'ಕೂಲಿ', 'ವಾರ್- 2' ಎದುರು '45' ಬಾಕ್ಸಾಫೀಸ್ ಕದನ?; ನಿರ್ಮಾಪಕ ರಮೇಶ್ ರೆಡ್ಡಿ ಏನಂದ್ರು?
ದೊಡ್ಡ ಸಿನಿಮಾಗಳ ಬಿಡುಗಡೆಗೆ ಲಾಂಗ್ ವೀಕೆಂಡ್ ಪ್ಲ್ಯಾನ್ ಮಾಡಲಾಗುತ್ತದೆ. ಸದ್ಯ ತಮಿಳಿನ 'ಕೂಲಿ' ಹಾಗೂ ಬಾಲಿವುಡ್ 'ವಾರ್'-2 ಜೊತೆಗೆ ಕನ್ನಡದ '45' ಚಿತ್ರತಂಡ ಕೂಡ ಇಂಡಿಪೆಂಡೆನ್ಸ್ ಡೇ ವೀಕೆಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಮೂರು ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ.
ಎರಡು ದೊಡ್ಡ ಸಿನಿಮಾಳು ಒಟ್ಟಿಗೆ ತೆರೆಗ್ಪಳಿಸಿದರೆ ಯಾವುದಾದರೂ ಒಂದು ಚಿತ್ರಕ್ಕೆ ಹಿನ್ನಡೆಯಾಗುತ್ತದೆ. ಈ ಹಿಂದೆ ಸಾಕಷ್ಟ ಸಂದರ್ಭಗಳಲ್ಲಿ ಈ ರೀತಿ ಆಗಿದೆ. ಅದೇ ಕಾರಣಕ್ಕೆ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರಿ ಸಿನಿಮಾ ಬಿಡುಗಡೆ ಮಾಡುವಂತಾಗಿದೆ. 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳು 4 ದಿನಗಳ ಅಂತರದಲ್ಲಿ ತೆರೆಗೆ ಬಂದಿತ್ತು. ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ರಿಲೀಸ್ ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಸಿನಿಮಾ ಕ್ರೇಜ್ ಕಮ್ಮಿ ಆಗಿತ್ತು. ಇದು ಚಿತ್ರದ ಕಲೆಕ್ಷನ್ ಮೇಲೆ ಕೂಡ ಪರಿಣಾಮ ಬೀರಿತ್ತು.

ಆಗಸ್ಟ್ 14ಕ್ಕೆ ಬಾಲಿವುಡ್ ಸ್ಪೈ ಆಕ್ಷನ್ ಥ್ರಿಲ್ಲರ್ 'ವಾರ್- 2' ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ. ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಇನ್ನು ಆಗಸ್ಟ್ 15ಕ್ಕೆ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಬಹಳ ಹಿಂದೆಯೇ ಅರ್ಜುನ್ ಜನ್ಯಾ ನಿರ್ದೇನದ '45' ಸಿನಿಮಾ ರಿಲೀಸ್ ಘೋಷಣೆ ಆಗಿತ್ತು.
'ಕೂಲಿ' ಹಾಗೂ 'ವಾರ್- 2' ರೀತಿಯ ದೊಡ್ಡ ಚಿತ್ರಗಳು ಒಟ್ಟಿಗೆ ಬರುತ್ತಿರುವುದರಿಂದ ಅದರ ಎದುರು '45' ಸಿನಿಮಾ ಬಿಡುಗಡೆ ಆಗುತ್ತಾ? ಅಥವಾ ಮುಂದಕ್ಕೆ ಹೋಗುತ್ತಾ ಎನ್ನುವ ಊಹಾಪೋಹ ಶುರುವಾಗಿತ್ತು. ಅದಕ್ಕಿಂತ ಮುಖ್ಯವಾಗಿ 'ಕೂಲಿ' ಹಾಗೂ '45' ಎರಡೂ ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಹಾಗಾಗಿ ಆಗಸ್ಟ್ 15ಕ್ಕೆ '45' ಸಿನಿಮಾ ಬರೋದು ಬಹುತೇಕ ಅನುಮಾನ ಎನ್ನಲಾಗ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕರಾದ ರಮೇಶ್ ರೆಡ್ಡಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

