»   » ಶಾಪ ನಾನು ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದು

ಶಾಪ ನಾನು ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದು

By: *ಸತ್ಯನಾರಾಯಣ
Subscribe to Filmibeat Kannada

ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಅಳೆದು ತೂಗಿ ಮಾತಾಡುವ ರಮೇಶ್‌, ಈ ಬಾರಿ ಫಾರ್‌ ಎ ಚೇಂಜ್‌ ನೇರವಾಗಿಯೇ ತಮ್ಮ ಅನಿಸಿಕೆಯನ್ನು ಘೋಷಿಸಿದರು. ಬಿ.ಸಿ. ಪಾಟೀಲರ ಹೊಸ ಕಚೇರಿಯ ತಾರಸಿಯನ್ನು ನೇವರಿಸಿದಂತಿದ್ದ ತೆಂಗಿನ ಮರಗಳೂ ರಮೇಶ್‌ ಮಾತಿಗೆ ಬೆರಗಾದಂತೆ ತಲೆದೂಗಿದವು.

ಶಾಪ ಚಿತ್ರದ ಪತ್ರಿಕಾ ಪ್ರದರ್ಶನ ನಂತರ ಅಲ್ಲೊಂದು ಸಂತೋಷ ಕೂಟ ಏರ್ಪಾಡಾಗಿತ್ತು. ರಮೇಶ್‌ ಆಗಷ್ಟೇ ಪಾಟೀಲರ ಜೊತೆಗೆ ಥಿಯೇಟರ್‌ಗಳಿಗೊಂದು ಸುತ್ತು , ಸುತ್ತು ಹೊಡೆದು ಬಂದಿದ್ದರು. ಅಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಕಣ್ಣಾರೆ ಕಂಡಿದ್ದರು.

'ನಮ್ಮ ಪ್ರೇಕ್ಷಕರು ಯಾವ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಸಣ್ಣ ಪುಟ್ಟ ಸಂಗತಿಗಳನ್ನೂ ಗಮನಿಸುತ್ತಿದ್ದಾರೆ. ನಾವು ಯಾವುದು ಅವರಿಗೆ ಅರ್ಥವಾಗೋದಿಲ್ಲ ಅಂದುಕೊಂಡಿದ್ದೆವೋ ಅದೆಲ್ಲವೂ ರೀಚ್‌ ಆಗಿದೆ. ನಾವು ಊಹಿಸದೇ ಇರೋ ದೃಶ್ಯಕ್ಕೆ ಜನ ಚಪ್ಪಾಳೆ ತಟ್ಟುತ್ತಿದ್ದಾರೆ. ಅದರಲ್ಲೂ ನಂದಾ ಥಿಯೇಟರ್‌ನಲ್ಲಿ ಒಬ್ಬ ಪ್ರೇಕ್ಷಕ ನೀಟಾಗಿ ಇಡೀ ಚಿತ್ರದ ವಿಮರ್ಶೆಯನ್ನೇ ಮಾಡಿದ. "

ಚಿತ್ರದ ಕ್ಲೈಮಾಕ್ಸನ್ನು ಜನ ಹೇಗೆ ರಿಸೀವ್‌ ಮಾಡುತ್ತಾರೆ ಅನ್ನುವ ಬಗ್ಗೆ ರಮೇಶ್‌ಗೆ ಆತಂಕ ಮತ್ತು ಕುತೂಹಲಗಳೆರಡೂ ಇದ್ದುವಂತೆ. ನಾಯಕಿಯ ಪತಿ ಕೊಲೆಯಾಗುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಕುಳಿತಿದ್ದವನು 'ಅಯ್ಯೋ ಸಿನಿಮಾ ಬಿದ್ದು ಹೋಯ್ತು." ಅಂತ ಕಿರುಚಿಕೊಂಡನಂತೆ. ಆಗ ರಮೇಶ್‌ ಮತ್ತು ಪಾಟೀಲರ ಹೃದಯ ಒಂದು ಕ್ಷಣ ನಿಂತೇ ಹೋಗಿತ್ತು. ಅದಾಗಿ ಸ್ವಲ್ಪ ಹೊತ್ತಿಗೆ ಇನ್ನೊಂದು ಪಾತ್ರ ಕೊಲೆಯಾಗುತ್ತದೆ. ಆವಾಗ ಅದೇ ಪ್ರೇಕ್ಷಕ 'ಸಿನಿಮಾ ಅಂದರೆ ಇದಪ್ಪಾ " ಎಂದು ಮತ್ತೆ ಕಿರುಚಿದನಂತೆ.

