ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್
ಈ ಹಿಂದೆ ಹಿಟ್ ಆದ ಚಿತ್ರಗಳ ಸೀಕ್ವೆಲ್ ಮಾಡಿದ್ರೆ ಅಥವಾ ಅವುಗಳ ಹೆಸರಿನಲ್ಲಿ ಪಾರ್ಟ್ 2 ಮಾಡಿದ್ರೆ ಅಂತಹ ಚಿತ್ರಗಳಿಗೆ ಯಶಸ್ಸು ಸಿಗುವುದಿಲ್ಲ ಎಂಬ ದೊಡ್ಡ ನೆಗೆಟಿವ್ ಸುದ್ದಿ ಇತ್ತು. ಕೇವಲ ಸುದ್ದಿ ಮಾತ್ರವಲ್ಲದೇ ಹಲವಾರು ಬಾರಿ ಈ ಸುದ್ದಿ ನಿಜವೂ ಆಗಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಹಳೆ ಹಿಟ್ ಚಿತ್ರಗಳ ಸೀಕ್ವೆಲ್ ಮಾಡಿದ್ರೆ ಅಥವಾ ಆ ಶೀರ್ಷಿಕೆಗಳಿಗೆ ಪಾರ್ಟ್ 2 ಎಂದು ಸೇರಿಸಿದ್ರೆ ಸಹ ಹಿಟ್ ಆಗಲಿವೆ ಎಂಬುದನ್ನು ಕೆಲ ಚಿತ್ರಗಳು ಸಾಬೀತುಪಡಿಸಿದವು.
ಅದರಲ್ಲಿಯೂ ಕಳೆದ ವರ್ಷ ಬಿಡುಗಡೆಗೊಂಡ ಕೆಜಿಎಫ್ ಚಾಪ್ಟರ್ 2, ಲವ್ ಮಾಕ್ಟೇಲ್ 2 ಹಾಗೂ ಗಾಳಿಪಟ 2 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಂಡವು. ಹೀಗೆ ಪಾರ್ಟ್ 2 ಚಿತ್ರಗಳ ಕ್ರೇಜ್ ಕೂಡ ಹೆಚ್ಚಾಯಿತು. ಸದ್ಯ ಈ ಪಟ್ಟಿಯನ್ನು ಸೇರಿಕೊಳ್ಳಬಹುದಾದ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾವೆಂದರೆ ಶಿವಾಜಿ ಸುರತ್ಕಲ್ 2.

ಹೌದು, 2020ರಲ್ಲಿ ಬಿಡುಗಡೆಗೊಂಡಿದ್ದ ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ದ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಆ ಚಿತ್ರದ ಮುಂದುವರಿದ ಭಾಗಕ್ಕೆ ಶಿವಾಜಿ ಸುರತ್ಕಲ್ ದ ಕೇಸ್ ಆಫ್ ಮಾಯಾವಿ ಎಂದು ಹೆಸರಿಡಲಾಗಿದ್ದು, ಚಿತ್ರ ಘೋಷಣೆಯಾದಾಗಿನಿಂದಲೂ ಹೈಪ್ ಹುಟ್ಟುಹಾಕಿದೆ. ಅದರಲ್ಲಿಯೂ ರಮೇಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಈ ಹೈಪ್ ಅನ್ನು ದುಪ್ಪಟ್ಟು ಮಾಡಿತ್ತು.
ಇದೀಗ ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಮತ್ತೊಮ್ಮೆ ಸದ್ದು ಮಾಡುವ ಯೋಜನೆಯಲ್ಲಿದೆ. ಹೌದು, ಇದೇ ತಿಂಗಳ 31ರಂದು ಸಂಜೆ 5.01ಕ್ಕೆ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಹಾಗೂ ಅದೇ ಸಮಯಕ್ಕೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‌ನ ಲೈವ್‌ನಲ್ಲಿ ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಇನ್ನು ಚಿತ್ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.
ಇನ್ನು ಕಳೆದ ಬಾರಿ ಬಿಡುಗಡೆಯಾಗಿದ್ದ ಟೀಸರ್ ನೋಡಿದ್ದ ಸಿನಿ ರಸಿಕರಿಗೆ ಮೊದಲನೇ ಭಾಗದ ರೀತಿ ಎರಡನೇ ಭಾಗವೂ ಸಹ ಮಿಸ್ಟರಿ ಥ್ರಿಲ್ಲರ್ ಕಥೆ ಎಂಬುದು ಟೀಸರ್ ನೋಡಿದ ಕೂಡಲೇ ತಿಳಿದುಬಿಟ್ಟಿತ್ತು. ಹೀಗಾಗಿಯೇ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವ ಸಿನಿಪ್ರೇಕ್ಷಕರಿಗೆ ಈ ಚಿತ್ರದ ಟೀಸರ್ ಕಿಕ್ ಕೊಟ್ಟಿತ್ತು. ಚಿತ್ರದ ಟೀಸರ್ ರಮೇಶ್ ಅರವಿಂದ್ ಅವರ ಧ್ವನಿಯಲ್ಲಿರುವ 'ನಾವು ಬದುಕ್ತಾ ಇರೋದು ನರಕದಲ್ಲಿ, ರಾಕ್ಷಸರು ನಮ್ಮ ಸುತ್ತ ಇದ್ದಾರೆ, ರಾಕ್ಷಸರು ನಮ್ಮ ಜೊತೆಗೂ ಇದ್ದಾರೆ, ರಾಕ್ಷಸರು ನಮ್ಮ ಒಳಗೂ ಇದ್ದಾರೆ' ಎಂಬ ಡೈಲಾಗ್ ಮೂಲಕ ಆರಂಭಗೊಂಡಿತ್ತು. ಈ ಸಂಭಾಷಣೆಯ ವೇಳೆ ಮರ್ಡರ್ ಜರುಗಿರುವ ದೃಶ್ಯಗಳು ಮತ್ತು ರಮೇಶ್ ಅದರ ಬೆನ್ನತ್ತಿರುವ ದೃಶ್ಯಗಳನ್ನು ತೋರಿಸಲಾಗಿತ್ತು.
ಹೀಗೆ ಟೀಸರ್ ಮೂಲಕ ಸಿನಿ ರಸಿಕರಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಶಿವಾಜಿ ಸುರತ್ಕಲ್ 2 ಟ್ರೈಲರ್ ಮೂಲಕ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











