ಅಶ್ಲೀಲ ಕಾಮೆಂಟ್ ಪ್ರಕರಣ; ವಿಚಾರಣೆಗೆ ಹಾಜರಾಗಿ ಬಂದ ನಟಿ ರಮ್ಯಾ ಪ್ರತಿಕ್ರಿಯೆ
ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ 7 ತಿಂಗಳ ಹಿಂದೆ ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ಸಂಬಂಧ ಇಂದು(ಮಾರ್ಚ್ 10) ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿಚಾರಣೆಯಲ್ಲಿ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್ ಕೂಡ ನಡೆದಿದೆ. ಜುಲೈ 28ರಂದು ಕೆಟ್ಟದಾಗಿ ಮೆಸೇಜ್ ಕಳಿಸಿದ್ದ 43 ಖಾತೆಗಳನ್ನು ಉಲ್ಲೇಖಿಸಿ 4 ಪುಟಗಳ ದೂರು ನೀಡಿದ್ದರು.
ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಯಿತು. ದರ್ಶನ್ ಅಭಿಮಾನಿಗಳು ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂದು ನಟಿ ರಮ್ಯಾ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 50 ಇನ್‌ಸ್ಟಾ ಅಕೌಂಟ್‌ಗಳನ್ನು ಬ್ಲಾಕ್ ಮಾಡಿಸಿದ್ದರು. ಕೆಲ ಆರೋಪಿಗಳು ಪರಾರಿ ಆಗಿದ್ದರು. ಬಂಧಿತ ಆರೋಪಿಗಳು ಜಾಮೀನು ಪಡೆದಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ರಮ್ಯಾ ಮಾತನಾಡಿದ್ದರು.

ನಟಿ ರಮ್ಯಾ ಮಾತನಾಡಿ "ಇವತ್ತು ಎವಿಡೆನ್ಸ್ ಕೊಡಬೇಕಿತ್ತು. ಅದಕ್ಕೆ ಬಂದಿದ್ದೆ. ಮುಂದೆ ಕ್ರಾಸ್ ಎಕ್ಸಾಮಿನೇಷನ್‌ಗೆ ಕರೆದಿದ್ದಾರೆ. ನನಗೂ ದೂರು ಕೊಡಬೇಕು, ಅವರಿಗೆ ಶಿಕ್ಷೆ ಕೊಡಿಸಬೇಕು ಎನ್ನುವ ಆಸೆ ಇಲ್ಲ, ಅವರನ್ನು ನೋಡಿದರೆ ಬೇಸರವಾಗುತ್ತೆ. ಇದು ನನಗೋಸ್ಕರ ಮಾಡುತ್ತಿರುವುದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ನಡೆದುಕೊಳ್ತಾರೆ, ಕಾಮೆಂಟ್ ಮಾಡ್ತಾರೆ. ಎಲ್ಲೋ ಕೂತು ಕಂಪ್ಯೂಟರ್, ಮೊಬೈಲ್‌ನಲ್ಲಿ ಕಾಮೆಂಟ್ ಹಾಕುತ್ತಾರೆ. ಅದು ನಿಲ್ಲಿಸಬೇಕು. ಹೆಣ್ಣುಮಕ್ಕಳಿಗೆ ಆನ್ಲೈನ್‌ನಲ್ಲಿ ಭದ್ರತೆ ಇರ್ಬೇಕು ಅಂತ ನಾನು ಹೋರಾಟ ಮಾಡ್ತಿದ್ದೀನಿ. ಅದು ಬಿಟ್ಟು ಅವರಿಗೆ ಶಿಕ್ಷೆ ಆಗ್ಬೇಕು ಎನ್ನುವ ಆಸೆ ನನಗಿಲ್ಲ" ಎಂದಿದ್ದಾರೆ.
