ಹಾಸ್ಟೆಲ್ ಹುಡುಗ್ರ ಕಿತಾಪತಿ.. ಲೆಕ್ಚರರ್ ಪದ್ಮಾವತಿ.. ಟ್ರೈಲರ್ ಮಸ್ತ್ ಐತಿ
ಸಣ್ಣ ಸಣ್ಣ ಸ್ಯಾಂಪಲ್‌ಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಭರವಸೆ ಮೂಡಿಸಿದೆ. ಜುಲೈ 21ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಟ್ರೈಲರ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ರಿಷಬ್ ಶೆಟ್ಟಿ, ರಮ್ಯಾ, ದಿಗಂತ್, ಲೂಸಿಯಾ ಪವನ್ ಕುಮಾರ್ ಈ ಚಿತ್ರದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅದ್ಧೂರಿ ಕಾರ್ಯಕ್ರಮದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಟ್ರೈಲರ್ ಲೋಕಾರ್ಪಣೆ ಆಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ 'ಪರಂವ' ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಒಂದು ಹಾಸ್ಟೆಲ್. ಅಲ್ಲಿ ಒಬ್ಬ ಕಿರಿಕ್ ವಾರ್ಡನ್. ಆತನ ಕಾಟದಿಂದ ತಪ್ಪಿಸಿಕೊಳ್ಳು ಹಾಸ್ಟೆಲ್ ಹುಡುಗರು ಮಾಡುವ ಕಿತಾಪತಿ, ಅದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಹೇಳ್ತಿದ್ದಾರೆ. ಇಷ್ಟಕ್ಕೆ ಕಥೆ ಮುಗಿಯಲ್ಲ, ಇನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತದೆ. ಒಟ್ನಲ್ಲಿ ಹಾಸ್ಟೆಲ್ ಹುಡುಗರ ಹಾವಳಿ ಯಾಕ್ ಕೇಳ್ತೀರಾ? ಬರೀ ಟ್ರೈಲರ್‌ನಲ್ಲೇ ಈ ಪಾಟಿ ಇದೆ. ಇನ್ನು ಇಡೀ ಸಿನಿಮಾ ನೋಡುವಾಗ ಸಖತ್ ಮಜಾ ಕೊಡೋದು ಗ್ಯಾರೆಂಟಿ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಮತ್ಯಾವುದೇ ಸಿನಿಮಾ ಟ್ರೈಲರ್ ಈ ರೀತಿ ಮೋಡಿ ಮಾಡಿರಲಿಲ್ಲ. ನೋಡಿದ ಪ್ರತಿಯೊಬ್ಬರು ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮಂಗಳೂರಿನ ಹಾಸ್ಟೆಲ್‌ವೊಂದರಲ್ಲಿ ಹಲವು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಬಹುತೇಕ ರಾತ್ರಿ ಹೊತ್ತಲ್ಲಿ ಸಿನಿಮಾ ಶೂಟ್ ಮಾಡಲಾಗಿದೆ. ಮೊದಲ ಪ್ರಯತ್ನದಲ್ಲೇ ನಿತಿನ್ ಕೃಷ್ಣಮೂರ್ತಿ ಗೆಲ್ಲುವ ಸುಳಿವು ಸಿಗುತ್ತಿದೆ. ಚಿತ್ರರಂಗದಿಂದ ದೂರಾಗಿದ್ದ ರಮ್ಯಾ ಕೂಡ ಒಪ್ಪಿದ್ದಾರೆ ಅಂದ್ರೆ ಸಿನಿಮಾದಲ್ಲಿ ಏನೋ ವಿಶೇಷತೆ ಇದೆ ಎನ್ನಿಸ್ತಿದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ದಿಗಂತ್, ಲೂಸಿಯಾ ಪವನ್ ಕೂಡ ಸಣ್ಣ ಸಣ್ಣ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಮಜಾ ಕೊಡೋಕೆ ಬರ್ತಿದ್ದಾರೆ. 500ಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಟೆಲ್ ಹುಡುಗರ ಜೀವನ, ಹಾಡು ಪಾಡು, ನೋವು ನಲಿವಿನ ಅನಾವರಣ ಈ ಸಿನಿಮಾ ಮಾಡಲಿದೆ. ಹಾಸ್ಟೆಲ್‌ನಲ್ಲಿ ಇರುವವರಿಗೆ, ಇದ್ದವರಿಗೆ ಈ ಸಿನಿಮಾ ಬಹಳ ಬೇಗ ಕನೆಕ್ಟ್ ಆಗುವಂತಿದೆ.

4 ನಿಮಿಷಗಳ ಟ್ರೈಲರ್ ನಿಮ್ಮನ್ನು ಹಾಸ್ಟೆಲ್ ಒಳಕ್ಕೆ ಕರೆದುಕೊಂಡು ಹೋಗುತ್ತದೆ. ಅರವಿಂದ್ ಎಸ್ ಕಶ್ಯಪ್ ಸಿನಿಮಾಟೋಗ್ರಫಿ ಹೈಲೆಟ್ ಎನಿಸಿಕೊಂಡಿದೆ. ಇನ್ನು ಅಜನೀಶ್ ಬಿಜಿಎಂ ಕೂಡ ಪ್ಲಸ್ ಆಗಿದೆ. ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯುವ ಜನತೆಗೆ ಇಷ್ಟವಾಗುವಂತಹ ಒಂದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಬರ್ತಿದೆ ಅನ್ನೋದು ಗೊತ್ತಾಗುತ್ತಿದೆ.
ನಟ ಪುನೀತ್ ರಾಜ್‌ಕುಮಾರ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪೋಸ್ಟರ್ ಲಾಂಚ್ ಮಾಡಿ ಶುಭ ಕೋರಿದ್ದರು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂಡಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಟ್ರೈಲರ್‌ನಿಂದಲೇ ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಜುಲೈ 21ಕ್ಕೆ ದೊಡ್ಡ ಓಪನಿಂಗ್ ಸಿಗುವ ಸುಳಿವು ಸಿಗುತ್ತಿದೆ.


Click it and Unblock the Notifications











