ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ದೂರು; ವಿನಯ್ ರಾಜ್‌ಕುಮಾರ್ ಏನಂದ್ರು?
ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ತಿರುಗಿಬಿದ್ದಿದ್ದಾರೆ. ತಮಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ರಮ್ಯಾ ದೂರು ನೀಡಿದ್ದಾರೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನು ಚಿತ್ರರಂಗದ ಕೆಲವರು ರಮ್ಯಾ ಪರ ಬೆಂಬಲಕ್ಕೆ ನಿಂತಿದ್ದಾರೆ.
ಈಗಾಗಲೇ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಫೈರ್ ಸಂಸ್ಥೆ ಗೃಹ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟಿ ರಮ್ಯಾ ಆಗ್ರಹಿಸಿದ್ದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆಕೆಯನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದ್ದರು. ಅಷ್ಟೇ ಅಲ್ಲ, ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಇದರಿಂದ ಕೆರಳಿ ಕೆಂಡವಾದ ರಮ್ಯಾ ಆಕ್ರೋಶ ಹೊರಹಾಕಿದ್ದರು.

"ರೇಣುಕಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ" ಎಂದು ರಮ್ಯಾ ಮೊದಲು ಪೋಸ್ಟ್ ಮಾಡಿದ್ದರು. ಬಳಿಕ ತಮಗೆ ಬಂದಿದ್ದ ಅವಹೇಳನಕಾರಿ ಮೆಸೇಜ್‌ಗಳನ್ನು ಸ್ಕ್ರೀನ್‌ಶಾಟ್ ಸಮೇತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದರು. ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದರು. ನನಗೆ ಈ ರೀತಿ ಮೆಸೇಜ್ ಕಳುಹಿಸುವ ದರ್ಶನ್ ಅಭಿಮಾನಿಗಳಿಗೂ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ ರೇಣುಕಾಸ್ವಾಮಿಗೂ ಏನು ವ್ಯತ್ಯಾಸ ಇಲ್ಲ ಎಂದು ರಮ್ಯಾ ಹೇಳಿದ್ದರು.
ಇದೀಗ ನಟಿ ರಮ್ಯಾ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡುವ ಕಿಡಿಗೇಡಿಗಳಿಗೆ ಕಾನೂನಿನ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರರಂಗದ ಕೆಲವರು ರಮ್ಯಾ ಪರ ನಿಂತು ಮಹಿಳೆಯರಿಗೆ ಕಿರುಕುಳ ನೀಡುವ ಇಂತಹ ಕಿಡಿಗೇಡಿಗಳಿಗೆ ತಕ್ಕಶಾಸ್ತಿ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ನಟ ವಿನಯ್ ರಾಜ್‌ಕುಮಾರ್ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
"ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು" ಎಂದು ವಿನಯ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಾಗಲೇ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕೂಡ ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ. ಇದೀಗ ರಮ್ಯಾ ಬೆಂಬಲಿಸಿ ಪ್ರಥಮ್ ಪೋಸ್ಟ್ ಮಾಡಿದ್ದಾರೆ. "ನಾನು ಕೂಡ ರಮ್ಯಾ ಮೇಡಂ ಪರ ನಿಲ್ಲುತ್ತೇನೆ. ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ. ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ" ರಂದು ಬರೆದುಕೊಂಡಿದ್ದರು.
ಕೆಲವರು ತಮಗೆ ವೈಯಕ್ತಿಯವಾಗಿ ಕರೆ ಮಾಡಿ ಬೆಂಬಲ ಸೂಚಿಸಿರುವುದಾಗಿ ರಮ್ಯಾ ಹೇಳಿದ್ದಾರೆ. ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸೆಲೆಬ್ರೆಟಿಗಳು ಎಂದ ಬಳಿಕ ಟ್ರೋಲ್ ಸಾಮಾನ್ಯ. ಆದರೆ ಈ ಮಟ್ಟಕ್ಕೆ ಎಂದೂ ಅನುಭವ ಆಗಿರಲಿಲ್ಲ. ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್‌ಗೂ ದರ್ಶನ್ ಫ್ಯಾನ್ಸ್ ಕಳುಹಿಸಿದ ಮೆಸೇಜ್‌ಗೂ ಯಾವುದೇ ವ್ಯತ್ಯಾಸ ಇಲ್ಲ ಎನಿಸಿತು. ನನಗೆ ಹೀಗೆ ಮೆಸೇಜ್ ಕಳುಹಿಸಿದ್ದಾರೆ ಅಂದ್ರೆ ಸಾಮಾನ್ಯ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಮೆಸೇಜ್ ಕಳುಹಿಸರಬಹುದು. ಇದನ್ನು ನೋಡಿ ಬೇಸರವಾಯಿತು. ಸುಮ್ಮನೆ ಬಿಡಬಾರದು ಎಂದು ಆಯುಕ್ತರಿಗೆ ದೂರು ಕೊಟ್ಟಿದ್ದೇನೆ" ಎಂದು ರಮ್ಯಾ ಹೇಳಿದ್ದಾರೆ.


Click it and Unblock the Notifications