'ಶೂಟಿಂಗ್‌ ಸಮಯದಲ್ಲಿ ಬೇರೆಯವರೊಡನೆ ಮಾತಾಡಲೂ ಬಿಡುತ್ತಿರಲ್ಲಿಲ್ಲ "

ಒಂದು ಒಳ್ಳೇ ಸಿನಿಮಾ ರೂಪುಗೊಳ್ಳುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆಯೂ ರಮೇಶ್‌ ಮೊನ್ನೆ ಮಾತಾಡಿದರು. ಸಂಭಾಷಣೆಯ ನಡುವೆ 'ಪಾಸ್‌"(pause) ಇದ್ದಾಗ ನಟನಿಗೆ ಅಭಿನಯಕ್ಕೆ ಅವಕಾಶ ಇರುತ್ತದೆ. ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಮಾತುಗಳ ನಡುವೆ ಅಂತರವೇ ಇರುವುದಿಲ್ಲ. ಶಾಪದಲ್ಲಿ ಅಂಥಾ ಅವಕಾಶವಿತ್ತು ಎಂದು ರಮೇಶ್‌ ಸಂತೋಷಪಟ್ಟರು. ಚಿತ್ರದ ಸ್ಕಿೃೕನ್‌ ಪ್ಲೇ ಮಾಡೋದಕ್ಕೆ ನಿರ್ದೇಶಕ ಅಶೋಕ್‌ ಪಾಟೀಲ್‌ ಒಂದು ವರ್ಷ ತೆಗೆದುಕೊಂಡಿದ್ದು , ಆ ಕಾರಣಕ್ಕೆ ಸಣ್ಣ ಪುಟ್ಟ ವಿವರಗಳೂ ಚಿತ್ರದಲ್ಲಿ ದಾಖಲಾಗಿದ್ದು , ದೀಪಾವಳಿಯ ಒಂದು ದೃಶ್ಯದ ಸಂಯೋಜನೆಗೇ ಇಡೀ ದಿನ ಖರ್ಚಾಗಿದ್ದು , ನಾಯಕಿಯ ಶವದ ಮುಂದೆ ಅಳುವ ದೃಶ್ಯ ವಿಭಿನ್ನವಾಗಿ ಬರಬೇಕು ಅನ್ನೋ ಕಾರಣಕ್ಕೆ ಹತ್ತಾರು ಕ್ಯಾಸೆಟ್‌ ನೋಡಿದ್ದು, ಚಿತ್ರದ ಲೆಂಗ್ತ್‌ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕೆ ಕೆಲವು ಇಷ್ಟವಾದ ದೃಶ್ಯಗಳು ಕತ್ತರಿಗೆ ಬಲಿಯಾದದ್ದು... ಹೀಗೆ ರಮೇಶ್‌ ಹತ್ತಾರು ಸಂಗತಿಗಳನ್ನು ಒಂದೇ ಉಸಿರಲ್ಲಿ ಹೇಳುತ್ತಾ ಹೋದರು. ಅಶೋಕ್‌ ಪಾಟೀಲ್‌ ಅವರಿಗಂತೂ ಪದೇ ಪದೇ ಅಭಿನಂದನೆ ಸಂದಾಯವಾಗುತ್ತಿತ್ತು. ದುರದೃಷ್ಟವಶಾತ್‌ ಅಶೋಕ್‌ ಆ ಹೊತ್ತಿಗೆ ದೂರದ ಅಮೆರಿಕಾದಲ್ಲಿದ್ದರು. ಅಲ್ಲಿಂದಾನೇ ಫೋನ್‌ ಮೂಲಕ ಪತ್ರಕರ್ತರ ಜೊತೆ ಮಾತಾಡಿದರು.

'ಅಶೋಕ್‌ ಮಹಾ ಹಠವಾದಿ. ತಾನಂದುಕೊಂಡಂತೇ ಚಿತ್ರ ಮೂಡಿಬರಬೇಕು ಅನ್ನೋ ಹಠ. ಮಡಿಕೇರಿಯಲ್ಲಿ ಶೂಟಿಂಗ್‌ ನಡೀತಾ ಇದ್ದಾಗ, ಅಭಿಮಾನಿಗಳು ನಮ್ಮ ಹತ್ರ ಬರೋದಿಕ್ಕೂ ಅವರು ಬಿಡುತ್ತಿರಲಿಲ್ಲ. ಬೇರೆಯವರ ಜೊತೆ ಮಾತನಾಡಿದರೆ ಮುಂದಿನ ಶಾಟ್‌ಗೆ ಬೇಕಾದ ಮೂಡ್‌ ಹೊರಟು ಹೋಗುತ್ತೆ ಅನ್ನೋ ಭಯ ಅವರದು. ಇನ್ನೇನು ಶಾಟ್‌ ತೆಗೋಬೇಕು ಅನ್ನೋವಾದ ಕಿವೀಲಿ ಏನೋ ಹೇಳಿ ಹೋಗೋರು. ಉದಾಹರಣೆಗೆ ವಾಕ್‌ ಮಾಡೋ ಶಾಟ್‌ ತೆಗೋಬೇಕು ಅನ್ನುವಾಗ 'ನಿಮ್ಮ ಬೂಟ್‌ನಲ್ಲಿ ತಲಾ 50 ಕೆಜಿ ಭಾರದ ಕಲ್ಲು ಇದೆ ಅಂತ ತಿಳ್ಕೊಳ್ಳಿ. " ಅಂತ ಹೇಳಿಬಿಡೋರು. ಒಬ್ಬ ನಟನ ಮೇಲೆ ಇದರಿಂದಾಗುವ ಪರಿಣಾಮ ಅದ್ಭುತ. ನಿರ್ದೇಶಕ ಮತ್ತು ನಟನ ನಡುವೆ ವೇವ್‌ ಲೆಂಗ್ತ್‌ ಚೆನ್ನಾಗಿದ್ದಾಗ ಸಿನಿಮಾಗೆ ತುಂಬಾ ಹೆಲ್ಪ್‌ ಆಗುತ್ತದೆ... "

