ದರ್ಶನ್ ಬಿಡುಗಡೆ ಆಗದಿದ್ದರೆ ಚಿತ್ರರಂಗಕ್ಕೆ ನಷ್ಟ ; ಸು ಫ್ರಮ್ ಸೋ ಗೆಲ್ಲಲಿಲ್ವಾ ?- ರಮ್ಯಾ
ದರ್ಶನ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ವರ್ಷಕ್ಕೆ ಖಾಯಂ ಆಗಿ ಎರಡು ಚಿತ್ರಗಳನ್ನು ಮಾಡುವ ನಾಯಕ. ದರ್ಶನ್ ಅವರ ಈ ನಡೆ ಮತ್ತು ನಿರ್ಧಾರದಿಂದ ಚಿತ್ರರಂಗದಲ್ಲಿ ಹಲವರಿಗೆ ಕೆಲಸ ಸಿಗುತ್ತೆ. ಹಲವರ ಬದುಕು ಸಾಗುತ್ತೆ. ಕೇವಲ ಚಿತ್ರರಂಗದ ಕಾರ್ಮಿಕರಿಗೆ ಮಾತ್ರವಲ್ಲ ಚಿತ್ರಮಂದಿರದ ಆವರಣಕ್ಕೆ ಕೂಡ ಕಳೆ ಬರುತ್ತೆ. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬೀಳುತ್ತೆ.
ಇನ್ನೂ ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ದರ್ಶನ್ ಜೈಲು ಪಾಲಾದರೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ ಸರ್ಕಾರಕ್ಕೂ ಕೂಡ ನಷ್ಟ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಇರಬಹುದು, ಕೇಂದ್ರ ಸರ್ಕಾರ ಇರಬಹುದು..ದರ್ಶನ್ ಚಿತ್ರಗಳಿಂದ ಹೋಗುತ್ತಿದ್ದ ತೆರಿಗೆ ಹಣವನ್ನು ಕೂಡ ನೋಡಬೇಕು ಎಂದು ಹೇಳಿದ್ದಾರೆ.

ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳೆಲ್ಲಾ ಒಪ್ಪುವಂತಹದ್ದೇ. ಆದರೆ ದರ್ಶನ್ ಇರದೇ ಚಿತ್ರರಂಗ ಪತನವಾಗುತ್ತೆ, ಕನ್ನಡ ಚಿತ್ರರಂಗದ ಕಥೆ ಮುಕ್ತಾಯವಾಗುತ್ತೆ ಎನ್ನುವ ವಾದವನ್ನು ಒಪ್ಪಲು ಸಾಧ್ಯ ಇಲ್ಲ. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಇನ್ನು ಹಲವು ಸ್ಟಾರ್‌ಗಳು ಚಿತ್ರರಂಗಕ್ಕೆ ಅವರದ್ದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಹಳೆಯ ಬೇರು ಹೊಸ ಚಿಗುರು ಎಂಬಂತೆ ಹೊಸ ಹೊಸ ಆಲೋಚನೆಗಳೊಂದಿಗೆ ಚಿತ್ರರಂಗಕ್ಕೆ ಹೊಸಬರು ಬರುತ್ತಿದ್ದಾರೆ. ಆ ಪೈಕಿ ಕೆಲವರು ತಮ್ಮ ಚಿತ್ರಗಳಿಂದ ಮತ್ತು ಪ್ರಯತ್ನಗಳಿಂದ ಎಲ್ಲರನ್ನು ಬೆರಗಾಗಿಸುತ್ತಿದ್ದಾರೆ. ದರ್ಶನ್ ಇರದೇ ಚಿತ್ರರಂಗಕ್ಕೆ ನಷ್ಟ ಎಂಬ ನಡೆಯುತ್ತಿರುವ ವಾದದ ಕುರಿತು ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಹೇಳಿದ್ದು ಕೂಡ ಇದನ್ನೇ.

