ಅದೃಷ್ಟದ ನಾಯಕಿ ಎಂದು ರವಿಚಂದ್ರನ್‌ರಿಂದ ಹೊಗಳಿಸಿಕೊಂಡು , 15 ವರ್ಷಗಳ ಕಾಲ ಸಿನಿಮಾದಲ್ಲಿ ಏಗಿರುವ ರಮ್ಯ ಕೃಷ್ಣ ಇವತ್ತೂ ತನಗಿಂತ ಚಿಕ್ಕವರ ಜೊತೆ ಸುಸ್ತಾಗದೆ ಕುಣಿಯುತ್ತಾರೆ.

By Staff

* ಸೌಮಿತ್‌

ಕೃಷ್ಣ ರುಕ್ಮಿಣಿ ಚಿತ್ರದ ವಿಷ್ಣುವರ್ಧನ್‌ ಜೊತೆ ಸುಮಾರು ದಶಕದ ಹಿಂದೆ ಕುಣಿದ ತಾರೆ ರಮ್ಯ ಕೃಷ್ಣ ಇವತ್ತಿಗೂ ಮೂಗೂರು ಬಸವರಾಜು ಜೊತೆ ಅದೇ ಟೆಂಪೋದಲ್ಲೇ ಕುಣಿಯುತ್ತಾರೆ. 15 ವರ್ಷಗಳ ಈ ಕುಣಿದಾಟ ಇನ್ನೂ ಮುಗಿದಿಲ್ಲ , ದಣಿವೂ ಎಲ್ಲೂ ಇಣುಕುವುದಿಲ್ಲ !

ಈಚಿನ ದಿನಗಳಲ್ಲಿ ಸಿನಿ ಉದ್ದಿಮೆಯಲ್ಲಿ ಇಷ್ಟೊಂದು ಕಾಲ ಉಳಿದಿರುವ ಬೆರಳೆಣಿಕೆಯಷ್ಟು ನಟನಾ ಮಣಿಯರಲ್ಲಿ ರಮ್ಯಕೃಷ್ಣ ಕೂಡ ಒಬ್ಬರು. ರವಿಚಂದ್ರನ್‌ ಜೋಡಿ ‘ಗಡಿಬಿಡಿ ಗಂಡ’, ‘ಮಾಂಗಲ್ಯಂ ತಂತುನಾನೇನ’ದಂಥ ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿದ ರಮ್ಯ ಉತ್ತುಂಗಕ್ಕೇರಿದವರು. ಅದೃಷ್ಟದ ನಾಯಕಿ ಎಂದು ರವಿಯಿಂದ ಹೊಗಳಿಸಿಕೊಂಡವರು.

ಬಾಲಿವುಡ್‌ನಲ್ಲಿ ಅಮಿತಾಬ್‌ ಜೋಡಿಯಾದರೂ, ಬ್ರೇಕ್‌ ಸಿಗದೆ ದಕ್ಷಿಣ ಭಾರತಕ್ಕೆ ಮರಳಿದ ರಮ್ಯ- ನಾಗಾರ್ಜುನ, ವೆಂಕಟೇಶ್‌ ಮೊದಲಾದ ನಾಯಕರೊಂದಿಗೆ ಮಳೆಯಲ್ಲಿ ಹಲ್ಲಾಗುಲ್ಲಾ ಕುಣಿದವರು. ಇದೀಗ ಅವರಿಗೆ ಮುಪ್ಪು ಅಡರುತ್ತಿರುವ ಲಕ್ಷಣಗಳು ದಟ್ಟವಾಗುತ್ತಿವೆ. ಕನ್ನಡದ ಆರ್ಕೇಸ್ಟ್ರಾ ಸಿಂಗರ್‌ ಮಲ್ಲು ಜೊತೆ ‘ಆಂಧ್ರಹೆಂಡ್ತಿ’ಯಂಥಾ ತೋಪು ಚಿತ್ರ ಒಪ್ಪಿಕೊಂಡಿದ್ದೇ ಇದಕ್ಕೆ ಹಿಡಿದ ಕನ್ನಡಿ. ಈ ಕನ್ನಡಿಯಲ್ಲಿ ರಮ್ಯ ತಮ್ಮನ್ನು ತಾವು ಕಾಣುವುದು ಹೇಗೆ ಗೊತ್ತಾ? ಆಕೆಯ ಮಾತುಗಳಲ್ಲೇ ಕೇಳಿ....

