"ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ, ಜನರಿಗೆ ಹೊಡೆದು ಸಾಯಿಸುವುದಕ್ಕೆ ಆಗಲ್ಲ": ರಮ್ಯಾ
ರೇಣುಕಾಸ್ವಾಮಿ ಕೊಲೆ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದೆ. ಕನ್ನಡದ ಸೂಪರ್‌ಸ್ಟಾರ್ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣದ ವಿರುದ್ಧ ಹಲವರು ಧ್ವನಿ ಎತ್ತಿದ್ದಾರೆ. ದರ್ಶನ್ ಹಾಗೂ ಸಹಚರರು ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿರುದ್ಧ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ರಮ್ಯಾ ಶಿಕ್ಷೆಯ ಬಗ್ಗೆ ಪೇಜ್‌ವೊಂದು ಪೋಸ್ಟ್ ಮಾಡಿದ್ದನ್ನು ರೀ ಟ್ವೀಟ್ ಮಾಡಿದ್ದರು. ಈಗ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡಗೆ ಪರೋಕ್ಷವಾಗಿ ಸೋಶಿಯಲ್ ಮೀಡಿಯಾ ಪಾಠ ಮಾಡಿದಂತಿದೆ.

ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಟ್ರೋಲಿಗರ ಕಾಮೆಂಟ್‌ಗಳನ್ನು ತಿರಸ್ಕರಿಸಬೇಕು. ಕಂಪ್ಲೇಂಟ್ ಹೇಗೆ ಕೊಡಬೇಕು. ಕಾನೂನಿನ ಪ್ರಕಾರ ಹೇಗೆ ಹೋರಾಟ ಮಾಡಬೇಕು ಅಂತ ಹೇಳುತ್ತಲೇ ಪೊಲೀಸರ ಕೆಲಸಕ್ಕೆ ಸ್ಪಂದಿಸಿದ್ದಾರೆ.
"ಬ್ಲಾಕ್ ಎನ್ನುವ ಆಯ್ಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟಿರುತ್ತಾರೆ. ಟ್ರೋಲ್ ಮಾಡುವವರು ಹೆಚ್ಚಾದಲ್ಲಿ ನೀವು ಕಂಪ್ಲೇಟ್ ಮಾಡಬಹುದು. ಟ್ರೋಲಿಗರು ನಿರಂತರವಾಗಿ ಕೆಟ್ಟ ಭಾಷೆಯಲ್ಲಿ ನನ್ನನ್ನು ಟ್ರೋಲ್ ಮಾಡಿದ್ದರು. ಕೇವಲ ನನ್ನನ್ನಷ್ಟೇ ಅಲ್ಲ, ಬೇರೆ ಕಲಾವಿದರನ್ನು ಟ್ರೋಲ್ ಮಾಡಿದ್ದಾರೆ. ಅಷ್ಟೇ ಯಾಕೆ ಟ್ರೋಲಗರು ಹೆಂಡತಿ, ಮಕ್ಕಳನ್ನೂ ಸಹಾ ಬಿಟ್ಟಿಲ್ಲ. ಎಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಯಾವುದೇ ಒಬ್ಬ ಕಾನೂನು ಪಾಲಿಸುವ ನಾಗರೀಕ ಪ್ರಕರಣ ದಾಖಲಿಸುವಂತೆ ನಾನೂ ಮಾಡಿದ್ದೇನೆ. ಕೆಲವೊಮ್ಮೆ ಪೊಲೀಸರು ಟ್ರೋಲರ್‌ಗಳಿಗೆ ಎಚ್ಚರಿಕೆ ಕೊಟ್ಟಾಗಲೂ ನಾನು ದೂರನ್ನು ಹಿಂಪಡೆದಿದ್ದೇನೆ.

ಟ್ರೋಲ್ ಮಾಡುವವರು ಬಹುತೇಕ ಯುವಕರು. ಅವರಿಗೂ ಭವಿಷ್ಯವಿದೆ. ಆದರೆ ಅನಾಮಿಕನ ಹೆಸರಿನಲ್ಲಿ ಖಾತೆಯನ್ನು ಓಪನ್ ಮಾಡಿ ಟ್ರೋಲ್ ಮಾಡುತ್ತಾ ತನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನು ಅರಿತಿದ್ದೇನೆ.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಹೋಗಿ ಜನರಿಗೆ ಹೊಡೆದು ಅವನನ್ನು ಸಾಯಿಸುವುದಕ್ಕೆ ಆಗುವುದಿಲ್ಲ. ನ್ಯಾಯ ನಿಮಗೆ ಸಿಗುತ್ತೋ ಇಲ್ಲವೋ ಅನ್ನೋದು ನೀವು ಒಂದು ಚಿಕ್ಕ ದೂರನ್ನು ಕೊಟ್ಟರೂ ಸಾಕು ತಿಳಿಯುತ್ತೆ.
ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಗೌರವ ಸೂಚಿಸುತ್ತೇನೆ. ಅವರದ್ದು ನಿಸ್ವಾರ್ಥದ ಕೆಲಸ. ಅವರು ತಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಅವರು ಯಾವುದೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುತ್ತಾರೆ. ಹಾಗೇ ಜನರು ಕಾನೂನಿನ ಮೇಲೆ ಇಟ್ಟಿರುವ ನಂಬಿಕೆ ಉಳಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ರಮ್ಯಾ ಬರೆದಿದ್ದಾರೆ.


Click it and Unblock the Notifications











