'ಸೋಷಿಯಲ್ ಮೀಡಿಯಾದಲ್ಲಿ 'ಯೋಗ್ಯತೆ' ಬಗ್ಗೆ ಮಾತಾಡೋರು ಎದುರಿಗೆ ಬಂದು ಮಾತಾಡಿ'.!
ಒಳ್ಳೆಯದ್ದಕೋ, ಕೆಟ್ಟದಕ್ಕೋ... ಪಾಸಿಟೀವೋ, ನೆಗೆಟಿವೋ... ಒಟ್ನಲ್ಲಿ 'ದಿ ವಿಲನ್' ಚಿತ್ರ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.
'ದಿ ವಿಲನ್' ಬಗ್ಗೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ 'ದಿ ವಿಲನ್' ಚಿತ್ರ ಇಷ್ಟವಾಗಿದ್ದರೆ, ಕೆಲವರಿಗೆ ಇಷ್ಟ ಆಗಿಲ್ಲ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.
'ದಿ ವಿಲನ್' ಬಗ್ಗೆ ಟೀಕೆ, ಗೇಲಿ ಮಾಡಿದವರಿಗೆ ನಿನ್ನೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಒಂದು ಪತ್ರ ಪೋಸ್ಟ್ ಆಯ್ತು. ಆ ಪತ್ರವನ್ನ ಬರೆದವರು ರಕ್ಷಿತಾ ಪ್ರೇಮ್ ಅಂತಲೇ ಹಲವರು ಭಾವಿಸಿದ್ದರು. ಆದ್ರೆ, ಆ ಪತ್ರ ಬರೆದವರು ರಕ್ಷಿತಾ ಪ್ರೇಮ್ ಅಲ್ಲ.
ಹೀಗಾಗಿ, ಆ ಪತ್ರ ಹಾಗೂ ಅದರಿಂದ ಎದ್ದಿರುವ ವಿವಾದದ ಬಗ್ಗೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಫೇಸ್ ಬುಕ್ ನಲ್ಲಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರ ಕನ್ನಡ ಅನುವಾದ ಇಲ್ಲಿದೆ ಓದಿರಿ...

ಎಲ್ಲರ ಬಗ್ಗೆ ಗೌರವ ಇದೆ
ಪ್ರತಿಯೊಬ್ಬ ನಿರ್ದೇಶಕ ಹಾಗೂ ಸಿನಿಮಾ ಕುರಿತ ಅವರ ಸೆಂಟಿಮೆಂಟ್, ಶ್ರದ್ಧೆ, ಭಾವನೆಗಳ ಬಗ್ಗೆ ನನಗೆ ಗೌರವ ಇದೆ. ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಒಂದು ಕಥೆ ಇದೆ. ಕಷ್ಟಪಟ್ಟು ಎಲ್ಲರೂ ಮೇಲೆ ಬಂದಿದ್ದಾರೆ. ಅದರ ಬಗ್ಗೆ ಹೋಲಿಕೆ ಸರಿ ಅಲ್ಲ. ಅದನ್ನ ನಾನೂ ಕೂಡ ಮಾಡುವುದಿಲ್ಲ.

ನಾನು ಪತ್ರ ಬರೆದಿಲ್ಲ
''ಆ ಪತ್ರವನ್ನ ನಾನು ಬರೆದಿದ್ದು ಅಂತ ಹಲವರು ಭಾವಿಸಿದರು. ಆದ್ರೆ, ಅದು ನಾನು ಬರೆದಿದ್ದಲ್ಲ. ಅದನ್ನ ಯಾರೋ ನನಗೆ ಕಳುಹಿಸಿದ್ದು. ಸೋಷಿಯಲ್ ಮೀಡಿಯಾದಲ್ಲಿ ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಿರುವವರು ಮೊದಲು ಮಹಿಳೆಯರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನ ಕಲಿಯಲಿ'' - ರಕ್ಷಿತಾ ಪ್ರೇಮ್

ಮುಖಾಮುಖಿ ಬನ್ನಿ
'''ದಿ ವಿಲನ್' ಚಿತ್ರವನ್ನ ನಿರ್ದೇಶನ ಮಾಡಿದವರು ಪ್ರೇಮ್. ನಾನು ಅವರನ್ನ ಮದುವೆ ಆಗಿದ್ದೀನಿ ಎಂಬ ಕಾರಣಕ್ಕೆ ನಾನು ಅವರಿಗೆ ನಿರ್ದೇಶನ ಮಾಡುವುದನ್ನ ಹೇಳಿಕೊಡಲು ಆಗಲ್ಲ. ನನ್ನನ್ನ ಟಾರ್ಗೆಟ್ ಮಾಡಬೇಕು ಅಂತ ಇದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಬೇಡ. ಎದುರಿಗೆ ಬನ್ನಿ.. ಮುಖಾಮುಖಿ ಕೂತು ಸಮಸ್ಯೆ ಏನು ಅಂತ ಹೇಳಿ'' - ರಕ್ಷಿತಾ ಪ್ರೇಮ್
ಮಹಿಳೆಯರಿಗೆ ಗೌರವ ಕೊಡಿ
''ನಾನು ರಕ್ಷಿತಾ.. ಈ ಸ್ಥಾನಕ್ಕೆ ಬರಲು ನಾನು ಕೂಡ ತುಂಬಾ ಕಷ್ಟ ಪಟ್ಟಿದ್ದೇನೆ. ನನ್ನ ಬಗ್ಗೆ ಸಮಸ್ಯೆ ಇದ್ದರೆ ಡೈರೆಕ್ಟ್ ಆಗಿ ಮಾತನಾಡಿ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಗೌರವ ಕೊಡಿ'' ಎಂದು ಬರೆದುಕೊಂಡಿದ್ದಾರೆ ನಟಿ ರಕ್ಷಿತಾ ಪ್ರೇಮ್.


Click it and Unblock the Notifications











