ಮುತ್ತಪ್ಪ ರೈ ಬಗ್ಗೆ ಹೀಗೆ ಹೇಳಿದ್ದರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಭೂಗತ ಜಗತ್ತಿನ ಮಾಜಿ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
Recommended Video
ಭೂಗತ ದೊರೆಯ ರಾಜನೆಂದೇ ಕರೆಯಲಾಗುತ್ತಿದ್ದ ಮುತ್ತಪ್ಪ ರೈ ಜೀವನ ಬಹು ರೋಚಕ. ಪಕ್ಕಾ ಸಿನಿಮಾ ಕಥಾ ವಸ್ತುವನಂಥಹಾ ಏಳು-ಬೀಳಿನಿಂದ ಕೂಡಿದ ಜೀವನ.
ಮುತ್ತಪ್ಪ ರೈ ಜೀವನದ ಕೆಲ ಭಾಗಗಳನ್ನು ಈಗಾಗಲೇ ಕನ್ನಡದಲ್ಲಿಯೇ ಕೆಲವು ಸಿನಿಮಾಗಳಲ್ಲಿ ತೋರಿಸಲಾಗಿದೆ. ನೇರವಾಗಿ ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಎಂದು ಹೆಸರು ನೀಡಿಲ್ಲದಿದ್ದರೂ, ಮುತ್ತಪ್ಪ ರೈ ಕ್ಯಾರೆಕ್ಟರ್ ಅನ್ನು ಮುಖ್ಯವಾಗಿಟ್ಟುಕೊಂಡು ಸಿನಿಮಾಗಳನ್ನು ಮಾಡಲಾಗಿದೆ. ದರ್ಶನ್ ಅವರ ಚಕ್ರವರ್ತಿ ಅದರಲ್ಲೊಂದು.

ಮುತ್ತಪ್ಪ ರೈ ಬಗ್ಗೆ ಸಿನಿಮಾ ಘೋಷಿಸಿದ್ದ ವರ್ಮಾ
ಭೂಗತ ಲೋಕದ ಬಗ್ಗೆ ಅತಿ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ರಾಮ್ ಗೋಪಾಲ್ ವರ್ಮಾ, ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವ ಘೋಷಣೆಯನ್ನು ಕೆಲವು ವರ್ಷಗಳ ಹಿಂದೆ ಮಾಡಿದ್ದರು. ದೊಡ್ಡ ಕಾರ್ಯಕ್ರಮವೊಂದರಲ್ಲಿ ಈ ಘೋಷಣೆ ಆಗಿತ್ತು.

ಡಾನ್‌ಗಳಿಗೆ ಡಾನ್ ಮುತ್ತಪ್ಪ ರೈ
ಆಗ ರಾಮ್ ಗೋಪಾಲ್ ವರ್ಮಾ ಮುತ್ತಪ್ಪ ರೈ ಬಗ್ಗೆ ಟ್ವೀಟ್ ಮಾಡಿ, 'ಭೂಗತ ಲೋಕದ ಬಾಹುಬಲಿ ಮುತ್ತಪ್ಪ ರೈ' ಎಂದಿದ್ದರು ವರ್ಮಾ. ಅಷ್ಟೇ ಅಲ್ಲ, ಡಾನ್ ಗಳಿಗೆ ಡಾನ್ ಮುತ್ತಪ್ಪ ರೈ ಎಂದು ಸಹ ಅವರು ಹೇಳಿದ್ದರು. 'ಗಾಡ್ ಫಾದರ್' ಒಂದು ಕಲ್ಪಿತ ಕತೆ ಎಂದು ಕೊಂಡಿದ್ದೆ, ಆದರೆ ಮುತ್ತಪ್ಪ ರೈ ಅನ್ನು ಭೇಟಿ ಆದಮೇಲೆ ಅವರೇ ನಿಜವಾದ ಗಾಡ್ ಫಾದರ್, ಮುತ್ತಪ್ಪ ರೈ ಎಲ್ಲಾ ಗಾಡ್ ಫಾದರ್‌ಗಳ ಅಪ್ಪ ಎಂದಿದ್ದರು ವರ್ಮಾ.

ವಿವೇಕ್ ಒಬೆರಾಯ್ ಮುತ್ತಪ್ಪ ರೈ ಪಾತ್ರ
ಮುತ್ತಪ್ಪ ರೈ ಸಿನಿಮಾವನ್ನು ಘೋಷಿಸಿ, ಮುತ್ತಪ್ಪ ರೈ ಪಾತ್ರವನ್ನು ಬಾಲಿವುಡ್‌ನ ವಿವೇಕ್ ಒಬೆರಾಯ್ ಮಾಡುತ್ತಾರೆಂದು ಸಹ ನಿಶ್ಚಯಿಸಿಯಾಗಿತ್ತು. ಪೋಸ್ಟರ್, ಟೀಸರ್ ಸಹ ಬಿಡುಗಡೆ ಆಯಿತು. ಆದರೆ ನಂತರ ಸಿನಿಮಾ ಅಷ್ಟಕ್ಕೆ ನಿಂತು ಹೋಯಿತು.

ಸಿನಿಮಾ ಮುಂದಕ್ಕೆ ಹೋಗಿದೆ ಎಂದಿದ್ದ ವರ್ಮಾ
ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದರು. ಟಗರು ಸಿನಿಮಾ ವೀಕ್ಷಣೆಗೆ ವರ್ಮಾ ಬೆಂಗಳೂರಿಗೆ ಬಂದಿದ್ದಾಗ, ಮತ್ತೆ ರೈ ಸಿನಿಮಾ ಬಗ್ಗೆ ಮಾತನಾಡಿ, ಸಿನಿಮಾ ನಿಂತಿಲ್ಲ ಆದರೆ ಮುಂದೆ ಹೋಗಿದೆ ಎಂದಿದ್ದರು.

ಇನ್ನೂ ಕೆಲವರು ಸಿನಿಮಾ ಮಾಡುವುದಾಗಿ ಹೇಳಿದ್ದರು
ವರ್ಮಾ ಹೊರತುಪಡಿಸಿ ಇನ್ನೂ ಕೆಲವು ನಿರ್ಮಾಪಕರು ಮುತ್ತಪ್ಪ ರೈ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದರು. ನಿರ್ಮಾಪಕ ಧನರಾಜ್, ದರ್ಶನ್ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಮುತ್ತಪ್ಪ ರೈ ಜೀವನ ತೆರೆಗೆ ತರುವುದಾಗಿ ಹೇಳಿದ್ದರು.

ಚಕ್ರವರ್ತಿ ಸಿನಿಮಾ ಮುತ್ತಪ್ಪ ರೈ ಕತೆ ಹೊಂದಿದೆ
ದರ್ಶನ್ ಅಭಿನನಯದ ಚಕ್ರವರ್ತಿ ಸಿನಿಮಾದ ಮೊದಲರ್ಧ ಭಾಗ ಮುತ್ತಪ್ಪ ರೈ ಜೀವನದ ಕತೆಯೇ ಆಗಿದೆ. ದರ್ಶನ್ ಮುತ್ತಪ್ಪ ರೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಹೋದರ ದಿನಕರ್ ತೂಗುದೀಪ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