ಸಮಾಜದಲ್ಲಿ ನಾಗರೀಕತೆ ಇರ್ಬೇಕು. ಎಲ್ಲರಿಗೂ ಗೌರವ ಕೊಡಬೇಕು ಎನ್ನುವುದು ಗೊತ್ತಾಗಬೇಕು. ಅದಕ್ಕೆ ನಾನು ದೂರು ಕೊಟ್ಟಿರುವುದು ಎಂದು ರಮ್ಯಾ ಹೇಳಿದ್ದಾರೆ. "ಎಲ್ಲಾ ಹೆಣ್ಣುಮಕ್ಕಳಿಗಾಗಿ ಫೈಟ್ ಮಾಡ್ತಿದ್ದೀನಿ. ನನಗಾಗಿ ಅಲ್ಲ. ನನಗೋಸ್ಕರ ಆಗಿದ್ರೆ ಈಗಾಗಲೇ ಕೇಸ್ ವಾಪಸ್ ತಗೋತ್ತಿದ್ದೆ. ಯಾರಿಗೂ ಶಿಕ್ಷೆ ಆಗುವುದು ನನಗೆ ಇಷ್ಟವಿಲ್ಲ. ನಾನು ಸುಮ್ನೆ ಕೂತ್ರೆ ಹೀಗೆ ಹೆಣ್ಣುಮಕ್ಕಳಿಗೆ ಟ್ರೋಲ್ ಮಾಡ್ತಾರೆ. ರೇ*ಪ್ ಮಾಡ್ತೀನಿ, ಕೊ*ಲೆ ಮಾಡ್ತೀನಿ ಅಂತಾರೆ. ಅದಕ್ಕಾಗಿ ನಾನು ಗಟ್ಟಿ ನಿರ್ಧಾರ ತೆಗೆದುಕೊಂಡು ಫೈಟ್ ಮಾಡ್ತಿದ್ದೀನಿ" ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಾಧೀಶರು ಏನು ತೀರ್ಪು ಕೊಡ್ತಾರೆ, ಅದು ಮುಂದೆ ಇಂತಹ ಪ್ರಕರಣಗಳಿಗೆ ಮುಖ್ಯ ಆಗುತ್ತದೆ. ಕೆಟ್ಟದಾಗಿ ಮೆಸೇಜ್ ಮಾಡಲು ಕಿಡಿಗೇಡಿಗಳು ಯೋಚಿಸುವಂತಾಗುತ್ತೆ. ಈ ರೀತಿ ಕಾಮೆಂಟ್ ಮಾಡುವುದನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವಿಲ್ಲ. ನನಗೆ ಹೀಗೆ ಕಾಮೆಂಟ್ ಮಾಡ್ತಾರೆ ಅಂದ್ರೆ, ಬೇರೆಯವರಿಗೆ ಹೇಗೆ ಅಂತ. ಕೋರ್ಟ್, ಕೇಸ್ ಬೇಡ ಅಂತ ಬೇರೆ ಹೆಣ್ಣುಮಕ್ಕಳು ದೂರು ನೀಡಲು ಹಿಂದೇಟು ಹಾಕ್ತಾರೆ. ಇದು ಸುಲಭ ಅಲ್ಲ, ಆದರೂ ನಾನು ಎಲ್ಲಾ ಹೆಣ್ಣುಮಕ್ಕಳಿಗಾಗಿ ನಾನು ಫೈಟ್ ಮಾಡ್ತಿದ್ದೀನಿ" ಎಂದು ರಮ್ಯಾ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಮ್ಯಾ ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮಾಡಿದ್ದು ತಪ್ಪು ಎಂದು ಬರೆದುಕೊಂಡಿದ್ದರು. ಅದೇ ಸಮಯದಲ್ಲಿ ಕೆಲವರು ಆಕೆಯನ್ನು ಟಾರ್ಗೆಟ್ ಮಾಡಲು ಆರಂಭಿಸಿದ್ದರು. ನೇರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ ಅಶ್ಲೀಲ ಮೆಸೇಜ್ ಮಾಡಿ ಬೆದರಿಸಿದ್ದರು. ಸ್ಕ್ರೀನ್ ಶಾಟ್ ಸಮೇತ ರಮ್ಯಾ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ವಿಕೃತ ಮನಸ್ಸಿನ ಕಿಡಿಗೇಡಿಗಳ ಅಟ್ಟಹಾಸ ತೆರೆದಿಟ್ಟಿದ್ದರು.


Click it and Unblock the Notifications











