ಮಗಳ ಮದುವೆ ಸಂಭ್ರಮ; ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದ ರಮೇಶ್ ಅರವಿಂದ್
ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ನಿನ್ನೆ (ಡಿಸೆಂಬರ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಹಸೆಮಣೆ ಏರಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ.
Recommended Video
ಕಳೆದ ನಾಲ್ಕೈದು ದಿನಗಳಿಂದ ರಮೇಶ್ ಅರವಿಂದ್ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಜೋರಾಗಿತ್ತು. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಸಮಾರಂಭ ಸೇರಿದಂತೆ ಮದುವೆಯ ಶಾಸ್ತ್ರಗಳು ಅದ್ದೂರಿಯಾಗಿ ನಡೆದಿದೆ. ರಮೇಶ್ ಅರವಿಂದ್ ಮಗಳ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ..

ಮಗಳ ಮದುವೆ ನೆರವೇರಿಸಿದ ರಮೇಶ್ ಅರವಿಂದ್
ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಕ್ಷಯ್, ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ನಿಹಾರಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಗಣ್ಯರು ಭಾಗಿಯಾಗಿ, ನವ ಜೋಡಿಗೆ ಶುಭಕೋರಿದ್ದಾರೆ.

ನಿಮ್ಮೆಲ್ಲರ ಆಶೀರ್ವಾದ ಬೇಕೆಂದ ರಮೇಶ್ ಅರವಿಂದ್
ಮಗಳ ಮದುವೆ ನೆರವೇರಿಸಿದ ಬಳಿಕ ಅಂದರೆ ನಿನ್ನ ಸಂಜೆ ರಮೇಶ್ ಅರವಿಂದ್ ಮಗಳ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ನನ್ನ ಮಗಳು ನಿಹಾರಿಕ ಹಾಗೂ ಅಕ್ಷಯ್ ವಿವಾಹ ಇಂದು ನಡೆಯಿತು. ನಿಮ್ಮ ಪ್ರೀತಿಯ ಆಶೀರ್ವಾದ ಈ ಹೊಸ ಜೋಡಿ ಮೇಲೆ ಸದಾ ಇರಲಿ' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಅಭಿನಂದನೆ
ರಮೇಶ್ ಅರವಿಂದ್ ಪೋಸ್ಟ್ ಗೆ, ಅಭಿಮಾನಿಗಳು ಅಭಿನಂದನೆ ಸಲ್ಲಿಸಿ, ನಟ ಜೋಡಿಗೆ ಶುಭಕೋರಿ ಕಾಮೆಂಟ್ ಮಾಡುತ್ತಿದ್ದಾರೆ. ಮಗಳ ಮದುವೆಯ ಸುಂದರ ಕ್ಷಣಗಳ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ.

ನಿಹಾರಿಕಾ-ಅಕ್ಷಯ್ ಅವರದ್ದು ಲವ್ ಮ್ಯಾರೇಜ್
ನಿಹಾರಿಕಾ ಮತ್ತು ಅಕ್ಷಯ್ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ.

ಜನವರಿಯಲ್ಲಿ ಆರತಕ್ಷತೆ
ಇಂದು ಮದುವೆ ನೆರವೇರಿದರೆ ಜನವರಿ 16ರಂದು ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರಿಸಪ್ಷನ್ ನಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ. ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.


Click it and Unblock the Notifications