ಸಿನಿಮಾ ಉದ್ದಿಮೆಯಲ್ಲಿ ಇಷ್ಟೊಂದು ವರ್ಷ ನೆಲೆನಿಂತಿದ್ದೀರಿ. ಇದರ ಗುಟ್ಟೇನು?
ನನ್ನ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತೇನೆ ಅಷ್ಟೆ. ಉಡಾಫೆ ಧೋರಣೆ ಇಟ್ಟುಕೊಳ್ಳದಿರುವುದೇ ಇಷ್ಟು ದೀರ್ಘ ಕಾಲ ನಾನು ಸಿನಿಮಾ ರಂಗದಲ್ಲಿರಲು ಕಾರಣವಾಗಿರಬಹುದು.

ನೀವು ಮಾಡಿರುವ, ಮಾಡುತ್ತಿರುವ ಪಾತ್ರಗಳು ನಿಮಗೆ ತೃಪ್ತಿ ಕೊಟ್ಟಿವೆಯಾ?
ಒಮ್ಮೆ ನಾನು ಮಾಡಿರುವ ಪಾತ್ರಗಳನ್ನ ಅವಲೋಕಿಸಿದಾಗ ಕೊಂಚ ಬೇಜಾರಾಗುತ್ತದೆ. ಇದಕ್ಕೂ ಮೀರಿದ ಯೋಗ್ಯತೆ ನನಗಿದೆ ಅನಿಸುವುದೇ ಆಗ. ಆದರೂ ಮಾಡಿರುವ ಪಾತ್ರಗಳಿಗೆ ನಾನು ಕೈಮೀರಿ ನ್ಯಾಯ ಒದಗಿಸಿಕೊಟ್ಟಿದ್ದೇನೆ.

ಸಿನಿಮಾ ಜಗತ್ತಿಗೆ ಕಾಲಿಟ್ಟ ಮೊದಲ ದಿನಗಳಲ್ಲಿ ನಿಮ್ಮನ್ನು ‘ಐರನ್‌ ಲೆಗ್‌’ ಅಂತ ಬ್ರಾಂಡ್‌ ಮಾಡಲಾಗಿತ್ತು. ಈ ಮಾತು ಕೇಳಿ ಸಿನಿಮಾ ಸಹವಾಸ ಬೇಡ ಅನಿಸಲಿಲ್ಲವೇ?
ಖಂಡಿತ ಇಲ್ಲ. ನಾನು ವೃತ್ತಿಯಾಗಿ ನಟನೆಯನ್ನ ಆರಿಸಿಕೊಂಡಿದ್ದೇನೆ. ಮಾಡು ಇಲ್ಲವೇ ಮಡಿ ಅಂತ ತೀರ್ಮಾನಿಸಿದೆ. ಕೆಲವರು ಬ್ರಾಂಡ್‌ ಮಾಡಿದ ರೀತಿಯಿಂದ ಬೇಸರ ಆಗಿದ್ದು ನಿಜ. ಈಸಬೇಕು, ಇದ್ದು ಜಯಿಸಬೇಕು ಅನ್ನುವ ನನ್ನ ಧೋರಣೆಯೇ ಯಶಸ್ಸು ತಂದು ಕೊಟ್ಟಿತು.

ನೀವು ಬೆಳೆಯಲು ನೆರವಾದವರು ಯಾರು?
ಸಿನಿಮಾದವರಂತೂ ಯಾರೂ ಅಲ್ಲ. ಕಷ್ಟಕಾಲದಲ್ಲಿ ನನಗೆ ಆದದ್ದು ಮನೆಮಂದಿಯಷ್ಟೆ.

