ಅಂದು ರಣಗಿರಿ ರಹಸ್ಯ.. ಈಗ ಮಾಯಾವಿ ರಹಸ್ಯ: ಈ ಸಲ 'ಶಿವಾಜಿ ಸುರತ್ಕಲ್' ತನಿಖೆ ಹೇಗಿರುತ್ತೆ?
3 ವರ್ಷಗಳ ಹಿಂದೆ ರಣಗಿರಿ ರಹಸ್ಯ ಭೇದಿಸಿದ್ದ 'ಶಿವಾಜಿ ಸುರತ್ಕಲ್' ಈಗ ಹೊಸ ಕೇಸ್ ಹಿಂದೆ ಬಿದ್ದಿದ್ದಾನೆ. 'ಶಿವಾಜಿ ಸುರತ್ಕಲ್' ಸೀಕ್ವೆಲ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ರಮೇಶ್ ಅರವಿಂದ್ ಮತ್ತೊಮ್ಮೆ ಟೈಟಲ್ ರೋಲ್‌ನಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡೋಕೆ ಬರ್ತಿದ್ದಾರೆ. ಬಹುತೇಕ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ.
ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತ್ತು ರೇಖಾ ಕೆ ಎನ್. ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಜಿತ್ ವೈ ಆರ್ ಚಿತ್ರಕಥೆಗೆ ಸಹಾಯ ಮಾಡಿದ್ದಾರೆ. ಕೆಆರ್‌ಜಿ ಸ್ಟೂಡಿಯೋಸ್ ಮೂಲಕ ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ. ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ 'ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ' ಆಗಲಿದೆ. ಗುರುಪ್ರಸಾದ್ ಎಂ ಜಿ ಮತ್ತು ದರ್ಶನ್ ಅಂಬಟ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

'ಶಿವಾಜಿ ಸುರತ್ಕಲ್'- 2 ಚಿತ್ರದ ಕೊನೆಯ ಹಾಗೂ ಒಂದು ವಿಶಿಷ್ಟ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದೆ ಚಿತ್ರತಂಡ. ಈ ಹಾಡಿಗೆ '777 ಚಾರ್ಲಿ' ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಮೆರಗು ಹೆಚ್ಚಿಸಿದ್ದಾರೆ. ಹಾಡಿನ ಕೊರಿಯೋಗ್ರಫಿ ಮಾಡಿದ್ದು ಧನಂಜಯ್ ಮಾಸ್ಟರ್. ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್ ಹಾಗೂ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ಚಿತ್ರಕ್ಕೆ ಮೆರಗು ತುಂಬಿದ್ದಾರೆ.
ಮೊದಲ ಭಾಗ ರಣಗಿರಿ ರಹಸ್ಯದಲ್ಲಿ ಶಿವಾಜಿ ತನ್ನ ಚಾಕಚಕ್ಯತೆಯಿಂದ ಪ್ರಕರಣ ಭೇದಿಸಿದ್ದು ಗೊತ್ತೇಯಿದೆ. ಆದರೆ ಈ ಚಿತ್ರದಲ್ಲಿ ಕೇಸ್ ನಂ 131, ಶಿವಾಜಿಯನ್ನು ಮತ್ತಷ್ಟು ಸವಾಲುಗಳಿಗೆ ಒಡ್ಡಲಿದೆಯಂತೆ. ಇನ್ನು ಪ್ರೀಕ್ವೆಲ್‌ನಲ್ಲಿ ಇದ್ದಂತೆ ಶಿವಾಜಿ ಫರ್ಸನಲ್ ಲೈಫ್ ಜರ್ನಿಯ ಝಲಕ್ ಕುಡ ಇರಲಿದೆ. ಮೊದಲ ಭಾಗದಂತೆ ಈ ಸಿನಿಮಾ ಕೂಡ ಥಿಯೇಟರ್‌ನಲ್ಲಿ ನೋಡುವಂತಹ ಸಿನಿಮಾ ಎನ್ನುತ್ತಿದೆ ಚಿತ್ರತಂಡ. ಚಿತ್ರಕ್ಕೆ 6 ತಿಂಗಳು ಶ್ರಮ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಜೂಡಾ ಸ್ಯಾಂಡಿ.

ಶಿವಾಜಿ ಸುರತ್ಕಲ್- 2 ಚಿತ್ರಕ್ಕೆ ರಾಜನ್ ಸೌಂಡ್ ಎಫೆಕ್ಟ್ಸ್ ಇದೆ. ಓಟಿಟಿ, ಟಿವಿಗಿಂತ ಈ ಮಿಸ್ಟರಿ ಥ್ರಿಲ್ಲರ್ ಚಿತ್ರವನ್ನು ಥಿಯೇಟರ್‌ನಲ್ಲೇ ನೋಡಬೇಕು ಎಂದು ನಿರ್ದೇಶಕರು ಹೇಳಿದ್ದಾರೆ. ನಿರ್ಮಾಪಕರು ಯಾವುದಕ್ಕೂ ರಾಜಿಯಾಗದೇ ಬಹಳ ಸೊಗಸಾಗಿ ಸಿನಿಮಾ ಮಾಡಿ ಮುಗಿಸಿದ್ದಾರೆ. ರಾಜ್ಯಾದ್ಯಂತ 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಶಿವಾಜಿ ಸುರತ್ಕಲ್- 2 ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಟೈಟಲ್‌ನಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಮೀರಿ ಗೆಲ್ಲುತ್ತಾನೆ ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗುತ್ತದೆ ಎಂದು ಆಕಾಶ್ ಶ್ರೀವತ್ಸ ಉತ್ಸಾಹದಿಂದ ಹೇಳಿದ್ದಾರೆ.


Click it and Unblock the Notifications