"ಸದ್ಯಕ್ಕೆ ನಾವು ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಅಥವಾ ಹಿಂದಕ್ಕೆ ಹಾಕುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನೋಡೋಣ ಇನ್ನು ಸಮಯ ಇದೆ. ನಮ್ಮ ಸಿನಿಮಾ ಗ್ರಾಫಿಕ್ಸ್ ಕೆಲಸಗಳನ್ನು ಕೆನಡಾದಲ್ಲಿ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಅದರ ಕೆಲಸ ಮುಗಿದು ಫಸ್ಟ್ ಕಾಪಿ ಸಿಗುತ್ತದೆ. ಅದನ್ನು ನೋಡಿ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಯೋಚಿಸುತ್ತೇವೆ. ಒಂದು ವೇಳೆ ಆ ಮಾಡಬೇಕು ಅಂದರೂ ಎರಡು ವಾರ ಮೊದಲೇ ಸಿನಿಮಾ ಬಿಡುಗಡೆ ಆಗಬಹುದು. ಯಾವುದು ಫೈನಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಡುತ್ತೇನೆ" ಎಂದು ರಮೇಶ್ ರೆಡ್ಡಿ ತಿಳಿಸಿದ್ದಾರೆ.
ಅಯಾನ್ ಮುಖರ್ಜಿ ನಿರ್ದೇಶನದ 'ವಾರ್- 2' ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ತೆಲುಗು ನಟ ಜ್ಯೂ. ಎನ್‌ಟಿಆರ್ ಅಬ್ಬರಿಸಿದ್ದಾರೆ. ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಹೃತಿಕ್- ತಾರಕ್ ಕಾದಾಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಇದು YRF ಸ್ಪೈ ಥ್ರಿಲ್ಲರ್ ಯೂನಿವರ್ಸ್‌ನಲ್ಲಿ ಜಾಗ ಮಾಡಿಕೊಂಡಿದೆ. 6 ವರ್ಷಗಳ ಹಿಂದೆ ಬಂದಿದ್ದ 'ವಾರ್' ಚಿತ್ರದ ಸೀಕ್ವೆಲ್ ಆಗಿದೆ.
ಆದಿತ್ಯಾ ಚೋಪ್ರಾ ನಿರ್ಮಾಣದ ಚಿತ್ರಕ್ಕೆ ಪ್ರೀತಂ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್, ಮೈ ಜುಮ್ ಎನಿಸೋ ಚೇಸಿಂಗ್ ಸನ್ನಿವೇಶಗಳು ಚಿತ್ರದಲ್ಲಿದೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಸಿನಿಮಾ ಕಟ್ಟಿಕೊಡಲಾಗಿದೆ. ಅದಕ್ಕಾಗಿ ಹೆಚ್ಚು ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆ. ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.
ಅತ್ತ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಮಲ್ಟಿಸ್ಟಾರರ್ ಸಿನಿಮಾ ಆಗಿದೆ. ತೆಲುಗುವ ನಟ ನಾಗಾರ್ಜುನಾ ಹಾಗೂ ಕನ್ನಡ ನಟ ಉಪೇಂದ್ರ ಮುಖ್ಯವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪೂಜಾ ಹೆಗ್ಡೆ ಸ್ಪೆಷಲ್ ಸಾಂಗ್ ಕೂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿದೆ.
'45' ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶನದ ಚೊಚ್ಚಲ ಸಿನಿಮಾ. ಶಿವರಾಜ್‌ಕುಮಾರ್ ಜೊತೆಗೆ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಗಾಗಿ ಮೂರು ಕೂಡ ಮಲ್ಟಿಸ್ಟಾರರ್ ಸಿನಿಮಾಗಳೇ. ಶಿವಣ್ಣ ಹಾಗೂ ಉಪ್ಪಿ ಸಿಕ್ಕಾಪಟ್ಟೆ ಪವರ್‌ಫುಲ್ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಇಬ್ಬರ ನಡುವೆ ಮುಖ್ಯವಾದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಅವರ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸಾಗುವಂತಿದೆ.
ತಿಂಗಳ ಹಿಂದೆ '45' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. 3 ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುವುದು ಕೂಡ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಕಾರಣವಾಗಬಹುದು. ಸ್ಕ್ರೀನ್‌ಗಳ ಸಂಖ್ಯೆಯಲ್ಲಿ ಗೊಂದಲ ಉಂಟಾಗಬಹುದು. ಅದೇ ಕಾರಣಕ್ಕೆ '45' ಸಿನಿಮಾ ರಿಲೀಸ್ ಡೇಟ್ ಬದಲಾಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.


Click it and Unblock the Notifications