ಹೌದು, ರಮ್ಯಾ ಮತ್ತೊಮ್ಮೆ ದರ್ಶನ್ ವಿಚಾರದಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ ಎಂದು ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ಎದುರು ಉತ್ತರ ನೀಡಿರುವ ರಮ್ಯಾ ಯಾಕೆ ''ಸು ಫ್ರಮ್ ಸೋ'' ಈಗ ಗೆಲ್ಲಲಿಲ್ವಾ ? ಎಂದು ಪ್ರಶ್ನೆ ಕೇಳಿದ್ದಾರೆ. '' ಸು ಫ್ರಮ್ ಸೋ'' ಚಿತ್ರದಿಂದ ನಾವು ಕಲಿತಿದ್ದೇನು? ದೊಡ್ಡ ಹೀರೋ ದೊಡ್ಡ ಬಜೆಟ್ ಏನೂ ಬೇಕಿಲ್ಲ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಬಂದೇ ಬರುತ್ತಾರೆ, ಫ್ಯಾಮಿಲಿ ಆಡಿಯನ್ಸ್ ಬಂದು ಸಿನಿಮಾ ನೋಡಿದರೆ ಆ ಸಿನಿಮಾ ಹಿಟ್ ಆಗುತ್ತೆ ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ.
ಇನ್ನು ಸ್ಟಾರ್‌ಗಳು ಇದ್ದರೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರೆ ಎಂಬ ವಾದವನ್ನು ಕೂಡ ತಳ್ಳಿ ಹಾಕಿರುವ ರಮ್ಯಾ '' ಸು ಫ್ರಮ್ ಸೋ'' ದಲ್ಲಿ ಯಾವ ಸ್ಟಾರ್ ಇದ್ದಾರೆ, ಅಲ್ಲಿರುವುದು ಎಲ್ಲ ಹೊಸಬರು. ಜೆಪಿ ತುಮಿನಾಡು ಅವರು ನಮ್ಮ ಸಿನಿಮಾದಲ್ಲಿಯೂ ಮಾಡಿದ್ದರು. ಇಬ್ಬರ ಜೊತೆ ಸೇರಿ ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಸಿನಿಮಾ ಮಾಡಲು ಕೋಟ್ಯಂತರ ಹಣ ಮುಖ್ಯ ಅಲ್ಲ ಸ್ಟಾರ್ ಮುಖ್ಯ ಅಲ್ಲ ಕಥೆ ಮುಖ್ಯ ಕಥೆ ಚೆನ್ನಾಗಿದ್ದರೆ ಜನ ಬಂದೇ ಬರುತ್ತಾರೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಡೆವಿಲ್ ಚಿತ್ರಕ್ಕೆ ದರ್ಶನ್ ಪ್ರಕರಣದಿಂದ ನಷ್ಟವಾಗುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ರಮ್ಯಾ ಅದರ ಬಗ್ಗೆ ನಾನೇನೂ ಹೇಳೋಕಾಗುತ್ತೆ ಎಂದು ಹೇಳಿದ್ದಾರೆ. ಆಗಿರುವುದು ಆಗಿದೆ, ಸುಪ್ರೀಂಕೋರ್ಟ್ ತೀರ್ಪು ಕೊಡ್ಲೇಬೇಕು ಸಿನಿಮಾನೇ ಮುಖ್ಯ ಅಂತ ಅಲ್ಲ ಸಮಾಜದ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ನಿನ್ನೆ ಮೊನ್ನೆಯೆಲ್ಲಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ದರ್ಶನ್ ತಮ್ಮ ಜೀವನ ಹಾಳು ಮಾಡಿಕೊಂಡರು ಎಂದು ಎನಿಸುತ್ತೆ ಎಂದು ಹೇಳಿದ್ದ ಮಾತುಗಳನ್ನು ಕೂಡ ರಮ್ಯಾ ಕ್ಯಾಮರಾ ಎದುರು ಪುನರುಚ್ಚಿಸಿದ್ದಾರೆ.


Click it and Unblock the Notifications











