ಸಿಎಂ ಭೇಟಿಯಾಗಿ ಮಗಳ ಮದುವೆ ಆರತಕ್ಷತೆಗೆ ಆಹ್ವಾನ ನೀಡಿದ ರಮೇಶ್ ಅರವಿಂದ್ ದಂಪತಿ
ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಡಿಸೆಂಬರ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಹಸೆಮಣೆ ಏರಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ.
Recommended Video
ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಕ್ಷಯ್, ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ನಿಹಾರಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಗಣ್ಯರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಕೋರಿದ್ದರು. ಇದೀಗ ಮಗಳ ಮದುವೆಯ ಆರತಕ್ಷತೆ ಅದ್ದೂರಿಯಾಗಿ ನಡೆಸಲು ತಯಾರಿ ನಡೆಸುತ್ತಿದ್ದಾರೆ.

ಮಗಳ ಮದುವೆ ಆರತಕ್ಷತೆಗೆ ಗಣ್ಯರಿಗೆ ಆಹ್ವಾನ
ಮಗಳ ಮದುವೆಯನ್ನು ತೀರ ಆಪ್ತರ ಸಮ್ಮುಖದಲ್ಲಿ ನೆರವೇರಿಸಿದ್ದ ರಮೇಶ್ ಅರವಿಂದ್ ಇದೀಗ ಆರತಕ್ಷತೆಯನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ನಿಹಾರಿಕಾ ಆರತಕ್ಷತೆಯಲ್ಲಿ ಚಿತ್ರರಂಗ, ರಾಜಕೀಯ ಮತ್ತು ಬೇರೆ ಬೇರೆ ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿಎಂಗೆ ಆಹ್ವಾನ ನೀಡಿದ ರಮೇಶ್ ದಂಪತಿ
ಈಗಾಗಲೇ ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಗೆ ಗಣ್ಯರಿಗೆ ಆಮಂತ್ರಣ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ರಮೇಶ್ ಅರವಿಂದ್ ದಂಪತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಗಳ ಮದುವೆ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ರಮೇಶ್ ಮತ್ತು ಪತ್ನಿ ಅರ್ಚನಾ ದಂಪತಿ ಸಿಎಂ ಭೇಟಿಯಾಗಿ ಆಹ್ವಾನ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನವರಿ 16ಕ್ಕೆ ಆರತಕ್ಷತೆ
ಅಂದಹಾಗೆ ಮೂಲಗಳ ಪ್ರಕಾರ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಕಾರ್ಯಕ್ರಮ ಜನವರಿ 16ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಮೇಶ್ ದಂಪತಿ ಯಾರೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ, ಆರತಕ್ಷತೆಯಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ನಿಹಾರಿಕಾ-ಅಕ್ಷಯ್ ಅವರದ್ದು ಲವ್ ಮ್ಯಾರೇಜ್
ನಿಹಾರಿಕಾ ಮತ್ತು ಅಕ್ಷಯ್ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯವರ ಒಪ್ಪಿಗೆ ಪಡೆದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಶೀರ್ವಾದ ಕೇಳಿದ ರಮೇಶ್ ಅರವಿಂದ್
ಮಗಳ ಮದುವೆ ನೆರವೇರಿಸಿದ ಬಳಿಕ ರಮೇಶ್ ಅರವಿಂದ್ ಮಗಳ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಮಗಳು ನಿಹಾರಿಕಾ ಹಾಗೂ ಅಕ್ಷಯ್ ವಿವಾಹ ಇಂದು ನಡೆಯಿತು. ನಿಮ್ಮ ಪ್ರೀತಿಯ ಆಶೀರ್ವಾದ ಈ ಹೊಸ ಜೋಡಿ ಮೇಲೆ ಸದಾ ಇರಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.


Click it and Unblock the Notifications











