ಸದ್ದಿಲ್ಲದೇ ನಡೆದೇ ಹೋಯ್ತಾ ರಮ್ಯಾ ನಿಶ್ಚಿತಾರ್ಥ ಸಮಾರಂಭ ? ಕೈಯಲ್ಲಿರುವ ಉಂಗುರ ಮತ್ತು ಮದುವೆ ಬಗ್ಗೆ ಹೇಳಿದ್ದೇನು ಮೋಹಕತಾರೆ..?
ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನು ಹಾಗೂ ಭಗ್ನ ಪ್ರೇಮಿಗಳನ್ನು ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ಕೂಡ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.
ಇಂಥಾ ರಮ್ಯಾ ಮೊನ್ನೆ ರಕ್ಷಿತಾ ಅವರ ಸಹೋದರ ರಾಣಾ ಮದುವೆ ಸಮಾರಂಭಕ್ಕೆ ತೆರಳಿದ್ದರು. ನವ ಜೋಡಿಗೆ ಶುಭ ಹಾರೈಸಿದರು. ಆದರೆ ಈ ಸಮಯದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ರಮ್ಯಾ ಅವರ ಕೈಯಲ್ಲಿದ್ದ ಉಂಗುರ. ರಮ್ಯಾ ಧರಿಸಿದ್ದ ಉಂಗುರವನ್ನು ನೋಡಿದ ಅನೇಕರು ರಮ್ಯಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮಾತನಾಡಲು ಶುರುಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಮದುವೆಯಾಗಲಿರುವ ಹುಡುಗ ಯಾರು ಎನ್ನುವ ಚರ್ಚೆ ಮಾಡಿದರು. ಇನ್ನು ಕೆಲವರು ಕದ್ದು-ಮುಚ್ಚಿ ನಿಶ್ಚಿತಾರ್ಥ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆಯನ್ನು ಕೂಡ ಕೇಳಿದರು.

ಹೀಗಿರುವಾಗ ರಮ್ಯಾ ಅಡ್ಡ ಗೋಡೆಯ ಮೇಲೆ ದೀಪ ಇಡುವ ಮೂಲಕ ನಡೆಯುತ್ತಿರುವ ಚರ್ಚೆಗಳಿಗೆ ಇನ್ನು ತುಪ್ಪ ಸುರಿದಿದ್ದಾರೆ. ಹೌದು, ಅಸಲಿಗೆ ರಮ್ಯಾ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರು. ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡ ನೀಡಿದ ಉಡುಗೊರೆಗಳನ್ನು ಕಂಡು ಸಂಭ್ರಮಿಸಿದರು.
ಇದೇ ಸಮಯದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ರಮ್ಯಾ ರಿಂಗ್ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಎಂಗೇಜ್ಮೆಂಟ್ ಮಾಡಿಕೊಂಡಿದ್ದೀರಾ ಎನ್ನುವ ನೇರ ಪ್ರಶ್ನೆಗೆ ಕೂಡ ಉತ್ತರ ನೀಡಿಲ್ಲ. ಇನ್ನು, ಮದುವೆಯ ಕುರಿತು ಕೇಳಲಾದ ಪ್ರಶ್ನೆಗೆ ನಾಚಿ ನೀರಾದ ರಮ್ಯಾ ನಾನು ಅದರ ಬಗ್ಗೆ ಇನ್ನು ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಮದುವೆ ಆದರೆ ಮಾತ್ರ ಸಿಹಿಯೂಟ ಹಾಕಿಸಬೇಕಾ ? ಯಾವಾಗ ಬೇಕಾದರೂ ಸಿಹಿಯೂಟ ಹಾಕಿಸಬಹುದು ಅದಕ್ಕೆ ಮದುವೆಯಾಗಲೇಬೇಕು ಅಂತೇನು ಇಲ್ಲ ಎಂದು ಹೇಳಿದ್ದಾರೆ. ಆ ನಂತರ ಸಡನ್ ಜ್ಞಾನೋದಯವಾದಂತೆ ಆಗಿ ವ್ಯೆಯಕ್ತಿಕ ಪ್ರಶ್ನೆಗಳನ್ನು ನನಗೆ ಕೇಳಬೇಡಿ ಎಂದು ಹೇಳಿ ಅಲ್ಲಿಂದ ಜಾರಿಕೊಂಡಿದ್ದಾರೆ. ಕೇವಲ ಪಬ್ಲಿಕ್ ಟಿವಿ ಮಾತ್ರವಲ್ಲ ಟಿವಿ9 ಕನ್ನಡ ಜೊತೆ ಮಾತನಾಡುವ ಸಮಯದಲ್ಲಿ ಕೂಡ ರಮ್ಯಾ ರಿಂಗ್ ಸೀಕ್ರೆಟ್ ರಿವೀಲ್ ಮಾಡಿಲ್ಲ.
ರಮ್ಯಾ ಅವರ ಈ ನಡೆ ಮತ್ತು ನುಡಿಯನ್ನು ಗಮನಿಸಿರುವ ಅನೇಕರು ಸದ್ಯ ರಮ್ಯಾ ನಿಜಕ್ಕೂ ಕದ್ದು ಮುಚ್ಚಿ ಎಂಗೇಜ್ಮೆಂಟ್ ಮಾಡಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ರಮ್ಯಾ ಮೊದಲಿಂದ ನೇರವಂತಿಕೆಗೆ ಹೆಸರುವಾಸಿಯಾದವರು. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ ಇದ್ದಿದ್ದನ್ನೇ ಹೇಳುತ್ತೇನೆ ಎನ್ನುವ ಮನೋಭಾವದವರು. ಇನ್ನು ಇಲ್ಲಿಯವರೆಗೆ ರಮ್ಯಾ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಕೂಡ ಸ್ಪಷ್ಟವಾದ ಉತ್ತರ ನೀಡುತ್ತಲೇ ಬಂದಿದ್ದರು. ಆದರೆ ಈಗ ವ್ಯೆಯಕ್ತಿಕ ಪ್ರಶ್ನೆ ಎಂದು ಹೇಳಿ ರಮ್ಯಾ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಿಂಗ್ ವಿಚಾರ ಪ್ರಸ್ತಾಪಿಸಿದರೆ ನಸು ನಕ್ಕು ಸುಮ್ಮನಾಗುತ್ತಿದ್ದಾರೆ. ಹೀಗಾಗಿಯೇ ವಿಚಲಿತಗೊಂಡಿರುವ ಅನೇಕರು ಈಗ ರಮ್ಯಾ ಅವರ ಈ ರಿಂಗ್ ಸೀಕ್ರೆಟ್ ಪತ್ತೆ ಹಚ್ಚಲೇಬೇಕೆಂದು ಶಪಥ ಮಾಡಿದ್ದಾರೆ. ರಮ್ಯಾ ಅವರ ಕೈಯಲ್ಲಿರುವ ರಿಂಗ್ ಕುರಿತು ಸಂಶೋಧನೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಯಾವ ಕ್ಷಣದಲ್ಲಾದರೂ ರಮ್ಯಾ ಅವರ ಮದುವೆ ಅಥವಾ ಎಂಗೇಜ್ಮೆಂಟ್‌ನ ಬ್ರೇಕಿಂಗ್ ನ್ಯೂಸ್ ಬಂದರು ಬರಬಹುದು.


Click it and Unblock the Notifications