'ನನ್ನ ಜೀವನದಲ್ಲಿ ಬರೀ ಸಂತೋಷದ ಘಟನೆಗಳೇ ಇರೋದು "

ಅಶೋಕ್‌ ಮೆಥಡ್‌ ಆ್ಯಕ್ಟಿಂಗ್‌ ಪ್ರಕಾರವನ್ನು ಇಷ್ಟ ಪಡುವವರು. ಶಾಪ ಚಿತ್ರದ ಕತೆಯನ್ನು ರಮೇಶ್‌ಗೆ ಹೇಳುತ್ತಿದ್ದಂತೆ "ನಿಮ್ಮ ಬದುಕಲ್ಲಿ ಹಿಂದೆ ನಡೆದ ಯಾವುದಾದರೂ ನೋವಿನ ಘಟನೆಗಳನ್ನು ನೆನಪಿಸಿಕೊಳ್ಳಿ. ಆಗ ಪಾತ್ರದಲ್ಲಿ ಪ್ರವೇಶ ಮಾಡೋದಕ್ಕೆ ಸುಲಭವಾಗುತ್ತೆ " ಅಂದಿದ್ದರಂತೆ. ಆದರೆ ತಮ್ಮ ಜೀವನದಲ್ಲಿ ಬರೀ ಸಂತೋಷದ ಘಟನೆಗಳೇ ಇವೆ ಅನ್ನೋದು ರಮೇಶ್‌ ಸಮಸ್ಯೆ.

ಇದೀಗ ಸಂತೋಷದ ಘಟನೆಗಳ ಪಟ್ಟಿಗೆ 'ಶಾಪ " ಚಿತ್ರದ ಪಾತ್ರವೂ ಸೇರಿಕೊಂಡಿದೆ. ಆದರೆ 'ಹೂಂ ಅಂತೀಯಾ, ಊಹೂಂ ಅಂತಿಯಾ" ಚಿತ್ರದ ವಿಚಾರ ಬಂದಾಕ್ಷಣ ರಮೇಶ್‌ ಮೂಡ್‌ ಕೆಟ್ಟು ಹೋಗುತ್ತದೆ. ನಿರ್ದೇಶಕರು ಕತೆ ಹೇಳಿದ್ದನ್ನು ಕೇಳಿದಾಗ ತುಂಬಾ ಸ್ವಾರಸ್ಯಕರ ಅನಿಸಿತ್ತು. ಆದರೆ ದುರದೃಷ್ಟವಶಾತ್‌ ಚಿತ್ರ ಆ ಥರ ಮೂಡಿಬರಲಿಲ್ಲ ಅಂದರು. ನಿರ್ಮಾಪಕರನ್ನು ಹೊಗಳುವುದಕ್ಕೆ ಮರೆಯಲಿಲ್ಲ. ಚಿತ್ರದ ಛಾಯಾಗ್ರಹಣ ಎಷ್ಟು ಭೀಕರವಾಗಿತ್ತು ಎಂದರೆ. ತಾನು ಅಷ್ಟೊಂದು ಕುರೂಪಿಯೇ ಎಂದು ಅನುಮಾನ ಬಂದು ಮನೆಗೆ ಹೋಗಿ ಕನ್ನಡಿ ನೋಡಿಕೊಂಡರಂತೆ.