ಗ್ಲ್ಯಾಮರ್‌ ಪ್ರಧಾನ ಪಾತ್ರಗಳಿಗೇ ನಿಮ್ಮ ಆದ್ಯತೆ. ಯಾಕೆ?
ಗ್ಲ್ಯಾಮರ್‌ ಹಾಗೂ ನಟನೆ ಎರಡಕ್ಕೂ ಸಮಾನ ಆದ್ಯತೆ ಕೊಟ್ಟಿದ್ದೇನೆ. ಗ್ಲ್ಯಾಮರ್‌ ಪಾತ್ರ ಮಾಡೋದರಲ್ಲಿ ತಪ್ಪೇನೂ ಇಲ್ಲವಲ್ಲ.

‘ಮೈದೋರಿಕೆ’ ಬಗ್ಗೆ ನಿಮ್ಮ ಅನಿಸಿಕೆ ಏನು?
ಅದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಮಾಡ್ರನ್‌ ಡ್ರಸ್‌ ತೊಟ್ಟರೆ, ಎಕ್ಸ್‌ಪೋಸ್‌ ಅಂತ ಅಲ್ಲ. ಪ್ರಾಯಶಃ ಅದು ನಿರ್ದೇಶಕರ ಧೋರಣೆಯ ಪ್ರತಿಬಿಂಬ. ಸಿನಿಮಾದಲ್ಲಿ ಬಟ್ಟೆ ತೊಡೋದು ನಾಯಕಿಯದಲ್ಲ ಮರ್ಜಿ. ಕೆಲವು ನಿರ್ದೇಶಕರಿಗೆ ಬಟ್ಟೆ ಅಲರ್ಜಿ. ಹೀಗಾಗಿ ನಾಯಕಿಯರು ಬಿಚ್ಚಮ್ಮರಾಗುತ್ತಾರೆ. ಅದೇ ಬಿಚ್ಚಮ್ಮ ಇನ್ಯಾವುದೋ ಚಿತ್ರದಲ್ಲಿ ಸೀರೆ ಉಟ್ಟು, ನಾಚು ಮೋರೆ ತೋರೋದಿಲ್ಲವೇ? ಸರ್ವಂ ನಿರ್ದೇಶಕ ನಿರ್ಧಾರಂ.

ನಿಮಗೆ ಸ್ಪರ್ಧಿಗಳಾರು. ಹೊಸಬರೋ, ತಳವೂರಿದವರೋ?
ಹೊಸಬರನ್ನು ಲಘುವಾಗಿ ತೆಗೆದುಕೊಳ್ಳಲಾಗದು. ಹಳಬರ ಛಾಪು ಮರೆಯಲಾಗದು. ಎಲ್ಲರೂ ಪ್ರತಿಸ್ಪರ್ಧಿಗಳೇ.

ವಿಜಯಶಾಂತಿ ಥರಾ ಆ್ಯಕ್ಷನ್‌ ಮಾಡಬೇಕು ಅಂತ ನಿಮಗೆ ಅನಿಸಲೇ ಇಲ್ಲವಾ?
ಅಯ್ಯಯ್ಯಪ್ಪಾ.... ಆ್ಯಕ್ಷನ್‌ಗೂ ನನಗೂ ಎಣ್ಣೆ ಸೀಗೇಕಾಯಿ. ಕೆಲವರು ಇಂಥಾ ಪಾತ್ರಗಳ ಆಫರ್‌ ತಂದಿದ್ದರು. ಬಾಗಿಲಲ್ಲೇ ನಿಂತು ಸಾಗಹಾಕಿಬಿಟ್ಟೆ.

ನಿಮ್ಮ ಮದುವೆ ಯಾವಾಗ?
ಇನ್ನೂ ಯೋಚಿಸಿಲ್ಲ. ಆಗುವುದಾದರೆ ನಿಮಗೆ ಹೇಳೇ ಆಗೋದು !!

Post your opinion

ಸರಳ ಸ್ನಿಗ್ಧ ಸುಂದರಿ ರಮ್ಯಕೃಷ್ಣ

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X