ರಕ್ತ ಕುದಿಯುತ್ತಿದೆ ; ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ಕಣ್ಣೀರಾದ ರಮ್ಯಾ- ಪ್ರತಿಭಟನೆಯಲ್ಲಿ ಭಾಗಿ
ಸಾಕಷ್ಟು ಜನ ಮುದ್ದುಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಕನ್ನಡದಲ್ಲಿ ಕೂಡ ರಮ್ಯಾ.. ಐಂದ್ರಿತಾ ರೇ.. ನಿಶ್ವಿಕಾ ನಾಯ್ಡು.. ಸೇರಿ ಹಲವಾರು ತಾರೆಯರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಕೊರೊನಾದ ದಿನಗಳಲ್ಲಿ ಸಂಯುಕ್ತಾ ಹೊರನಾಡು 60 ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ ತಂಡ ರಚಿಸಿಕೊಂಡು 1800 ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಕಾರ್ಯವನ್ನು ಕೂಡ ಮಾಡಿದ್ದರು. ಅಷ್ಟರ ಮಟ್ಟಿಗೆ ಈ ಶ್ವಾನಗಳ ಮೇಲೆ ಅಕ್ಕರೆ ತಾರೆಯರಿಗೆ ಇದೆ.

ಅದರಲ್ಲಿಯೂ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರಿಗೆ ನಾಯಿ ಅಂದರೆ ಮನೆಮಕ್ಕಳಿದ್ದಂತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಉದಾಹರಣೆಗಳಿವೆ. ನಾಯಿಗಳ ಮೇಲೆ ನಮ್ಮ ವ್ಯವಸ್ಥೆ ದೌರ್ಜನ್ಯ ಮಾಡಲು ಮುಂದಾದಾಗೆಲ್ಲಾ ರಮ್ಯಾ ಧ್ವನಿ ಎತ್ತಿದ್ದಾರೆ. ಹೋರಾಟ ಮಾಡಿದ್ದಾರೆ. ಆ ಪೈಕಿ ಇಂದು ( ಏಪ್ರಿಲ್ 11) ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆ ಕೂಡ ಒಂದು.
ಹೌದು, ಅಸಲಿಗೆ ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಡಿಆರ್‌ಡಿಒ ಸಂಕೀರ್ಣದಿಂದ ಟ್ರಕ್ ಒಂದನ್ನು ತಡೆದ ನಿವಾಸಿಗಳು, ಅದರೊಳಗೆ ಮೂರು ನಾಯಿಗಳನ್ನು ಕಾಲು ಮತ್ತು ಬಾಯಿ ಕಟ್ಟಿ ಪ್ಲಾಸ್ಟಿಕ್ ಚೀಲಗಳಲ್ಲಿ ತುರುಕಿರುವುದನ್ನು ಕಂಡು ಕೆಲ ದಿನಗಳ ಹಿಂದೆ ಬೆಚ್ಚಿಬಿದ್ದಿದ್ದರು.
ಕೂಡಲೇ ಆ ನಾಯಿಗಳನ್ನು ರಕ್ಷಿಸಲಾಯಿತಾದರೂ, ಅದೇ ಆವರಣದಲ್ಲಿ ಶಾಂತಿಯುತವಾಗಿ ಬದುಕುತ್ತಿದ್ದ ಸುಮಾರು 20ಕ್ಕೂ ಹೆಚ್ಚು ನಾಯಿಗಳು ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಹೀಗಾಗಿ ನಾಯಿಗಳನ್ನು ಕಾನೂನುಬಾಹಿರವಾಗಿ ಮತ್ತು ಅಮಾನವೀಯವಾಗಿ ಸೆರೆಹಿಡಿದಿರುವುದನ್ನು ವಿರೋಧಿಸಿ, ನೂರಾರು ನಾಗರಿಕರು ಇಂದು (ಏಪ್ರಿಲ್ 11) ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ವಿಶೇಷ ಅಂದರೆ ಈ ಈ ಕನ್ನಡ ಚಿತ್ರರಂಗದ ಗೋಲ್ಡನ್ ಗರ್ಲ್ ರಮ್ಯಾ ಕೂಡ ಭಾಗವಹಿಸಿದ್ದರು.

ಸಿ.ವಿ.ರಾಮನ್ ನಗರ ಅನಿಮಲ್ ಸ್ಕ್ವಾಡ್ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ರಮ್ಯಾ ಮಾತ್ರವಲ್ಲದೇ ಪ್ರಾಣಿ ಕಲ್ಯಾಣ ಸಂಸ್ಥೆಗಳು, ಕಾನೂನು ತಜ್ಞರು ಮತ್ತು ಸ್ವಯಂಸೇವಕರು ಕೂಡ ಭಾಗವಹಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯ ಮಾಡಿದರು.
ಇದೇ ಸಮಯದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಮ್ಯಾ ಶ್ವಾನಗಳ ಮೇಲಿನ ಕ್ರೌರ್ಯವನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು. ಆ ನಾಯಿಗಳನ್ನು ಹಿಂಸಿಸುತ್ತಿರುವ ವಿಡಿಯೋಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ, ಅದನ್ನು ನೋಡಿದರೆ ರಕ್ತ ಕುದಿಯುತ್ತೆ ಎಂದು ಹೇಳಿದ ರಮ್ಯಾ, ನಾವು ನಂಬುವ ಸಂಸ್ಥೆಗಳು ಇಷ್ಟು ಜವಾಬ್ದಾರಿಯಿಲ್ಲದೆ ವರ್ತಿಸಬಾರದು ಎಂದು ಕಿಡಿ ಕಾರಿದರು. ಒಂದು ವೇಳೆ ಆ ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ಪುರಾವೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಕ್ರೋಶವನ್ನೂ ಕೂಡ ವ್ಯಕ್ತಪಡಿಸಿದರು.
ಕೇವಲ ರಮ್ಯಾ ಮಾತ್ರವಲ್ಲದೇ ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಕೂಡ ಈ ಹೋರಾಟದಲ್ಲಿ ಭಾಗವಹಿಸಿದ್ದರು. ನಾಪತ್ತೆಯಾದ ನಾಯಿಗಳ ಪತ್ತೆ, ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಮಾನವ-ಪ್ರಾಣಿ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಂತೆ ರಮ್ಯಾ ಅವರನ್ನು ಒಳಗೊಂಡಂತೆ ಉಳಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸದ್ಯ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಏಪ್ರಿಲ್ 16ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ನಡೆಯಲಿದೆ.


Click it and Unblock the Notifications











