ಕೇವಲ 99 ರೂ.ಗೆ ಕಣ್ತುಂಬಿಕೊಳ್ಳಿ ರಿಷಿ- ಪ್ರಣೀತಾ 'ರಾಮನ ಅವತಾರ'
ರಾಜ್ಯದಲ್ಲಿ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ದೊಡ್ಡ ಸಿನಿಮಾಗಳು ಇಲ್ಲದೇ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಚುನಾವಣೆ, ಐಪಿಎಲ್ ಕೂಡ ಪ್ರೇಕ್ಷಕರು ತೆರೆಮೇಲೆ ಸಿನಿಮಾ ನೋಡಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಸದ್ಯ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ ಬೀಳುವ ಸಮಯ ಬಂದಿದೆ.
ಚುನವಾಣೆ ಬೆನ್ನಲ್ಲೇ ಶುಕ್ರವಾರ(ಮೇ 10) ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಆ ಲಿಸ್ಟ್‌ನಲ್ಲಿ ರಿಷಿ, ಪ್ರಣೀತಾ ನಟನೆಯ 'ರಾಮನ ಅವತಾರ' ಸಿನಿಮಾ ಕೂಡ ಇದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್, ಟೀಸರ್ ರಿಲೀಸ್ ಆಗಿದೆ. ಸದ್ಯ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದೆ. 'ಕವಲುದಾರಿ', 'ನೋಡಿ ಸ್ವಾಮಿ ಇವನು ಇರೋದು ಹೀಗೆ', 'ಆಪರೇಷನ್ ಅಲಮೇಲಮ್ಮ' ಸಿನಿಮಾಹಗಳ ಬಳಿಕ ಇಲ್ಲಿ ರಿಷಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ಧಾರೆ.

ಭಿನ್ನ ವಿಭಿನ್ ರೀತಿಯಲ್ಲಿ 'ರಾಮನ ಅವತಾರ' ಸಿನಿಮಾ ಪ್ರಚಾರ ಮಾಡಲಾಗುತ್ತಿದೆ. ಸದ್ಯ ಚಿತ್ರತಂಡ ಪ್ರೇಕ್ಷಕರಿಗೆ ಭರ್ಜರಿ ಆಫರ್ ಕೊಡುತ್ತಿದೆ. 'ರಾಮನ ಅವತಾರ' ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂ.ಗೆ ನೀವು ಸಿನಿಮಾ ನೋಡಬಹುದಾಗಿದೆ. ಈ ವಿಚಾರವನ್ನು ಚಿತ್ರರಂಗ ಅಧಿಕೃತವಾಗಿ ಘೋಷಿಸಿದೆ.
ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿರುವ ಸಮಯದಲ್ಲಿ ಈ ಪ್ರಯತ್ನ ಮೆಚ್ಚಲೇಬೇಕು. ಮೇ 9ರಂದು 'ರಾಮನ ಅವತಾರ' ಪ್ರೀಮಿಯರ್ ಶೋಗಳು ಆರಂಭವಾಗುತ್ತದೆ. ಮೇ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಮೇ 10ಕ್ಕೂ ಮುನ್ನ ಒಂದು ದಿನ ಮೊದಲು ಅಂದ್ರೆ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಕೂಡ 99ರೂಪಾಯಿಗೆ ನಿಗದಿ ಮಾಡಲಾಗಿದೆ.
ಒಂದು ದಿನ ಮಾತ್ರವಲ್ಲ. ಮೇ 9 ಹಾಗೂ ಮೇ 10ರಂದು ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆ 99 ರೂ.ಗೆ ಸಿಗಲಿದೆ. ವಿಕಾಸ್ ಪಂಪಾಪತಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಶುಭ್ರ ಅಯ್ಯಪ್ಪ, ಅರುಣ್ ಸಾಗರ್ ಸಹ ಬಣ್ಣ ಹಚ್ಚಿದ್ಧಾರೆ. ಈ ಚಿತ್ರದಲ್ಲಿ ವಿಕಾಸ್, ಮಾರ್ಡನ್ ರಾಮನ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ಫನ್ನಿ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ರಾಮ ಹೇಗೆ ಜೆಂಟಲ್ ಮ್ಯಾನ್ ಆಗ್ತಾನೆ? ಏನೆಲ್ಲಾ ಸಮಸ್ಯೆಗಳಿಗೆ ಸಿಲುಕುತ್ತಾನೆ? ಅದರಿಂದ ಹೊರ ಬರುವುದು ಹೇಗೆ? ಎನ್ನುವುದು ಸಿನಿಮಾ ಕಥೆ.
ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಚಿತ್ರಕ್ಕೂ ಬಂಡವಳಾ ಹಾಕಿದ್ದಾರೆ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.
ದೊಡ್ಡ ಸಿನಿಮಾಗಳು ಇಲ್ಲದೇ ನಷ್ಟ ಭರಿಸಲಾಗದೇ ಒಂದೊಂದೇ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಬಾಗಿಲು ಬಂದ್ ಆಗುತ್ತಿದೆ. ನಗರದ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಕೂಡ ಇದೀಗ ಬಾಗಿಲು ಮುಚ್ಚಿದೆ. ಇಂತಹ ಸಮಯದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಬೇಕಿದೆ. ಆ ನಿಟ್ಟಿನಲ್ಲಿ 'ರಾಮನ ಅವತಾರ' ತಂಡ ಒಳ್ಳೆಯ ಕೆಲಸ ಮಾಡುತ್ತಿದೆ.


Click it and Unblock the Notifications











