"ರಾಮ ಬರೀ ಕಾಲ್ಪನಿಕ ವ್ಯಕ್ತಿ ಅಷ್ಟೇ, ರಾಮಜನ್ಮಭೂಮಿ ಅನ್ನೋದು ಅವೈಜ್ಞಾನಿಕ": ಚೇತನ್ ಅಹಿಂಸಾ
ನಟ ಚೇತನ್ ಅಹಿಂಸಾ ಇತ್ತೀಚೆಗೆ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬುದ್ಧನ ದೇವಸ್ಥಾನ ಕೆಡವಿ ತಿರುಪತಿ ದೇವಸ್ಥಾನ ನಿರ್ಮಿಸಲಾಗಿದೆ ಎಂದಿದ್ದರು. ಇದೀಗ ರಾಮ ಬರೀ ಕಾಲ್ಪನಿಕ ವ್ಯಕ್ತಿ, ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ ಎನ್ನುವ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಪದೇ ಪದೇ ಚೇತನ್ ಸಂಕಷ್ಟ ಸಿಲುಕುತ್ತಾರೆ. ಅವರ ವೀಸಾ ಸಹ ರದ್ದಾಗಿದೆ.
ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಾರಣ ಕಳೆದ ತಿಂಗಳು ನಟ ಚೇತನ್ ಅಹಿಂಸಾ ಬಂಧನವಾಗಿತ್ತು. "ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ" ಎಂದು ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಅವರು ಬರೆದುಕೊಂಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಶಿವಕುಮಾರ್ ಎಂಬುವವರು ಚೇತನ್ ಅಹಿಂಸಾ ವಿರುದ್ಧ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ಬಂಧನವಾಗಿದ್ದ ಚೇತನ್ ಜಾಮೀನು ಪಡೆದು ಹೊರಬಂದಿದ್ಧಾರೆ. ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಬಂದ ಮೇಲೂ ಹೆಚ್ಚಿನ ಹೋರಾಟ ಮಾಡುವುದಾಗಿ ಹೇಳಿದ್ದರು.

ಸದ್ಯ ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿ ರಾಮ ಬರೀ ಕಾಲ್ಪನಿಕ ವ್ಯಕ್ತಿ, ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ ಎಂದಿದ್ದಾರೆ. "ಸಾರ್ವಕರ್ ಹೇಳುವಂತೆ ರಾಮ, ರಾವಣನನ್ನು ಸಾಯಿಸಿ ಅಯೋಧ್ಯೆಗೆ ಬಂದು ದೇಶ ಶುರುವಾಯಿತು ಎನ್ನುವುದನ್ನು ಒಪ್ಪುವುದಿಲ್ಲ. ಅದು ಸುಳ್ಳು. ಅದು ಅವರ ಅಭಿಪ್ರಾಯ ಇರಬಹುದು. ನಮ್ಮ ಪ್ರಕಾರ ಸುಳ್ಳು. ಅದೇ ರೀತಿ 1992 ಹಿಂದುತ್ವಕ್ಕೆ ಬಹಳ ದೊಡ್ಡ ಘಟನೆ. ಆಗ ರಾಮಜನ್ಮಭೂಮಿ ಆಗುತ್ತದೆ. ರಾಮ ಜನ್ಮಭೂಮಿ ಆದಾಗ ಬಾಬ್ರಿ ಮಸೀದಿ ಒಡೆದು ಹಾಕುತ್ತಾರೆ. ರಾಮಜನ್ಮಭೂಮಿ ಎನ್ನುವ ಕಾನ್ಸೆಪ್ಟ್ ಅವೈಜ್ಞಾನಿಕ. ರಾಮ ಅನ್ನೋದು ಕಾಲ್ಪನಿಕ ವ್ಯಕ್ತಿ. ನಂಬಿಕೆ ಇರಬಹುದು. ಸಾರ್ವಕರ್ ರಾಮ ಬೇರೆ, ಗಾಂಧೀ ರಾಮ ಬೇರೆ, ರಾಮಾಯಣದ ರಾಮ ಬೇರೆ"
"ರಾಮ ಎನ್ನುವ ಭಾವನೆ ಇಟ್ಟುಕೊಳ್ಳಿ. ಆದರೆ ಇದೇ ಸ್ಥಳದಲ್ಲಿ ರಾಮ ಹುಟ್ಟಿದ ಅನ್ನುವುದು ಸರಿಯಲ್ಲ. ರಾಮ, ಕೃಷ್ಣ, ಗಣೇಶ ಇವೆಲ್ಲ ಜನರ ನಂಬಿಕೆ. ಅದೇ ರೀತಿ ಅಲ್ಲಾ ಕೂಡ ಆಗಿರಬಹುದು. ಇವೆಲ್ಲ ನಂಬಿಕೆ ಮೇಲೆ ಕಟ್ಟಿರುವ ದೇವರುಗಳು. ಮಾರಮ್ಮ, ಯಲ್ಲಮ್ಮ ಎಲ್ಲವೂ ಅವೈಜ್ಞಾನಿಕ. ವೈಜ್ಞಾನಿಕ ಅಂದಾಗ ಇತಿಹಾಸದಲ್ಲಿ ದಾಖಲೆ ಇರಬೇಕು. ಜೀಸಸ್, ಮೊಹಮ್ಮದ್, ಬುದ್ಧ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಅಶೋಕ, ಅಕ್ಬರ್, ಟಿಪ್ಪು ಇವೆರೆಲ್ಲಾ ವೈಜ್ಞಾನಿಕವಾಗಿ ಇತಿಹಾಸದಲ್ಲಿ ಬದುಕಿದ್ದವರು. ಇನ್ನುಳಿದವರು ನಂಬಿಕೆ ಮೇಲೆ ಕಟ್ಟಿರುವ ಕಾಲ್ಪನಿಕ ಪಾತ್ರಗಳು"
ರಾಮಾಯಣ ನಡೆದಿರುವುದಕ್ಕೂ ಸಾಕ್ಷಾಧಾರಗಳು ಹಾಗೂ ಪುರಾವೆಗಳು ಇವೆ ಎನ್ನುವ ನಿರೂಪಕಿಯ ಪ್ರಶ್ನೆಗೆ "ನೀವು ಹೇಳುವ ಸಾಕ್ಷಾಧಾರಗಳು ವೈಜ್ಞಾನಿಕವಾಗಿ ರುತುವಾತಾಗಿಲ್ಲ. ಯಾವುದಾದರೂ ಚಿಂತನೆಯ ಕೇಂದ್ರ ಇದು ಸತ್ಯ ಎಂದು ಹೇಳಿದ್ಯಾ? ಯಾರು ಕೂಡ ರಾಮನನ್ನು ಒಂದು ಅವಧಿಯಲ್ಲಿ ಒಂದು ಕಾಲಘಟ್ಟದಲ್ಲಿ ಇದ್ದರಾ? ದ್ವಾಪರಯುಗ, ತ್ರೇತಾಯುಗ, ಕಲಿಯುಗ ಯಾವಾಗ ಅದು? ಅದೆಲ್ಲಾ ಬರೀ ಕಾಲ್ಪನಿಕ. ಬುದ್ಧನನ್ನು ತೆಗೆದುಕೊಂಡದೇ 2500 ವರ್ಷಗಳ ಹಿಂದೆ. ವೈದಿಕ ಕಾಲ, ಆರ್ಯನ್ನರು ಭಾರತಕ್ಕೆ ಬಂದಿದ್ದು 3500 ವರ್ಷಗಳ ಹಿಂದೆ. ಅಲ್ಲಿಂದಲೇ ಚತುವರ್ಣ, ವೇದಗಳು, ಹಿಂದು ಧರ್ಮ ಬಂದಿದ್ದು. ಇದೆಲ್ಲ ದಾಖಲೆಯಾಗಿದೆ.

"ರಾಮ, ಕೃಷ್ಣ, ಲಕ್ಷ್ಮಣ, ಸೀತಾ, ಹನುಮಂತ ಇವೆಲ್ಲಾ ಕಾಲ್ಪನಿಕ, ನಮ್ಮ ನಂಬಿಕೆಗಳು. ಜನರಿಗೆ ನಂಬಿಕೆಯ ಹಕ್ಕಿದೆ. 3500 ವರ್ಷಗಳ ಹಿಂದೆ ವೈದಿಕ ಪರಂಪರೆ ಶುರುವಾಯಿತು. ನಂತರ ಬುದ್ಧ ಸೇರಿದಂತೆ ಸಾಕಷ್ಟು ಜನ ರಾಜರು ಬಂದರು. ಹಿಂದು ರಾಜರು ಮುಸ್ಲಿಂ ರಾಜರ ಮೇಲೆ ಮುಸ್ಲಿ ರಾಜರು ಹಿಂದು ರಾಜರ ಮೇಲೆ ಯುದ್ಧ ಮಾಡಿದರು ಎಂದು ನಾವು ನೋಡಲ್ಲ. ಸಾಮ್ರಾಜ್ಯಕ್ಕಾಗಿ ಯುದ್ಧ ನಡೀತು. ಮುಸ್ಲಿಂ ರಾಜರು ಮುಸ್ಲಿಂ ರಾಜರನ್ನು ಸಾಯಿಸಿದ್ದಾರೆ. ಮುಸ್ಲಿಂ ಏತರರು ಇತರ ರಾಜರನ್ನು ಸಾಯಿಸಿದ್ದಾರೆ"
"ಹಿಂದುತ್ವ ಹಿಂದೂ ಧರ್ಮ ಅಲ್ಲ. ಹಿಂದೂಸ್ತಾನ ಅಲ್ಲ. ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಹೊರಗಿನಿಂದ ಬಂದವರು ಬೌಗೋಳಿಕವಾಗಿ ಹಿಂದೂಸ್ತಾನ ಪ್ರದೇಶ ಅಂತ ಕರೆದರು. ಹಿಂದುತ್ವ ಹಿಂದೂರಾಷ್ಟ್ರ ಎನ್ನುವುದು ಸಾರ್ವಕರ್ ಮಾಡಿದ್ದು 100 ವರ್ಷಗಳ ಹಿಂದೆ. ಆರ್‌ಎಸ್‌ಎಸ್ ಶುರುವಾಗಿ 95 ವರ್ಷ ಆಯಿತು. ಇದು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಿದ್ದಾಂತ. ಹಿಂದೂ ಧರ್ಮವನ್ನು ಒಂದು ರೀತಿ ಹೈಜಾಕ್ ಮಾಡಿದ್ದರೆ ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ" ಎಂದು ಚೇತನ್ ಹೇಳಿದ್ದಾರೆ.


Click it and Unblock the Notifications











