದೆ. ಆದರೆ ದರ್ಶನ್ ಈ ವರ್ಷ ಕೂಡ ಅದ್ಧೂರಿಯಾದ ಬರ್ತ್ ಡೇ ಸಂಭ್ರಮಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಅವತ್ತೇ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಮರುಚಾಲನೆ ನೀಡಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಇದರ ನಡುವೆ ನಿನ್ನೆಯಿಂದ ದರ್ಶನ್ ತಾವು ಈ ಹಿಂದೆ ಒಪ್ಪಿಕೊಂಡಿದ್ದ ಎರಡು ಚಿತ್ರಗಳಿಂದ ಹಿಂದೆ ಸರಿದಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಪ್ರೇಮ್ ಮತ್ತು ಸೂರಪ್ಪ ಬಾಬು ಜೊತೆ ಮಾಡಬೇಕಿದ್ದ ಚಿತ್ರವನ್ನು ಕೈ ಬಿಟ್ಟ ದರ್ಶನ್ ಇಬ್ಬರಿಂದ ಪಡೆದಿದ್ದ ಅಡ್ವಾನ್ಸ್ ಹಣವನ್ನು ಕೂಡ ಮರಳಿ ನೀಡಿದ್ದಾರೆ ಎಂಬ ವಿಚಾರ ಎಲ್ಲೆಡೆ ಗುಲ್ಲಾಗಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಅತ್ಯಾಪ್ತ ಸ್ನೇಹಿತೆ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ. ಊರಿನ ತುಂಬಾ ಕೇಳಿ ಬರುತ್ತಿರುವ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರ ಜೊತೆ ಮಾತನಾಡಿರುವ ರಕ್ಷಿತಾ, ದರ್ಶನ್ ಜೊತೆ ಪ್ರೇಮ ಸಿನಿಮಾ ಮಾಡುವುದು ಖಚಿತ, ನಿಶ್ಚಿತ ಎಂದು ಹೇಳಿದ್ದಾರೆ. ದರ್ಶನ್ ದುಡ್ಡು ವಾಪಸು ಮಾಡಿರುವ ವಿಚಾರ ನಮಗೆ ಗೊತ್ತಿಲ್ಲ ಎಂದಿರುವ ರಕ್ಷಿತಾ ಎರಡು ದಿನಗಳ ಹಿಂದೆಯಷ್ಟೇ ದರ್ಶನ್ ಜೊತೆ ನಾನು ಮಾತನಾಡಿದ್ದೇನೆ, ಸದ್ಯ ಹರಡಿರುವ ಸುದ್ದಿಯಂತೆ ನಮ್ಮ ನಡುವೆ ಆ ತರಹದ ಚರ್ಚೆ ಯಾವುದು ಆಗಿಲ್ಲ ಎಂದು ಹೇಳಿದ್ದಾರೆ. ಆ ತರಹದ ಬೆಳವಣಿಗೆ ನಡೆಯಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಅಡ್ವಾನ್ಸ್ ಮರಳಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ನಮ್ಮ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್‌ನಿಂದ ಕೂಡ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದಿರುವ ರಕ್ಷಿತಾ ನನ್ನ ಪ್ರಕಾರ ಈ ಮಾತುಗಳೆಲ್ಲ ನಮ್ಮ ಚಿತ್ರಕ್ಕೆ ಸಂಬಂಧಿಸಿದ್ದು ಅಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರೇಮ್ ಮತ್ತು ದರ್ಶನ್ ಸಿನಿಮಾ ಬಂದೇ ಬರುತ್ತೆ ಎಂದು ಸಮಸ್ತ ದರ್ಶನ್ ಅವರ ಅಭಿಮಾನಿಗಳಿಗೆ ಆಶ್ವಾಸನೆಯನ್ನು ರಕ್ಷಿತಾ ನೀಡಿದ್ದಾರೆ.
ರಕ್ಷಿತಾ ಪ್ರೇಮ್ ಅವರ ಈ ಹೇಳಿಕೆಯಿಂದ ಸದ್ಯ ದರ್ಶನ್ ಅಭಿಮಾನಿಗಳು ನಿರಾಳರಾಗಿದ್ದು ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೇಮ್ ಅವರಿಂದ ಘೋಷಣೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯವನ್ನು ಕೋರಿ ಹೊಸ ಥೀಮ್ ಫೋಸ್ಟರ್ ನ ಪ್ರೇಮ್ ಬಿಡುಗಡೆ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.ಇನ್ನು ರಕ್ಷಿತಾ ತಮ್ಮ ಚಿತ್ರ ನಿಂತಿಲ್ಲ ಎಂದು ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ದರ್ಶನ್ ಹೊರ ಬಂದಿದ್ದಾರೆ ಎನ್ನಲಾದ ಆ ಎರಡು ಚಿತ್ರಗಳು ಯಾವುವು ? ಎಂದು ಕೂಡ ಕೆಲವರು ಇದೇ ಸಮಯದಲ್ಲಿ ಯೋಚನೆ ಮಾಡುತ್ತಿದ್ದಾರೆ. ಉತ್ತರ ದರ್ಶನ್ ಅವರೇ ಕೊಡಬೇಕು.


Click it and Unblock the Notifications











