"ನಿಮ್ಮ ಯೋಗ್ಯತೆ ಇದರಲ್ಲೇ ಗೊತ್ತಾಗುತ್ತೆ"; ದರ್ಶನ್ ಅಭಿಮಾನಿಗಳಿಗೆ ರಮ್ಯಾ ಟಾಂಗ್
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ರೇಣುಕಾಸ್ವಾಮಿ ಪ್ರಕರಣ ಸದ್ದು ಮಾಡ್ತಿದೆ. ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆದೇಶ ಕಾಯ್ದಿರಿಸಿದೆ. ಈ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದರು.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ ವಿಚಾರವಾಗಿ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿತ್ತು. ಈ ಬಗ್ಗೆ ಪ್ರಕಟವಾಗಿರುವ ವರದಿಯೊಂದನ್ನ ಪೋಸ್ಟ್ ಮಾಡಿ ರಮ್ಯಾ "ಭಾರತದಲ್ಲಿ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಭರವಸೆಯ ಬೆಳಕು ಮೂಡಿಸಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ" ಬರೆದುಕೊಂಡಿದ್ದರು.

ಪೋಸ್ಟ್ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ರಮ್ಯಾ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಾಮೆಂಟ್ ಮಾಡಿದ್ದರು. ಇದೀಗ ಈ ಬಗ್ಗೆ ನಟಿ ರಮ್ಯಾ ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ. "ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ-ನನ್ನ ಇನ್‌ಸ್ಟಾಗ್ರಾಮ್‌ಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಪುರಾವೆ" ಎಂದು ಅಸಮಾಧಾನ ಹೊರ ಹಾಕಿದ್ದಾರೆ. "ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ" ಎಂದು ತಿವಿದಿದ್ದಾರೆ.
ಸದ್ಯ ನಟಿ ರಮ್ಯಾ ಇನ್‌ಸ್ಟಾಗ್ರಾಮ್ ಸ್ಟೋರಿ ಕೂಡ ವೈರಲ್ ಆಗುತ್ತಿದೆ. ಅದನ್ನು ಕೂಡ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಮೊದಲಿನಿಂದಲೂ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ವಿರುದ್ಧವೇ ನಟಿ ರಮ್ಯಾ ಮಾತನಾಡುತ್ತಾ ಬರ್ತಿದ್ದಾರೆ. ಕಳೆದ ವರ್ಷ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ "ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ, ಜನರಿಗೆ ಹೊಡೆದು ಸಾಯಿಸುವುದಕ್ಕೆ ಆಗಲ್ಲ" ಎಂದು ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಇಂಡಿಯಾ ಟುಡೇ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ರಮ್ಯಾ ಪ್ರಕರಣ ಸಂಬಂಧ ಅಸಮಾಧಾನ ಹೊರ ಹಾಕಿದ್ದರು. "ಸೋಶಿಯಲ್ ಮೀಡಿಯಾದಲ್ಲಿ ಯಾರಾದರೂ ಕೆಟ್ಟಾಗಿ ಕಾಮೆಂಟ್ ಮಾಡಿದರೆ ಬ್ಲಾಕ್ ಮಾಡುವ ಆಪ್ಷನ್ ಇದೆ. ನಾನು ಹಾಗೇ ಮಾಡುತ್ತೇನೆ. ನಾನು ಆ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ದೂರು ನೀಡಿದ್ದೇನೆ. ಅದಕ್ಕೆ ಈ ರೀತಿ ಅಪಹರಿಸಿ ಕರೆತಂದು ಬುದ್ದಿ ಕಲಿಸುವ ಪ್ರಯತ್ನ ಮಾಡಬಾರದಿತ್ತು" ಎಂದು ರಮ್ಯಾ ಹೇಳಿದ್ದರು.
ಮಾತು ಮುಂದುವರೆಸಿದ್ದ ನಟಿ ರಮ್ಯಾ "ದರ್ಶನ್ ಸುತ್ತಾ ಮುತ್ತಾ ಇರುವವರು ನಟೋರಿಯಸ್, ರೌಡಿಗಳ ತರಹ. ಅವರನ್ನು ಹಾಗೆ ಕರೆಯಬಹುದು. ಹಾಗಾಗಿ ಅವರೆಲ್ಲಾ ಎಲ್ಲರ ಗಮನ ಸೆಳೆಯುತ್ತಾರೆ. ದರ್ಶನ್‌ಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇಲ್ಲ. ಇಂಡಸ್ಟ್ರಿಯಲ್ಲಿ ಮತ್ತಷ್ಟು ಕಲಾವಿದರಿಗೆ ಇದಕ್ಕಿಂತ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ದರ್ಶನ್ ಜೈಲಿಗೆ ಹೋಗಬೇಕಿತ್ತು. ಹೋಟೆಲ್ ವೇಯ್ಟರ್‌ಗೆ ಹೊಡೆದಿದ್ದ ಘಟನೆ ಸಹ ನಡೆದಿತ್ತು" ಎಂದಿದ್ದರು.
ಇದೀಗ ನೇರವಾಗಿಯೇ "ಡಿಬಾಸ್" ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ. ಕಳೆದೆರಡು ದಿನಗಳಿಂದ ಆಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಮಾಡಲಾಗುತ್ತಿದೆ. ಅದನ್ನೆಲ್ಲಾ ಗಮನಿಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 'ದತ್ತ' ಚಿತ್ರದಲ್ಲಿ ದರ್ಶನ್ ಹಾಗೂ ರಮ್ಯಾ ನಾಯಕ-ನಾಯಕಿಯಾಗಿ ನಟಿಸಿದ್ದರು. ಸಿನಿಮಾ ತಕ್ಕ ಮಟ್ಟಿಗೆ ಸಕ್ಸಸ್ ಕಂಡಿತ್ತು.


Click it and Unblock the Notifications