ಈ ಮಧ್ಯೆ ಇನ್ನೊಂದು ಸಣ್ಣ ಬೇಜಾರು. ಕಳೆದ ವರ್ಷ ಆದ ಹಾಗೆಯೇ ಈ ವರ್ಷವೂ ರಮೇಶ್‌ ಫಿಲಂ ಫೆಸ್ಟಿವಲ್‌ ಥರ ಅವರ ಚಿತ್ರಗಳು ಒಂದರ ಹಿಂದೊಂದು ಸಾಲಾಗಿ ಬಿಡುಗಡೆಯಾಗುವ ಅಪಾಯವಿದೆ. ಕಳೆದ ಶುಕ್ರವಾರ ಶಾಪ ತೆರೆ ಕಂಡರೆ, ಈ ವಾರ 'ಪ್ರೇಮಿ ನಂಬರ್‌ ವನ್‌" (ಇದು ತಮಿಳು ಚಿತ್ರದ ಡಾರ್ಲಿಂಗ್‌ ಡಾರ್ಲಿಂಗ್‌ ಚಿತ್ರದ ರಿಮೇಕ್‌) ಬರಲಿದೆ. ಮುಂದಿನ ವಾರಗಳಲ್ಲಿ 'ಅಮ್ಮಾ ನಿನ್ನ ತೋಳಿನಲ್ಲಿ ..." 'ಕುಶಲವೇ ಕ್ಷೇಮವೇ" ಚಿತ್ರಗಳು ಹೊರಬರಬಹುದು. ತಮಿಳಿನಲ್ಲೂ ಇತ್ತೀಚೆಗೆ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ರಮೇಶ್‌ ಮತ್ತೆ ತಮಿಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.

ಬೆಡ್‌ರೂಂ ದೃಶ್ಯಕ್ಕೆ ರಮೇಶ್‌ ಸ್ವಯಂ ಸೆನ್ಸಾರ್‌ !

ಚಿತ್ರ ಸ್ವಮೇಕಾಗಿರಲಿ, ರೀಮೇಕಾಗಿರಲಿ, ಕೆಟ್ಟ ಕೊಳಕು ಡೈಲಾಗ್‌ ಬಳಸುವುದಿಲ್ಲ, ಮತ್ತು ಬೆಡ್‌ರೂಂ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ರಮೇಶ್‌ ಪ್ರತಿಜ್ಞೆ ಮಾಡಿದ್ದಾರೆ. ಅದು ಅವರ ಪತ್ನಿಗೂ ಇಷ್ಟವಾಗುವುದಿಲ್ಲವಂತೆ. ಅದೇ ಕಾರಣಕ್ಕೆ ಅಂತರ್ಗಾಮಿ ಚಿತ್ರವನ್ನು ಶ್ರೀಮತಿ ರಮೇಶ್‌ ಇಷ್ಟಪಟ್ಟಿರಲಿಲ್ಲ. ಆದರೆ ಡ್ಯಾನ್ಸ್‌ ಮತ್ತು ಫೈಟಿಂಗ್‌ನಲ್ಲಿ ರಮೇಶ್‌ ಇತ್ತೀಚೆಗೆ ಪಳಗಿದ್ದಾರೆ. ಅಲ್ಲೂ ಕೂದಲು ಕೆದರಿಕೊಳ್ಳುವ ಕುಣಿತ ಮಾಡುವುದಿಲ್ಲ. 'ಕುಣಿಯೋದರಲ್ಲಿ ತಪ್ಪೇನಿಲ್ಲ. ಈ ಹಿಂದೆ ಶಮ್ಮಿ ಕಪೂರ್‌, ದೇವಾನಂದ್‌ ಅವರ ಡ್ಯಾನ್ಸ್‌ಗೆ ಅವರದೇ ಆದ ಶೈಲಿಯಿತ್ತು. ಆದರೆ ಆಗಿನ ಹೀರೋಗಳ ಡ್ಯಾನ್ಸ್‌ಗಳೆಲ್ಲಾ ಒಂದೇ ಥರ ಇರುತ್ತವೆ. ಅದಕ್ಕೆ ಕಾರಣ ಎಲ್ಲರೂ ನೃತ್ಯ ನಿರ್ದೇಶಕರ ಸ್ಟೆಪ್ಸ್‌ನ್ನೇ ಫಾಲೋ ಮಾಡುತ್ತಾರೆ."

ಸದ್ಯಕ್ಕೆ ಶಾಪ ಚಿತ್ರವನ್ನು ಪ್ರಮೋಟ್‌ ಮಾಡುವ ಸಲುವಾಗಿ ಬಿ.ಸಿ. ಪಾಟೀಲ್‌ ಜೊತೆಗೆ ರಮೇಶ್‌ ಮತ್ತು ಅನು ಪ್ರಭಾಕರ್‌ ಅವರು ಬೆಂಗಳೂರು, ಹಾಸನ, ಮಂಡ್ಯದಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.

English summary
Ramesh is happy with the role he played in Shaapa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada