ಕನ್ನಡಿಗರನ್ನು ಕೆಣಕಿ ಆ ನಂತರ ಹೆದರಿ ಟ್ವೀಟ್ ಡಿಲೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ..!
ಭಾರತೀಯ ಚಿತ್ರರಂಗದಲ್ಲಿ ವಿಲಕ್ಷಣ ನಿರ್ದೇಶಕರೆಂದೇ ಕರೆಯಲ್ಪಡುವರು ರಾಮ್ ಗೋಪಾಲ್ ವರ್ಮಾ. ಒಂದು ಕಾಲದಲ್ಲಿ ಒಂದಕ್ಕಿಂತೊಂದು ಚೆಂದದ ಚಿತ್ರಗಳನ್ನು ನೀಡಿದ ರಾಮ್ ಗೋಪಾಲ್ ವರ್ಮಾ ಬದಲಾದ ಕಾಲದಲ್ಲಿ ಸಾಫ್ಟ್ ಪಾರ್ನ್ ಚಿತ್ರಗಳತ್ತ ಹೊರಳಿದ್ದು ದುರಂತ. ಇಂಥಾ ರಾಮ್ ಗೋಪಾಲ್ ವರ್ಮಾಗೆ ಕಾಲು ಕೆರೆದು ಜಗಳಕ್ಕಿಳಿಯುವ ಹವ್ಯಾಸ ಇದೆ. ತನ್ನದಲ್ಲದ ವಿಚಾರಕ್ಕೆ ಸುಖಾ ಸುಮ್ಮನೆ ಮೂಗು ತೂರಿಸದಿದ್ದರೆ ರಾಮ್ ಗೋಪಾಲ್ ವರ್ಮಾಗೆ ತಿಂದ ಅನ್ನ ಇವರಿಗೆ ಜೀರ್ಣವಾಗುವುದಿಲ್ಲ.
ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ರಾಮ್ ಗೋಪಾಲ್ ವರ್ಮಾ ಇದೀಗ ಕನ್ನಡಿಗರನ್ನು ಕೆಣಕಿದ್ದಾರೆ. ಆ ನಂತರ ಹೆದರಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಕರುನಾಡಿನೆಲ್ಲೆಡೆ ಕಮಲ್ ಹಾಸನ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಬಿಡುಗಡೆ ಮಾಡಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ.

ರಚಿತಾ ರಾಮ್, ಮುಖ್ಯಮಂತ್ರಿ ಚಂದ್ರು, ವಸಿಷ್ಠ ಸಿಂಹ, ನವರಸನಾಯಕ ಜಗ್ಗೇಶ್, ಹೀಗೆ ಕನ್ನಡದ ಹಲವು ಕಲಾವಿದರು ಕಮಲ್ ಹಾಸನ್ ವಿರುದ್ದ ಕೆಂಡ ಕಾರಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.
ಆದರೆ ಕನ್ನಡಿಗರ ಭಾವನೆಗಳಿಗೆ ಕಮಲ್ ಹಾಸನ್ ಬೆಲೆ ಕೊಡುತ್ತಿಲ್ಲ. ಕ್ಷಮೆಯನ್ನು ಕೂಡ ಕೇಳುತ್ತಿಲ್ಲ. ಬದಲಿಗೆ ಚಿತ್ರದ ಬಿಡುಗಡೆಗೆ ಅನುವು ಮಾಡಿಕೊಡಿ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೀಗಿರುವಾಗ ಕಮಲ್ ಹಾಸನ್ ಅವರನ್ನು ವಹಿಸಿಕೊಂಡು ರಾಮ್ ಗೋಪಾಲ್ ವರ್ಮಾ ವಕಾಲತ್ತು ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೂರು ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಮಲ್ ಹಾಸನ್ ಪರ ಧ್ವನಿ ಎತ್ತಿದ್ದ ರಾಮ್ ಗೋಪಾಲ್ ವರ್ಮಾ 'ಅಸಹಿಷ್ಣುತೆಯೇ ಪ್ರಜಾಪ್ರಭುತ್ವದ ಹೊಸ ಹೆಸರು. ಸತ್ಯಾಂಶ ಏನೇ ಇದ್ದರೂ ಕೂಡ, ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಬೆದರಿಕೆ ಹಾಕುವುದು ಹೊಸ ಥರದ ಗೂಂಡಾಗಿರಿ' ಎಂದು ಬರೆದುಕೊಂಡಿದ್ದಾರೆ.
ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ಬರೆದ ಸಾಲುಗಳನ್ನು ರಾಮ್ ಗೋಪಾಲ್ ವರ್ಮಾ ಡಿಲೀಟ್ ಮಾಡಿದ್ದಾರೆ. ಹೀಗಾಗಿಯೇ ಕನ್ನಡಿಗರ ಆಕ್ರೋಶಕ್ಕೆ ಬಲಿಯಾಗುವ ಭಯದಿಂದ ರಾಮ್ ಗೋಪಾಲ್ ವರ್ಮಾ ಹೆದರಿ ತಮ್ಮ ಟ್ವಿಟ್ ಡಿಲೀಟ್ ಮಾಡಿದ್ದಾರೆ ಎಂಬ ಚರ್ಚೆ ಸದ್ಯ ಅದೇ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಇದೇ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ನಟಿ ಕಿಯಾರಾ ಅಡ್ವಾನಿಯ ಕುರಿತು ಕೀಳಾಗಿ ಟ್ವಿಟ್ ಮಾಡಿದ್ದರು. ವಾರ್ 2 ಚಿತ್ರದಲ್ಲಿನ ಕಿಯಾರ ಅವರ ಬಿಕಿನಿ ಸೀನ್‌ಗೆ ಪ್ರತಿಕ್ರಿಯಿಸಿದ್ದ ರಾಮ್ ಗೋಪಾಲ್ ವರ್ಮಾ ಆಕೆಯ ಹಿಂಬದಿಯನ್ನು (ಬ್ಯಾಕ್) ಪಡೆಯಲು ದೇಶಗಳ ಬದಲಿಗೆ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ನಡುವೆ ಘನಘೋರ ಯುದ್ಧ ನಡೆದರೆ ಇದು ಬ್ಯಾಕ್ಬಸ್ಟರ್ ಆಗುತ್ತದೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್‌ಗೆ ಕೂಡ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಎಲ್ಲದಕ್ಕೂ ಒಂದು ಮೀತಿ ಇರುತ್ತೆ, ರಾಮ್ ಗೋಪಾಲ್ ವರ್ಮಾ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೂಗು ಕೇಳಿ ಬಂದಿತ್ತು. ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಆಗ ಕೂಡ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಈಗ ಕನ್ನಡಿಗರನ್ನು ಕೆಣಕಿ ತಮ್ಮ ಟ್ವೀಟ್ ಅನ್ನು ವರ್ಮಾ ಡಿಲೀಟ್ ಮಾಡಿದ್ದಾರೆ.


Click it and Unblock the Notifications










