'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ಬದಲು ನಾಯಕಿ ಆಗೋದ್ಯಾರು? ನಿರ್ದೇಶಕರು ಹೇಳಿದ್ದಿಷ್ಟು
ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್ ರೀಎಂಟ್ರಿ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲವಿತ್ತು. 'ಉತ್ತರಕಾಂಡ' ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆ ನಟಿಸೋಕೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕೂಡ ಭಾಗಿ ಆಗಿದ್ದರು. ಆದರೆ ಎರಡು ದಿನಗಳ ಎಲ್ಲರಿಗೂ ಶಾಕ್ ಕೊಟ್ಟು ಚಿತ್ರದಿಂದ ಹೊರ ನಡೆದಿದ್ದರು.
'ಉತ್ತರಕಾಂಡ' ಚಿತ್ರದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಯಲ್ಲಿ ಆಡಿಷನ್ ಮಾಡಿ ಸಹಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಕ್ಕಾಗಿ ಸೆಟ್‌ಗಳ ನಿರ್ಮಾಣವಾಗಿದೆ. ಇನ್ನು 10 ದಿನಗಳಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲು ಮುಂದಾಗಿದೆ. ಇಂತಹ ಹೊತ್ತಲ್ಲೇ ರಮ್ಯಾ ಚಿತ್ರದಿಂದ ಹೊರಬಂದಿರುವುದು ಚಿತ್ರತಂಡಕ್ಕೂ ಬೇಸರ ತಂದಿದೆ.

ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ 'ಉತ್ತರಕಾಂಡ' ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಲಿದೆ. ಕಾರ್ತಿಕ್ ಗೌಡ ಹಾಗೂ ಯೋಗಿರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಸಣ್ಣ ಟೀಸರ್ ಬಿಟ್ಟು ಚಿತ್ರತಂಡ ನಿರೀಕ್ಷೆ ಹುಟ್ಟಾಕ್ಕಿದೆ. ಗಬ್ರು ಸತ್ಯ ಆಗಿ ಡಾಲಿ ಧನಂಜಯ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಇದೆಲ್ಲದರ ನಡುವೆ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ? ಎನ್ನುವ ಚರ್ಚೆ ಶುರುವಾಗಿದೆ.
ಧನು- ರಮ್ಯಾ ಕಾಂಬಿನೇಷನ್ ನಿರೀಕ್ಷೆ ಮೂಡಿಸಿತ್ತು. ಇನ್ನು ಸ್ಯಾಂಡಲ್‌ವುಡ್ ಕ್ವೀನ್ ಕ್ರೇಜ್ ಎಂಥದ್ದು ಹಾಗೂ ಆಕೆ ಉತ್ತಮ ನಟಿ ಎನ್ನುವುದು ಗೊತ್ತೇಯಿದೆ. ಇದೀಗ ಆಕೆಗೆ ಸರಿ ಸಮನಾದ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಕನ್ನಡ ಹಾಗೂ ಪರಭಾಷಾ ನಟಿಯರ ಜೊತೆಗೂ ಚರ್ಚೆ ನಡೆಸುತ್ತಿದೆ. ಮಾತುಕತೆ ಯಶಸ್ವಿ ಆಗುತ್ತಿದ್ದಂತೆ ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಿದೆ ಚಿತ್ರತಂಡ.
ನಿರ್ದೇಶಕ ರೋಹಿತ್ ಪದಕಿ ಈ ಬಗ್ಗೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ನಟಿ ರಮ್ಯಾ ಯಾಕೆ ಚಿತ್ರದಿಂದ ಹೊರ ಬಂದರು ಎನ್ನುವುದಕ್ಕೆ ಕಾರಣ ಅವ್ರೇ ಹೇಳಿದ್ದಾರೆ. ಇದೀಗ ಆಕೆಗೆ ಸರಿ ಸಮನಾದ ನಟಿಯ ಹುಡಕಾಟ ನಡೆಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ನಾಯಕಿಯ ಆಯ್ಕೆ ಅಂತಿಮವಾಗಲಿದೆ. ಶೀಘ್ರದಲ್ಲೇ ಘೋಷಣೆ ಮಾಡುತ್ತೇವೆ. ಏಪ್ರಿಲ್ 10ರಿಂದ 'ಉತ್ತರಕಾಂಡ' ಚಿತ್ರೀಕರಣ ಶುರುವಾಗುತ್ತದೆ" ಎಂದಿದ್ದಾರೆ.

ಬಿಜಾಪುರ, ಬಾಗಲಕೋಟೆಯಲ್ಲಿ ಚಿತ್ರೀಕರಣಕ್ಕಾಗಿ ಸೆಟ್‌ಗಳ ನಿರ್ಮಾಣ ಕೆಲಸ ನಡೀತಿದೆ. ಬೆಂಗಳೂರಿನಲ್ಲಿ ಕೂಡ ಸೆಟ್ ಹಾಕುತ್ತಿದ್ದೇವೆ ಎಂದು ರೋಹಿತ್ ಪದಕಿ ಮಾಹಿತಿ ನೀಡಿದ್ದಾರೆ. ಇನ್ನು ಧನಂಜಯ್ ಹಾಗೂ ರೋಹಿತ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ರತ್ನನ್ ಪ್ರಪಂಚ' ಸಿನಿಮಾ ಹಿಟ್ ಆಗಿತ್ತು. ಓಟಿಟಿಯಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರ ನೋಡಿ ನಟಿ ರಮ್ಯಾ ಕೂಡ ಮೆಚ್ಚುಗೆ ಸೂಚಿಸಿದ್ದರು. ಅದೇ ಕಾರಣಕ್ಕೆ 'ಉತ್ತರಕಾಂಡ' ಚಿತ್ರದಲ್ಲಿ ನಟಿಸಲು ಒಪ್ಪಿದ್ದರು.
"ಡೇಟ್ಸ್ ಇಲ್ಲದ ಕಾರಣ ನಾನು 'ಉತ್ತರಕಾಂಡ' ಚಿತ್ರದಲ್ಲಿ ಕೆಲಸ ಮಾಡುತ್ತಿಲ್ಲ. (ಸಿನಿಮಾ ಹಾಗೂ ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ನಿಲ್ಲಿಸಿದ್ದೇನೆ) ಚಿತ್ರತಂಡಕ್ಕೆ ಶುಭವಾಗಲಿ" ಎಂದು ಇತ್ತೀಚೆಗೆ ನಟಿ ರಮ್ಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದು ಸುಳ್ಳಲ್ಲ. ಕಳೆದ ವರ್ಷ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೊನೆಗೆ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದ್ದರು.
'ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ' ಎನ್ನುವ ಟ್ಯಾಗ್‌ಲೈನ್ 'ಉತ್ತರಕಾಂಡ' ಚಿತ್ರಕ್ಕಿದೆ. 'ರತ್ನನ್ ಪ್ರಪಂಚ' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಇನ್ನು 'ಉತ್ತರಕಾಂಡ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಈಗಾಗಲೇ ನಿರ್ದೇಶಕರು ಹೇಳಿದ್ದಾರೆ.
ವರ್ಷಂತ್ಯಕ್ಕೆ 'ಉತ್ತರಕಾಂಡ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಗಬ್ರು ಸತ್ಯನ ಅವತಾರದಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲು ಡಾಲಿ ಧನಂಜಯ್ ಸಿದ್ಧರಾಗಿದ್ದಾರೆ.


Click it and Unblock the Notifications











