ಉತ್ತರಕಾಂಡ ಚಿತ್ರದಿಂದ ಹೊರ ಬಂದಿದ್ದೇಕೆ ರಮ್ಯಾ ? ಚಿತ್ರರಂಗದಿಂದ ದೂರ ಇರುವುದೇಕೆ ಮೋಹಕತಾರೆ ?
ಸಾಮಾನ್ಯವಾಗಿ ಮದುವೆಯಾದರೆ ಅಥವಾ ವಯಸ್ಸಾದರೆ ನಾಯಕಿಯರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಮಾತು ಬಣ್ಣದ ಪ್ರಪಂಚದಲ್ಲಿದೆ. ಆದರೆ ಈ ಮಾತನ್ನು ಸುಳ್ಳಾಗಿಸಿದವರು ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ. ಚಿತ್ರರಂಗದಿಂದ ದೂರವಾಗಿ ಅನೇಕ ವರ್ಷಗಳಾದರೂ ಕೂಡ ಚಿತ್ರರಂಗ ರಮ್ಯಾ ಅವರನ್ನು ಬಿಡುತ್ತಿಲ್ಲ. ಇವತ್ತು ಕೂಡ ರಮ್ಯಾ ಅವರನ್ನು ಅನೇಕ ಕಾರ್ಯಕ್ರಮಗಳಿಗೆ ಕರೆಯಲಾಗುತ್ತೆ. ಇದಕ್ಕೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸದ್ಯದ ಮತ್ತೊಂದು ಉದಾಹರಣೆ.
ಹೌದು, ಆರಂಭದಿಂದಲೂ ವಿವಾದಗಳಿಂದನೇ ಈ ಬಾರಿ ಸದ್ದು ಮಾಡುತ್ತಾ ಬಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂದು ರಮ್ಯಾ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮ್ಯಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ತಮ್ಮ ಆ ಕಾಲದ ದಿನಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ.

ಸಂವಾದದಲ್ಲಿ ಚಿತ್ರರಂಗದ ತಮ್ಮ ಆರಂಭಿಕ ದಿನಗಳ ಕುರಿತು ಮಾತನಾಡಿರುವ ರಮ್ಯಾ ತಮ್ಮ ಮೊದಲ ಚಿತ್ರ ಅಭಿಯ ಕಥೆಯೇ ನನಗೆ ಚಿತ್ರ ಮಾಡುವಾಗ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಚಿತ್ರೀಕರಣದ ಸ್ಥಳಕ್ಕೆ ಹೋದಾಗ ನಿರ್ದೇಶಕರು ನನಗೆ ಇಲ್ಲಿಂದ ಅಲ್ಲಿಗೆ ಓಡಿ ಎಂದು ಹೇಳುತ್ತಿದ್ದರು, ಆದರೆ ನಾನ್ಯಾಕೇ ಓಡುತ್ತಿದ್ದೇನೆ, ಯಾರಿಗಾಗಿ ಓಡುತ್ತಿದ್ದೇನೆ, ಎನ್ನುವುದೇ ನನಗೆ ತಿಳಿದಿರಲಿಲ್ಲ ಎಂದಿರುವ ರಮ್ಯಾ ನನ್ನ ಬಳಿ ಚಿತ್ರದ ಸ್ಕ್ರಿಪ್ಟ್ ಇರಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಹೀಗಾಗಿ ನನ್ನ ಮೊದಲ ಚಿತ್ರಕ್ಕೆ ಪ್ರಶಸ್ತಿಯನ್ನು ನೀಡಬೇಕು ಎಂದು ತಮಾಷೆಯನ್ನು ಮಾಡಿರುವ ರಮ್ಯಾ ಆ ಚಿತ್ರದಲ್ಲಿ ಭಾವುಕ ಸನ್ನಿವೇಶಗಳಲ್ಲಿ ನಾನು ಹೇಗೆ ಅಭಿನಯಿಸಿದೆ, ಆ ಪಾತ್ರವನ್ನು ಹೇಗೆ ನಿರ್ವಹಿಸಿದೆ, ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮೊದಲ ಚಿತ್ರದ ಈ ಅನುಭವದಿಂದ ಎರಡನೇ ಚಿತ್ರದಲ್ಲಿ ಸಮಯದಲ್ಲಿ ಕಥೆಯನ್ನು ಕೇಳಿಯೇ ಅಭಿನಯಿಸಬೇಕೆಂಬ ನಿರ್ಧಾರ ಮಾಡಿದೆ ಎಂದಿರುವ ರಮ್ಯಾ ನನ್ನ ಎರಡನೇ ಚಿತ್ರ ಎಕ್ಸ್‌ಕ್ಯೂಸ್ ಮೀ ಮಾಡುವಾಗ ಪ್ರೇಮ್ ಬಂದು ನನಗೆ ಕಥೆ ಹೇಳಿದರು ಆದರೆ ಅದು ಕೂಡ ಕೇವಲ ಇಂಟರ್‌ವಲ್ ವರೆಗೆ ಮಾತ್ರ ಎಂದು ಹೇಳಿದ್ದಾರೆ. ಮಧ್ಯಂತರದವರೆಗೆ ಚಿತ್ರದ ಕಥೆಯನ್ನು ಹೇಳಿದ ಪ್ರೇಮ್, ಚಿತ್ರದ ದ್ವೀತಿಯಾರ್ಧದ ಕಥೆಯನ್ನು ನಾನು ಬರೆದಿಲ್ಲ ಎಂದು ಹೇಳಿದರು ನಾನು ಪರವಾಗಿಲ್ಲ ಮೊದಲ ಚಿತ್ರದ ಕಥೆಯೇ ಗೊತ್ತಿರಲಿಲ್ಲ ಕೊನೆ ಪಕ್ಷ ಎರಡನೇ ಚಿತ್ರದ ಕಥೆ ಇಂಟರ್‌ವಲ್‌ವರೆಗೆಯಾದರೂ ಗೊತ್ತಿದೆಯಲ್ಲ ಎಂದುಕೊಂಡು ಆ ಚಿತ್ರವನ್ನು ಅಭಿನಯಿಸಲು ಒಪ್ಪಿಕೊಂಡೆ ಎಂದು ನಗೆಚಟಾಕಿ ಹಾರಿಸಿದ್ದಾರೆ. ಪ್ರೇಮ್ ಅವರಿಗೆ ಸೆಟ್‌ನಲ್ಲಿ ಕಥೆ ಬರೆದು ಅಭ್ಯಾಸವಂತೆ ಹೀಗಾಗಿ ಅವರು ಬರೆದಿರಲಿಲ್ಲ ಎಂದು ಹೇಳಿದ್ದಾರೆ.
ಹೀಗೆ ತಮ್ಮ ಆ ದಿನಗಳನ್ನು ಮೆಲುಕು ಹಾಕಿರುವ ರಮ್ಯಾ, ಆ ನಂತರ ದಿನಗಳು ಉರುಳಿದಂತೆ ಆ ನಂತರ ನಿರ್ದೇಶಕರು, ಬರಹಗಾರರು ನನ್ನನ್ನೂ ತಮ್ಮ ತಲೆಯಲ್ಲಿಟ್ಟುಕೊಂಡು ಕಥೆ ಬರೆಯಲು ಶುರು ಮಾಡಿದರು, ಈ ವಿಚಾರಕ್ಕೆ ನನಗೆ ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ. ಇಂಥಾ ರಮ್ಯಾ ಚಿತ್ರರಂಗಕ್ಕೆ ಮರಳಿ ಬರಬೇಕೆನ್ನುವುದು ಅನೇಕರ ಆಸೆ. ರಮ್ಯಾಗೆ ಕೂಡ ಮನಸು ಇದೆ. ಇದಕ್ಕೆ ಪೂರಕವಾಗಿ ರಮ್ಯಾ ಉತ್ತರಕಾಂಡ ಚಿತ್ರವನ್ನು ಒಪ್ಪಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆ ಚಿತ್ರದಿಂದ ಕೂಡ ಹೊರ ಬಂದರು.
ಇದರ ಕುರಿತು ಕೂಡ ಮಾತನಾಡಿರುವ ರಮ್ಯಾ ಅವರು ಸಿಕ್ವೆಲ್‌ಗಳನ್ನು ಪ್ಲ್ಯಾನ್ ಮಾಡುತ್ತಿದ್ದರು, ಮೊದಲನೇ ಭಾಗ ಮಾಡಿದರೆ ಮುಂದಿನ ಭಾಗವನ್ನು ಕೂಡ ನಾನು ಮಾಡಬೇಕಾಗುತ್ತೆ ಆಗ ಆ ಕ್ಷಣದಲ್ಲಿ ಆ ಪಾತ್ರ ಮಾಡಲು ನನ್ನಿಂದ ಸಾಧ್ಯವಾಗುತ್ತೋ ಇಲ್ವೋ ಎಂದುಕೊಂಡು ನಾನು ಹೊರ ಬಂದೆ ಎಂದು ಹೇಳಿದ್ದಾರೆ. ನನಗೆ ಮರ ಸುತ್ತುವ ಪಾತ್ರಗಳನ್ನು ಮಾಡಲು ಈಗ ಮನಸಿಲ್ಲ ಅವೆಲ್ಲವನ್ನೂ ನಾನು 20 ವರ್ಷಗಳ ಹಿಂದೆ ಮಾಡಿದ್ದೇನೆ, ಈಗೇನಿದ್ದರೂ ಸವಾಲಿನ ಪಾತ್ರಗಳನ್ನು ಮಾಡುವ ಆಸೆ ಇದೆ ಎಂದು ಕೂಡ ರಮ್ಯಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ ಎಂದು ಹೇಳಿದ್ದಾರೆ.


Click it and Unblock the Notifications











